ಆರೋಗ್ಯ ಇಲಾಖೆಗೆ ಹಳೆಹುಬ್ಬಳ್ಳಿ ಆಸ್ಪತ್ರೆ ಹಸ್ತಾಂತರಕ್ಕೆ ನಿರ್ಣಯ

KannadaprabhaNewsNetwork |  
Published : Aug 26, 2025, 01:05 AM IST
ಹುಬ್ಬಳ್ಳಿಯ ಮಹಾನಗರ ಪಾಲಿಕೆ ಸಭಾಭವನದಲ್ಲಿ ಪಾಲಿಕೆ ಸಾಮಾನ್ಯಸಭೆ ನಡೆಯಿತು. | Kannada Prabha

ಸಾರಾಂಶ

ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾದ ವೇಳೆ, ಹಳೇ ಹುಬ್ಬಳ್ಳಿಯಲ್ಲಿ ಪಾಲಿಕೆ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಈ ಹಿಂದಿನ ಸಭೆಗಳಲ್ಲಿ ಆಸ್ಪತ್ರೆ ಹಸ್ತಾಂತರ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿ ರಾಜಕೀಯ ಕೆಸರೆಚಾಟಕ್ಕೆ ಕಾರಣವಾಗಿತ್ತು.

ಹುಬ್ಬಳ್ಳಿ: ಹಳೆಹುಬ್ಬಳ್ಳಿಯಲ್ಲಿನ ಪಾಲಿಕೆ ಆಸ್ಪತ್ರೆಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲು ಮಹಾನಗರ ಪಾಲಿಕೆಯು ಒಪ್ಪಿಗೆ ಸೂಚಿಸಿತು. ಮಹಾನಗರ ಪಾಲಿಕೆ ಆಸ್ಪತ್ರೆಯೆಂದೇ ನಾಮಕರಣ ಮಾಡಬೇಕು ಎಂದು ಇದೇ ವೇಳೆ ಮೇಯರ್‌ ಜ್ಯೋತಿ ಪಾಟೀಲ ರೂಲಿಂಗ್‌ ನೀಡಿದರು.

ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾದ ವೇಳೆ, ಹಳೇ ಹುಬ್ಬಳ್ಳಿಯಲ್ಲಿ ಪಾಲಿಕೆ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಈ ಹಿಂದಿನ ಸಭೆಗಳಲ್ಲಿ ಆಸ್ಪತ್ರೆ ಹಸ್ತಾಂತರ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿ ರಾಜಕೀಯ ಕೆಸರೆಚಾಟಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಆಗಿನ ಮೇಯರ್ ರಾಮಪ್ಪ ಬಡಿಗೇರ ನೇತೃತ್ವದಲ್ಲಿ ನಿಯೋಗ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿತ್ತು. ಹಳೇ ಹುಬ್ಬಳ್ಳಿ ಆಸ್ಪತ್ರೆಯ ಕಟ್ಟಡ ಕಾಮಗಾರಿ ಶೇ. 80ರಷ್ಟು ಮುಗಿದಿದ್ದು, ಇನ್ನೂ ಶೇ. 20 ರಷ್ಟು ಬಾಕಿ ಇದೆ. ಆಸ್ಪತ್ರೆ ನಿರ್ವಹಣೆಗೆ ಸರ್ಕಾರಕ್ಕೆ ನೀಡಲು ಅಭ್ಯಂತರವಿಲ್ಲ. ಆದರೆ, ಆಸ್ಪತ್ರೆಗೆ ಮಹಾನಗರ ಪಾಲಿಕೆ ಹೆಸರು ಇಡಬೇಕೆಂಬ ಆಗ್ರಹ ಕೇಳಬಂದಿತು. ಈ ಹಿನ್ನೆಲೆಯಲ್ಲಿ ಮೇಯರ್ ಠರಾವು ಪಾಸ್ ಮಾಡಿದರಲ್ಲದೇ, ಧಾರವಾಡ ಹೆರಿಗೆ ಆಸ್ಪತ್ರೆ ಹಸ್ತಾಂತರ ವಿಷಯ ಕೈಬಿಟ್ಟು ಆದೇಶಿಸಿದರು.

