ಗ್ರಾಮಸ್ಥರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ್ದ ಕಾಂಗ್ರೆಸ್ ಮುಖಂಡ । ಶಿಷ್ಟಾಚಾರ ಉಲ್ಲಂಘನೆ ತಗಾದೆ ತೆಗೆದ ಶಾಸಕ ಮಂಜುಕನ್ನಡಪ್ರಭ ವಾರ್ತೆ ಅರಕಲಗೂಡು
ಕಾಂಗ್ರೆಸ್ ಮುಖಂಡ ಎಚ್.ಪಿ. ಶ್ರೀಧರ್ ಗೌಡ ಅವರು ಪಟ್ಟಣದ ದೊಡ್ಡಮ್ಮ ದೇವಸ್ಥಾನದಲ್ಲಿ ಗ್ರಾಮಸ್ಥರು ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಭಾನುವಾರ ಬಸ್ ಸಂಚಾರಕ್ಕೆ ಚಾಲನೆ ನೀಡಿದ್ದರು. ಶಾಸಕರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಶಾಸಕ ಎ. ಮಂಜು ಅವರು ಡಿಪೋ ವ್ಯವಸ್ಥಾಪಕ ಹನುಮಂತಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಪರಿಣಾಮ ಸೋಮವಾರ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಶಾಸಕರನ್ನು ಕರೆಸಿ ಒಂದೆರಡು ದಿನದಲ್ಲಿ ಬಸ್ ಸಂಚಾರ ಪುನಾರಂಭಿಸುವುದಾಗಿ ಡಿಪೋ ವ್ಯವಸ್ಥಾಪಕ ಹನುಮಂತಪ್ಪ ತಿಳಿಸಿದರು.ಗ್ರಾಮಸ್ಥರ ಮನವಿ ಮೇರೆಗೆ ಸಾರಿಗೆ ಸಚಿವರನ್ನು ಭೇಟಿ ಮಾಡಿ ಬಸ್ ಸೌಲಭ್ಯ ಒದಗಿಸಿರುವ ಕುರಿತು ಸಮಾಜ ಸೇವಕ ಸಿ.ಡಿ. ದಿವಾಕರ್ ಗೌಡ ಹಾಗೂ ಕಾಂಗ್ರೆಸ್ ಮುಖಂಡ ಶ್ರೀಧರ್ ಗೌಡ ಅವರ ಬೆಂಬಲಿಗರ ನಡುವೆ ಜಿದ್ದಾಜಿದ್ದಿನ ಚರ್ಚೆ ಉಂಟಾಗಿದೆ.
ಆದರೆ ಇಬ್ಬರು ನಾಯಕರ ನಡುವಿನ ಪ್ರತಿಷ್ಠೆ ಹಾಗೂ ಬಸ್ ಬಿಡಿಸಿದ ಕೀರ್ತಿ ತಮ್ಮದಾಗಿಸಿಕೊಳ್ಳುವ ಸ್ವಾರ್ಥದ ನಡುವೆ ಬಸ್ ಸಂಚಾರ ಸ್ಥಗಿತವಾಗಿದ್ದು, ಗ್ರಾಮಸ್ಥರಿಗೆ ಹಳೆಗಂಡನ ಪಾದವೇ ಗತಿ ಎನ್ನುವಂತಾಗಿರುವುದು ಮಾತ್ರ ದುರಂತ.
ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಹೋಬಳಿಯ ದುಮ್ಮಿಕೊಪ್ಪಲು ಗ್ರಾಮಕ್ಕೆ ಭಾನುವಾರ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಗೊಂಡಿತು.
ಬಳಿಕ ಕಾಂಗ್ರೆಸ್ ಮುಖಂಡ ಎಚ್.ಪಿ. ಶ್ರೀಧರ್‌ಗೌಡ ಅವರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿ ಬಸ್ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದರು.
ಭಾನುವಾರ ಬೆಳಿಗ್ಗೆ ಸಿ.ಡಿ. ದಿವಾಕರ್‌ಗೌಡ ಅವರು ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಗೌರವ ಸಲ್ಲಿಸಿದರು. ಅತ್ತ ಶ್ರೀಧರ್‌ಗೌಡ ಅವರು ಅರಕಲಗೂಡು ದೊಡ್ಡಮ್ಮ ದೇವಸ್ಥಾನದಲ್ಲಿ ಪ್ರಜೆ ಸಲ್ಲಿಸಿ ಗ್ರಾಮಸ್ಥರ ಸಮ್ಮುಖದಲ್ಲಿ ಬಸ್ ಸಂಚಾರಕ್ಕೆ ಚಾಲನೆ ನೀಡಿ, ಅದೇ ಬಸ್‌ನಲ್ಲಿ ಸಂಚರಿಸಿದ್ದರು.