ಹುಬ್ಬಳ್ಳಿ: ಎರಡ್ಮೂರು ಸಲ ಮೇಯರ್ ಕರೆದರೂ ಸಾಮಾನ್ಯ ಸಭೆಗೆ ಬಾರದ ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕರು, ಪಾಲಿಕೆಯ ಕ್ಷಮಾಪಣೆ ಕೇಳಬೇಕು. ಅವರ ದುರ್ವರ್ತನೆ ವಿರುದ್ಧ ರಾಜ್ಯಪಾಲರು ಹಾಗೂ ಸರ್ಕಾರಕ್ಕೆ ಪತ್ರ ಬರೆಯಲು ಪಾಲಿಕೆ ಸಾಮಾನ್ಯಸಭೆ ಠರಾವ್ ಪಾಸ್ ಮಾಡಬೇಕು.
ಆದರೂ ಸಭೆಗೆ ಎಂಡಿ ಬಾರದೇ ತಮ್ಮ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಯನ್ನು ಕಳುಹಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಶಿವು ಹಿರೇಮಠ, ನಾವು ಹೇಳುವ ಸಮಸ್ಯೆ ಬಗೆಹರಿಸಲು ನಿಮ್ಮಿಂದ ಸಾಧ್ಯವೇ? ಎಂದು ಪ್ರಶ್ನಿಸಿದರು. ಆದರೆ, ಬಂದಂಥ ಅಧಿಕಾರಿ, ನೀವು ಹೇಳುವ ಸಮಸ್ಯೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸಬಹುದಷ್ಟೇ ಆದರೆ, ಪರಿಹರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಅದಕ್ಕೆ ತೀವ್ರ ತರಾಟೆ ತೆಗೆದುಕೊಂಡ ಹಿರೇಮಠ ಸೇರಿದಂತೆ ಇತರೆ ಸದಸ್ಯರು, ಸಮಸ್ಯೆ ಬಗೆಹರಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದಾದರೆ ಸಭೆಗೆ ಏಕೆ ಬಂದೀರಿ. ನಮ್ಮ ಸಮಸ್ಯೆ ಹೇಳಿ ಕಳುಹಿಸಲು ಕರೆಯಿಸಿಲ್ಲ. ಪರಿಹಾರ ಬೇಕು ಎಂದು ತಾಕೀತು ಮಾಡಿದರು.ಎಲ್ಲೆಂದರಲ್ಲಿ ಬಿಆರ್‌ಟಿಎಸ್ ಬಸ್‌ಗಳಿಗೆ ಬೆಂಕಿ ತಗುಲುತ್ತಿದೆ. ಎಕ್ಸಲ್ ಕಟ್ ಆಗುತ್ತಿವೆ. ಬ್ಯಾರಿಕೇಡ್‌ಗಳೆಲ್ಲ ಹಾಳಾಗಿವೆ. ಸಾರ್ವಜನಿಕರಿಗೆ ಸೇವೆಗಿಂತ ಸಮಸ್ಯೆಯನ್ನು ಜಾಸ್ತಿ ನೀಡುತ್ತಿವೆ. ಈ ಬಗ್ಗೆ ಚರ್ಚಿಸಲು ಎಂಡಿ ಅವರಿಗೆ ಮೇಯರ್ ಅವರೇ ಖುದ್ದಾಗಿ ಕರೆದರೂ ಅವರಿಂದ ಸ್ಪಂದನೆ ಇಲ್ಲ. ಪಾಲಿಕೆ ಸಾಮಾನ್ಯಸಭೆಗೆ ಗೌರವ ಇಲ್ಲವೇ? ನೀವು ಭಾಗವಹಿಸುವುದು ಬೇಡ ಹೊರಡಿ ಎಂದು ಕಳುಹಿಸಿದರು.
ಪೇಯ್ಡ್ ಪಾರ್ಕಿಂಗ್: ಈ ನಡುವೆ ನಗರದಲ್ಲಿ ಪೇಯ್ಡ್ ಪಾರ್ಕಿಂಗ್ ಬಗ್ಗೆ ಮತ್ತೆ ಅಸಮಾಧಾನ ವ್ಯಕ್ತವಾಯಿತು. ನಗರದ ದುರ್ಗದ ಬೈಲ್ ಸೇರಿದಂತೆ ವಿವಿಧೆಡೆ ಪಾಲಿಕೆಯಿಂದ ಗುತ್ತಿಗೆ ಪಡೆದಿರುವ ಪೇಯ್ಡ್ ಪಾರ್ಕಿಂಗ್‌ನ ಸಿಬ್ಬಂದಿ ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ದರ ನಿಗದಿಯಲ್ಲೂ ವ್ಯತ್ಯಾಸವಾಗುತ್ತದೆ. ಜತೆಗೆ ಈ ವಿಷಯವಾಗಿ ಜಗಳ ವಾಗ್ವಾದಗಳೆಲ್ಲ ಆಗುತ್ತಿವೆ. ಪೇಯ್ಡ್ ಪಾರ್ಕಿಂಗ್ ರದ್ದುಪಡಿಸಿಬಿಡಿ ಎಂದು ಸದಸ್ಯ ಶಿವು ಮೆಣಸಿನಕಾಯಿ ಆಗ್ರಹಿಸಿದರು. ಇದಕ್ಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಎಲಿಗಾರ ಆಕ್ಷೇಪಿಸಿ, ವರ್ಷಕ್ಕೆ ಲಕ್ಷಗಟ್ಟಲೇ ಹಣ ನೀಡಿ ಟೆಂಡರ್ ಕರೆದಿರುತ್ತಾರೆ. ಈಗ ಏಕಾಏಕಿ ರದ್ದುಪಡಿಸಿದರೆ ಅವರ ಗತಿ ಏನಾಗಬೇಡ? ಆದಕಾರಣ ರದ್ದುಪಡಿಸುವುದು ಬೇಡ ಎಂದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ದ್ವನಿಗೂಡಿಸಿದರು. ಬಳಿಕ ಪಾಲಿಕೆ ಅಧಿಕಾರಿಗಳು ಪಾರ್ಕಿಂಗ್ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ಒಂದು ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರೆ, ಆತನಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳುವಂತೆ ಆದೇಶಿಸಿ ಮೇಯರ್ ಠರಾವ್ ಪಾಸ್ ಮಾಡಿದರು.
ಪಾಲಿಕೆ ಸಭೆಯಲ್ಲಿ ಧರ್ಮಸ್ಥಳ ಪ್ರಕರಣ
ಧರ್ಮಸ್ಥಳದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಹೆಸರು ಹಾಳು ಮಾಡುವವರ ವಿರುದ್ಧ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಜರುಗಿಸುವಂತೆ, ಸರ್ಕಾರದ ಗಮನಕ್ಕೆ ತರಬೇಕೆಂದು ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಆಗ್ರಹಿಸಿದರು.
ಅನನ್ಯ ಭಟ್, ಸುಜಾತ ಭಟ್, ಮಾಸ್ಕ್ ಮ್ಯಾನ್ ಬಗ್ಗೆ ಎಸ್.ಐ.ಟಿ ಅಧಿಕಾರಿಗಳು ವರದಿ ಬಿಡುಗಡೆ ಮಾಡಬೇಕು, ಷಡ್ಯಂತ್ರ ಮಾಡಿದವರ ವಿರುದ್ಧ ಸೂಕ್ತ ಕ್ರಮಗಳನ್ನು ಜರುಗಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.