ಜಲಮಂಡಳಿ ಲೆಕ್ಕ; ಯಾವಾಗ ಪಕ್ಕಾ?: ಜಲಮಂಡಳಿ ಹಾಗೂ ಕೆಯುಡಿಎಫ್ಸಿ ಲೆಕ್ಕ ಹೊಂದಾಣಿಕೆ ವಿಷಯ ಸಭೆಯಲ್ಲಿ ಕಾವೇರಿದ ಚರ್ಚೆಗೆ ಕಾರಣವಾಗಿತು. 2008ರಲ್ಲಿ ನಿರಂತರ ನೀರು ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಇದೀಗ ಸಂಪೂರ್ಣ ಜವಾಬ್ದಾರಿಯನ್ನು ಕೆಯುಡಿಎಫ್ಸಿ ಹಾಗೂ ಎಲ್ ಆ್ಯಂಡ್ ಟಿ ಕಂಪನಿ ನಿರ್ವಹಣೆ ಮಾಡುತ್ತಿದೆ. ಆದರೆ, ಜಲಮಂಡಳಿಯಿಂದ ಹಸ್ತಾಂತರವಾದ ಸಾಮಾಗ್ರಿ, ಹಣದ ಬಗ್ಗೆ ಸೂಕ್ತ ಮಾಹಿತಿ ಇಲ್ಲ. ಹೀಗಾಗಿ ಕೆಯುಡಿಎಫ್ಸಿಯಲ್ಲಿ ಉಳಿದಿರುವ ಜಲಮಂಡಳಿಯ ಮೊತ್ತ ಎಷ್ಟು? ಅದರ ಲೆಕ್ಕ ಕೊಡಿ ಎಂದು ಸಭೆಯಲ್ಲಿ ಸದಸ್ಯ ತಿಪ್ಪಣ್ಣ ಮಜ್ಜಗಿ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೆಯುಡಿಎಫ್ಸಿ ಅಧಿಕಾರಿ, ಸದ್ಯ ಜಲಮಂಡಳಿಯಿಂದ ಹಸ್ತಾಂತರಗೊಂಡಿದ್ದ ₹13 ಕೋಟಿ ಠೇವಣಿ ಇಡಲಾಗಿದೆ. ಅದು ಈಗ ₹19.56 ಕೋಟಿ ಆಗಿದೆ. ಇದನ್ನು ಪಾಲಿಕೆ ವಂತಿಕೆ ಹಣಕ್ಕೆ ಜಮೆ ಮಾಡಲು ಯೋಜಿಸಲಾಗಿದೆ ಎಂದರು. ಆದರೆ, ವಿಷಯ ಪಟ್ಟಿಯಲ್ಲಿ ಡೆಮೋ ಜೋನ್ ಕಾಮಗಾರಿಗೆ ಎಂದಿದೆ. ಇದನ್ನು ಸೂಕ್ತವಾಗಿ ಪರಿಶೀಲಿಸಬೇಕು ಮತ್ತು ಸಂಪೂರ್ಣ ಲೆಕ್ಕ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ಈ ವೇಳೆ ಮುಂದಿನ ಸಭೆಗೆ ಸಂಪೂರ್ಣ ಲೆಕ್ಕ ಒಪ್ಪಿಸುವಂತೆ ಮೇಯರ್ ಆದೇಶ ಮಾಡಿದರು.

ಸಭಾಭವನ: ಪಾಲಿಕೆ ಸಭಾಭವನ ಕಟ್ಟಡ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿರುವ ಬಗ್ಗೆ ಸದಸ್ಯ ವೀರಣ್ಣ ಸವಡಿ ಅಸಮಾಧಾನ ವ್ಯಕ್ತಪಡಿಸಿದರು. ಪಾಲಿಕೆ ಸಭೆ ಮಾಡಲು ಕಟ್ಟಡ ನಿರ್ಮಿಸಲು ಆಗುತ್ತಿಲ್ಲ. ₹5 ಕೋಟಿ ಕಾಮಗಾರಿ ಏನಾಗಿದೆ? ಐತಿಹಾಸಿಕ ಮತ್ತು ಬ್ರಿಟಿಷ್ ಕಾಲದ ಕಟ್ಟಡ ತೆರವುಗೊಳಿಸುವ ಸಂಬಂಧ ತಡೆ ಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈಗಾಗಲೇ ಸಾಕಷ್ಟು ಐತಿಹಾಸಿಕ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಸಭಾಭವನ ಕಟ್ಟಡಕ್ಕೆ ಮಾತ್ರ ಬ್ರಿಟಿಷ್ ಕಟ್ಟಡ ಎಂದು ಹೇಳಲಾಗುತ್ತಿದೆ ಎಂದರೆ ಎಷ್ಟು ಸಮಂಜಸ. ಹೀಗಾಗಿ ಈ ಬಗ್ಗೆ ಸೂಕ್ತ ಕ್ರಮಕ್ಕೆ ಪಾಲಿಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ಆಗ ವಿರೋಧ ಪಕ್ಷದ ನಾಯಕ ಇಮ್ರಾನ್‌ ಯಲಿಗಾರ್‌, ನಿಮ್ಮದೇ ಪಕ್ಷ ಆಡಳಿತದಲ್ಲಿದೆ. ನಿಮಗೆ ನಿರ್ಮಿಸಲು ಸಾಧ್ಯವಾಗದಿದ್ದರೆ ನಮಗೆ ನೀಡಿ ನಾವು ನಿರ್ಮಿಸಿ ತೋರಿಸುತ್ತೇವೆ ಎಂದು ಕಾಲೆಳೆದರು. ಇದರಿಂದ ಎರಡು ಪಕ್ಷಗಳ ನಡುವೆ ವಾಗ್ವಾದ ನಡೆಯಿತು.

