ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದ ಮಖ್ನಾ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಭಾನುವಾರ ಯಶಸ್ವಿಯಾಗಿದ್ದಾರೆ.ಮಾರ್ಚ್ ೩ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾನವರಿಗೆ ಉಪಟಳ ನೀಡುತ್ತಿದ್ದ ಮೂರು ಕಾಡಾನೆ ಸೆರೆ ಹಿಡಿಯಲು ತಿರ್ಮಾನಿಸಿದಂತೆ ಬೇಲೂರು ತಾಲೂಕಿನ ಬ್ಯಾದನೆ ಸಮೀಪ ವಿಕ್ರಾಂತ್ ಸೇರಿದಂತೆ ಮತ್ತೊಂದು ಕಾಡಾನೆ ಸೆರೆ ಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಜನ ಹಾಗೂ ಜಾನುವರುಗಳಿಗೆ ಉಪಟಳ ನೀಡುತ್ತಿದ್ದ ಮಖ್ನಾ ಕಾಡಾನೆ ಸೆರೆಗೆ ಉದ್ದೇಶಿಸಲಾಗಿತ್ತು. ಇದರಂತೆ ಸಕಲೇಶಪುರ ತಾಲೂಕಿನಲ್ಲಿ ಒಂಟಿಯಾಗಿ ಸಂಚರಿಸುತ್ತಿದ್ದ ಮಖ್ನಾ ಕಾಡಾನೆಯ ಚಲನವಲನದ ಬಗ್ಗೆ ಕಳೆದ ಎರಡು ದಿನಗಳಿಂದ ನಿಗಾ ವಹಿಸಿದ್ದ ಸಿಬ್ಬಂದಿ ಭಾನುವಾರ ಮುಂಜಾನೆ ಬೆಳಗೋಡು ಹೋಬಳಿ ಕಾಕನಮನೆ ಗ್ರಾಮ ಸಮೀಪ ಕಾಡಾನೆ ಸಂಚರಿಸುತ್ತಿರುವುದನ್ನು ಪತ್ತೆ ಹಚ್ಚಿದ ಸಿಬ್ಬಂದಿ ಸಾಕಾನೆಗಳಾದ ಏಕಲವ್ಯ, ಹರ್ಷ, ಧನಂಜಯ, ಪ್ರಶಾಂತ, ಕಂಜನ್ ಸೇರಿದಂತೆ ಏಳು ಆನೆಗಳ ಸಹಿತ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದರು. ಆದರೆ, ಸಾಕಾನೆಗಳ ಕಂಡ ತಕ್ಷಣವೇ ಸ್ಥಳದಿಂದ ಕಾಲ್ಕಿತ್ತ ಮಖ್ನಾ ಆನೆ ಸುಮಾರು ಮೂರು ಕಿ.ಮೀ. ಸಂಚರಿಸಿ ಹೆಬ್ಬನಹಳ್ಳಿ ಗ್ರಾಮ ಸಮೀಪದ ಪಾಳುತೋಟದಲ್ಲಿ ಅಡಗಿತ್ತು. ಮಖ್ನಾ ಆನೆ ಅಡಗಿರುವ ಪ್ರದೇಶವನ್ನು ನಿಖರವಾಗಿ ಪತ್ತೆ ಹಚ್ಚಿದ ಕಾಡಾನೆ ಕ್ಷೀಪ್ರ ಕಾರ್ಯಪಡೆ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದರಂತೆ ಸ್ಥಳಕ್ಕಾಗಮಿಸಿದ ಪಶುವೈದ್ಯಾಧಿಕಾರಿ ರಮೇಶ್ ಕುಮಾರ್ ಹಾಗೂ ಮುಜೀಭ್ ಇದ್ದ ತಂಡ ಬೆಳಿಗ್ಗೆ ೧೦.೧೫ಕ್ಕೆ ಯಶಸ್ವಿಯಾಗಿ ಚುಚ್ಚುಮದ್ದು ಹಾರಿಸಿದರು. ಆದರೆ, ಇದಕ್ಕೆ ಯಾವುದೇ ಪ್ರತಿರೋಧ ತೋರದೆ ನಿಂತಿದ್ದ ಮಖ್ನಾ ಆನೆಗೆ ