ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ರಸ್ತೆ ದುರಸ್ತಿಗೆ ನಿರ್ಲಕ್ಷ್ಯ
ಗುಂಡಿಗಳು ಬಿದ್ದು ವರ್ಷಗಳೇ ಕಳೆದಿವೆ. ರಸ್ತೆ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರಯತ್ನ ಮಾಡುತ್ತಿಲ್ಲ. ಇದೇ ರಸ್ತೆಯಲ್ಲಿ ಮಕ್ಕಳು, ಹಿರಿಯರು, ವ್ಯಾಪಾರಿಗಳು ವಾಹನಗಳಲ್ಲಿ ನಿತ್ಯವೂ ಸಂಚರಿಸುತ್ತಾರೆ. ದೊಡ್ಡ ಪ್ರಮಾಣದ ಅನಾಹುತ ಸಂಭವಿಸುವ ಮುನ್ನ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ.ಈ ರಸ್ತೆಯಲ್ಲಿ ತಗ್ಗು ಗುಂಡಿಗಳು ತಲೆಯೆತ್ತಿದ್ದರಿಂದ ಬೈಕ್, ಆಟೊ, ಕಾರು ಮತ್ತಿತರ ವಾಹನಗಳ ಸಂಚಾರ ದುಸ್ಥರವಾಗಿದೆ. ಮಳೆಗಾಲದಲ್ಲಿ ರಸ್ತೆ ಮೇಲೆ ವಾಹನ ಚಲಾಯಿಸಬೇಕಾದರೆ ಹರಸಾಹಸ ಪಡಬೇಕಿದೆ. ಕೆಲವರು ಆಯತಪ್ಪಿ ರಸ್ತೆ ಮೇಲೆ ಬಿದ್ದು ಆಸ್ಪತ್ರೆಗೆ ದಾಖಲಾದ ಉದಾಹರಣೆಗಳಿವೆ. ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ನಾಯಕರು ಅಭ್ಯರ್ಥಿಗಳು ನೀಮುಂದು ನಾಮುಂದು ಎಂದು ಬಂದು ಮತ ಭಿಕ್ಷೆ ಬೇಡುತ್ತಾರೆ. ಇಲ್ಲ ಸಲ್ಲದ ಹುಸಿ ಭರವಸೆಗಳನ್ನು ನೀಡಿ ಹೋದರೆ ಮತ್ತೆ ಅವರ ದರ್ಶನವೇ ಇರಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ದುರಸ್ತಿಗೆ ಆದ್ಯತೆ ನೀಡಿಕಳೆದ ವಿಧಾನಸಭೆ ಚುನಾವಣೆಯಲ್ಲಿ ದೋಣಿಮಡಗು ಪಂಚಾಯಿತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ನಿರೀಕ್ಷೆಯಷ್ಟು ಮತಗಳು ಲಭಿಸದ ಕಾರಣ ಈ ಪಂಚಾಯಿತಿ ಮೇಲೆ ಶಾಸಕರು ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಪಂಚಾಯಿತಿಗೆ ಸಂಪರ್ಕ ಕಲ್ಪಿಸುವ ಗ್ರಾಮಗಳ ರಸ್ತೆ ಸ್ಥಿತಿ ದೇವರಿಗೇ ಪ್ರೀತಿ. ಕದರಿನತ್ತ ಗ್ರಾಮಕ್ಕೆ ಹೋಗಬೇಕಾದರೆ ಜೀವ ಕೈಯಲ್ಲಿಟ್ಟುಕೊಂಡೇ ಹೋಗಬೇಕು. ಈ ಗ್ರಾಮಕ್ಕೆ ಪಡಿತರ ಲಾರಿ ಹೋಗಲು ಪ್ರತಿ ತಿಂಗಳು ಹರಸಾಹಸ ಮಾಡಬೇಕಿದೆ. ಈಗಲಾದರೂ ಜನಪ್ರತಿನಿಧಿಗಳು ರಸ್ತೆಗಳಿಗೆ ಮೊದಲ ಆದ್ಯತೆ ನೀಡಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.