ಕೊನೆಗೆ ಸಭಾಭವನ ಕಟ್ಟಡ ನಿರ್ಮಾಣಕ್ಕೆ ಇರುವ ಅಡೆತಡೆ ನಿವಾರಿಸಿ ಕಟ್ಟಡ ನಿರ್ಮಿಸಲು ಕ್ರಮವಹಿಸಬೇಕೆಂದು ಮೇಯರ್ ಜ್ಯೋತಿ ಪಾಟೀಲ ಆದೇಶಿಸಿದರು.

ಸೆಪ್ಟಂಬರ್ ತಿಂಗಳಿಂದ ಎಲ್ಲ ವಾರ್ಡ್‌ಗಳಿಗೆ ಕನಿಷ್ಠ 4-5 ದಿನಕ್ಕೆ ನೀರು ಪೂರೈಕೆ ಸೇರಿದಂತೆ ಹತ್ತಾರು ವಿಷಯಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಕುಡಿಯುವ ನೀರು ಸೇರಿದಂತೆ ವಿವಿಧ ವಿಷಯಗಳಲ್ಲಿ ಅಧಿಕಾರಿಗಳ ತರಾಟೆ ತೆಗೆದುಕೊಂಡಿದ್ದು ಆಯ್ತು.

ಗಣೇಶ ಚತುರ್ಥಿ ಗಿಫ್ಟ್: ಮಹಾನಗರ ಪಾಲಿಕೆ ಮೇಯರ್ ₹25 ಸಾವಿರ, ಉಪಮೇಯರ್ ₹20 ಸಾವಿರ ಹಾಗೂ ಸದಸ್ಯರಿಗೆ ₹15 ಸಾವಿರ ಗೌರವ ಧನ ನೀಡಬೇಕು ಎಂದು ಮೇಯರ್ ಜ್ಯೋತಿ ಪಾಟೀಲ ಆದೇಶಿದರು. ಈ ಮೂಲಕ ಗಣೇಶ ಹಬ್ಬಕ್ಕೆ ಪಾಲಿಕೆ ಸದಸ್ಯರಿಗೆ ಗಿಫ್ಟ್ ದೊರೆಕಿದೆ. ಕಳೆದ ಐದು ವರ್ಷದ ಹಿಂದೆ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಅದಕ್ಕೆ ಸರ್ಕಾರದಿಂದ ಉತ್ತರ ಬಾರದ ಕಾರಣ ಸ್ಥಳೀಯವಾಗಿ ನಿರ್ಧಾರ ಕೈಗೊಳ್ಳಲಾಯಿತು.

ಬೀದಿ ನಾಯಿ ಹಾವಳಿ: ಒಂದು ವರ್ಷದಲ್ಲಿ 5595 ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. 9 ಜನ ಸಿಬ್ಬಂದಿಗಳಿದ್ದು, ಪ್ರತಿದಿನ 15 ನಾಯಿಗಳಿಗೆ ಮಾತ್ರ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಸದ್ಯ ಶಿವಳ್ಳಿಯಲ್ಲಿ 200 ಕ್ಯಾನಲ್ ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿದೆ. ಇದರಿಂದ ನಾಯಿಗಳ ನಿಯಂತ್ರಣವಾಗಲಿದೆ. ಇಷ್ಟಾದರೂ ಬೀದಿ ನಾಯಿಗಳ ಹಾವಳಿ ಕಡಿಮೆ ಏಕೆ ಆಗಿಲ್ಲ ಎಂದು ನಜೀರ್ ಅಹ್ಮದ್ ಹೊನ್ಯಾಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೇ, ಪರಿಹಾರ ಬಿಡುಗಡೆಗೆ ಆಗ್ರಹಿಸಿದರು. ಆಗ ಮೇಯರ್ 15 ದಿನದಲ್ಲಿ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