ಗದಗ: ಇಂದಿನ ಆಧುನಿಕ ಸಮಾಜದಲ್ಲಿ ಪತಿ ಹಾಗೂ ಪತ್ನಿ ಒಬ್ಬರಿಗೊಬ್ಬರು ಅರಿತು ನಡೆದರೆ ಅವರ ಬಾಳು ಬಂಗಾರವಾಗುತ್ತದೆ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜನವರು ಹೇಳಿದರು.
ತಾಲೂಕಿನ ನಾಗಾವಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಪುರಾಣ ಕಾರ್ಯಕ್ರಮ ಮಂಗಲೋತ್ಸವದಲ್ಲಿ ಜರುಗಿದ ಸರ್ವಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವೀರೇಶ್ವರ ಪುಣ್ಯಾಶ್ರಮದ ಹಿಂದಿನ ಗುರುಗಳಾದ ಪಂ. ಪುಟ್ಟರಾಜ ಕವಿ ಗವಾಯಿಗಳವರ ಕಾಲದಿಂದಲೂ ನಾಗಾವಿ ಗ್ರಾಮವನ್ನು ತಮ್ಮ ತವರುಮನೆ ಎಂದೇ ಭಾವಿಸಿ, ಪ್ರತಿವರ್ಷ ಗ್ರಾಮದ ಜನತೆಗೆ ದರ್ಶನಾಶೀರ್ವಾದ ನೀಡುತ್ತಿದ್ದರು. ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ತಮ್ಮನ್ನು ನಾಗಾವಿ ಗ್ರಾಮಕ್ಕೆ ಆಹ್ವಾನಿಸುತ್ತಿರುವುದು ಸಂತಸದ ವಿಷಯ. ಮುಸ್ಲಿಂ ಸಮಾಜದ ಪೀರಸಾಬ ದಾವಲಸಾಬ ಪೀರಖಾನವರ ಅವರು ತಮಗೆ ತುಲಾಭಾರ ನೆರವೇರಿಸುವ ಮೂಲಕ ಭಾವೈಕ್ಯತೆಗೆ ಶ್ರೀಕಾರ ಹಾಕಿದ್ದಾರೆ ಎಂದರು.ತಾಪಂ ಮಾಜಿ ಅಧ್ಯಕ್ಷ ಬಸವಣ್ಣೆಪ್ಪ ಚಿಂಚಲಿ ಮಾತನಾಡಿ, ಜಾತಿ, ಪಂಥಗಳ ಭೇದವಿಲ್ಲದೆ ಇಡೀ ಗ್ರಾಮದ ಸದ್ಭಕ್ತರು ಒಂದುಗೂಡಿ, ಕಳೆದ 44 ವರ್ಷಗಳಿಂದ ಕಲಬುರ್ಗಿ ಶರಣಬಸವೇಶ್ವರ ಪುರಾಣ ಹಾಗೂ 14 ವರ್ಷಗಳಿಂದ ಜಾತ್ರಾ ಮಹೋತ್ಸವ ನಡೆಸಿಕೊಂಡು ಬರುತ್ತಿದ್ದಾರೆ. ಇಂತಹ ಆಧ್ಯಾತ್ಮಿಕ ಚಿಂತನೆಯ ಕಾರ್ಯಕ್ರಮಗಳು ಗ್ರಾಮಸ್ಥರಿಗೆ ಸದುಪಯೋಗವಾಗುತ್ತಿವೆ ಎಂದರು.
ಶರಣಬಸವೇಶ್ವರ ಪುರಾಣ ಪಠಣವನ್ನು ಗ್ರಾಮದ ಗಂಗಾಧರೇಶ್ವರ ಮಠದ ಮೃತ್ಯುಂಜಯಸ್ವಾಮಿ ಹಿರೇಮಠ, ಪುರಾಣ ಪ್ರವಚನವನ್ನು ಮಂಜಯ್ಯಸ್ವಾಮಿ ಹಿರೇಹಾಳ ನೆರವೇರಿಸಿದರು. ಸಂಗೀತ ಸೇವೆಯನ್ನು ನೀಡಿದ ಬಿ.ಎಸ್. ಹೊಂಬಳ ಹಾಗೂ ರಾಜಶೇಖರ ಸಂಗಳಕರ, ಸಂತೋಷಸ್ವಾಮಿ ಹಿರೇಮಠ, ತುಲಾಭಾರ ಸೇವೆಗೈದ ಪೀರಖಾನವರ ಕುಟುಂಬದವರನ್ನು ಸನ್ಮಾನಿಸಲಾಯಿತು.ಶರಣಬಸವೇಶ್ವರ ಪುರಾಣ ಸಮಿತಿ, ಬಸವೇಶ್ವರ ಭಜನಾ ಸಂಘ, ಗಂಗಾಧರೇಶ್ವರ ಯುವಕ ಮಂಡಳ, ಗ್ರಾಮದ ಸದ್ಭಕ್ತರು ಇದ್ದರು. ಮಲ್ಲಪ್ಪ ಗೋಲಪ್ಪನವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.