ಮೌನ ಗುಡ್ಡೆಮನೆ ನಾಯಕಿ । ಸೋನು ನಿಗಮ್ ಹಾಡಿಗೆ ಕತ್ತರಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗಯೋಗರಾಜ್ ಸಿನಿಮಾಸ್ ಅರ್ಪಿಸುವ ಪರ್ಲ್ ಸಿನಿಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಮತ್ತು ವಿದ್ಯಾ ನಿರ್ಮಾಣದೊಂದಿಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೇನೂರು ಮನು ಹಾಗೂ ರಾಮಚಾರಿ ಧಾರಾವಾಹಿ ಖ್ಯಾತಿಯ ಮೌನ ಗುಡ್ಡೆಮನೆ ಅಭಿನಯದ ‘ಕುಲದಲ್ಲಿ ಕೀಳ್ಯಾವುದೋ’ ಹೆಸರಿನ ಚಿತ್ರ ಮೇ 23ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ನಾಯಕ ನಟ ಮಡೇನೂರು ಮನು ಹೇಳಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಚಿತ್ರದ ಶೀರ್ಷಿಕೆಯೇ ಇಲ್ಲಿ ಹೈಲೆಟ್ ಆಗಿದೆ. ಏಕೆಂದರೆ ಸತ್ಯ ಹರಿಶ್ಚಂದ್ರ ಚಿತ್ರದಲ್ಲಿನ ಕುಲದಲ್ಲಿ ಕೀಳ್ಯಾವುದೋ ಹಾಡು ಮನೆ ಮಾತು. ಆ ಹಾಡಿನ ಮೊದಲ ಪದವೇ ಈ ಚಿತ್ರದ ಶೀರ್ಷಿಕೆ. ಅಣ್ಣಾವ್ರ ಕುಟುಂಬದಿಂದಲೇ ನಮಗೆ ಈ ಶೀರ್ಷಿಕೆ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ತಿಳಿಸಿದರು.ಇದು ದೊಡ್ಡ ತಾರಾಗಣವೇ ಇರುವ ಚಿತ್ರವಾಗಿದೆ. ಯೋಗರಾಜ್ ಭಟ್, ತಬಲ ನಾಣಿ, ಕರಿಸುಬ್ಬು, ಸೋನಾಲ್ ಮೊಂತೆರೋ, ಶರತ್ ಲೋಹಿತಾಶ್ವ, ಹರೀಶ್ ರಾಜ್, ನಾಗೇಂದ್ರ ಅರಸ್ ಸೇರಿದಂತೆ ಹಲವು ಹೆಸರಾಂತ ಕಲಾವಿದರು ಚಿತ್ರದಲ್ಲಿದ್ದಾರೆ. ಪ್ರೇಕ್ಷಕರಿಗೆ ಇನ್ನೇನ್ನೋ ಸಂದೇಶ ಹೇಳಬೇಕು ಎನ್ನುವುದಕ್ಕಿಂತ ಮನರಂಜನೆ ನೀಡಬೇಕೆನ್ನುವ ಕಾರಣಕ್ಕೆ ಕಾಮಿಡಿಗೆ ಇಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ನಗಿಸುವುದರ ಮೂಲಕ ಜನಕ್ಕೆ ಒಂದು ಮಾಸ್ ಎಲಿಮೆಂಟ್ ಮೇಸೆಜ್ ಕೂಡ ಚಿತ್ರದಲ್ಲಿದೆ., ಆ ಮೇಸೆಜ್ ಏನು ಎನ್ನುವುದು ಚಿತ್ರ ನೋಡಿದಾಗಲೇ ಗೊತ್ತಾಗಲಿದೆ ಎಂದರು.
ಚಿತ್ರದಲ್ಲಿ ಒಂದು ಹಾಡು ಸೋನು ನಿಗಮ್ ಹಾಡಿದ್ದರು. ಇದ್ದನ್ನು ತೆಗೆದುಹಾಕಲಾಗಿದೆ. ಸೋನು ನಿಗಮ್ ಅವರು ಉತ್ತಮ ಗಾಯಕರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕನ್ನಡದ ಬಗ್ಗೆ ಆಡಿರುವ ಮಾತಿನಿಂದ ನಮಗೆ ತುಂಬಾನೇ ಬೇಸರವಾಗಿದೆ. ಅದೇ ಕಾರಣಕ್ಕೆ ನಮ್ಮ ಚಿತ್ರದಲ್ಲಿ ಅವರು ಹಾಡಿದ್ದ ಹಾಡನ್ನು ತೆಗೆದು ಹಾಕಿದ್ದೇವೆ. ಆ ಹಾಡನ್ನು ಈಗ ಚೇತನ್ ಅವರಿಂದ ಹಾಡಿಸಲಾಗಿದೆ ಎಂದರು.ಶ್ರೀನಿಧಿ ಸಂಸ್ಥೆಯ ಮಾಲತೇಶ್ ಮಾತನಾಡಿ, ಈ ಚಿತ್ರದ ಕುರಿತು ಮಂಗಳವಾರ ಶಿವಮೊಗ್ಗ ನಗರದ ಹಲವಡೆ ಪ್ರಚಾರ ನಡೆಸಲಾಗಿದೆ. ವಿಶೇ?ವಾಗಿ ಜೆಎನ್‌ಎನ್ ಸಿಸಿ, ಡಿವಿಎಸ್ ಹಾಗೂ ಎಟಿಎನ್ ಸಿಸಿ ಕಾಲೇಜಿನಲ್ಲಿ ಪ್ರಮೋಷನ್ ಪ್ರಚಾರ ನಡೆಸಲಾಯಿತು ಎಂದರು.
ಅವರೊಂದಿಗೆ ವಿನೋದ್ ಇದ್ದರು.