ಸಿದ್ಧರಾಮೇಶ್ವರ ಜಯಂತಿ, ಪ್ರತಿಭಾ ಪುರಸ್ಕಾರ
ಭೋವಿ ಜನಾಂಗ ಕಲ್ಲು ಒಡೆದು, ಕಟ್ಟಡ ನಿರ್ಮಾಣ ಮಾಡುವ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದೆ. ದೈಹಿಕ ಶ್ರಮದ ಅಲೆಮಾರಿ ಜೀವನದಿಂದಾಗಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿದೆ. ವಡ್ಡರ ಬದುಕು ಸುಧಾರಿಸಬೇಕು ಎಂದರೆ, ತಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ಕಲಿಸಬೇಕು. ಸಮುದಾಯಗಳಲ್ಲಿ ಶೈಕ್ಷಣಿಕ ಪ್ರಗತಿ ಆದಾಗ ಮಾತ್ರ, ಸಮಾಜ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಬಾಗಲಕೋಟೆ ಮತ್ತು ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಕಿವಿಮಾತುಗಳನ್ನು ಹೇಳಿದರು.
ಇಲ್ಲಿ ಗುರುವಾರ ಹಿರೇಮಾಗಡಿ ಮಣ್ಣುವಡ್ಡಿಗೇರಿ ಗ್ರಾಮದಲ್ಲಿ ಭೋವಿ ಸಮಾಜ ಹಮ್ಮಿಕೊಂಡಿದ್ದ ಸಿದ್ಧರಾಮೇಶ್ವರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಭೋವಿ ಸಮುದಾಯದ ಹಲವು ಪಂಗಡಗಳು ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಹಿಂದೆ ಉಳಿದಿವೆ. ಸರ್ಕಾರದ ಸವಲತ್ತುಗಳನ್ನು ಹಾಗೂ ರಾಜಕೀಯ ಸ್ಥಾನಮಾನಗಳನ್ನು ಪಡೆಯಬೇಕಾದರೆ, ಎಲ್ಲಾ ಪಂಗಡಗಳು ಸಂಘಟನೆಗೊಳ್ಳಬೇಕು ಎಂದರು.
ಮಣ್ಣುವಡ್ಡಿಗೇರಿಯಿಂದ, ದೇವಸ್ಥಾನದವರೆಗೂ ಮೆರವಣಿಗೆ ಮೂಲಕ ಅದ್ದೂರಿಯಾಗಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರನ್ನು ಕರೆತರಲಾಯಿತು.
ಶಿಕಾರಿಪುರ ವೀರಕ್ತ ಮಠದ ಚನ್ನಬಸವೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗಪ್ಪ ಮಣ್ಣುವಡ್ಡಿಗೇರಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.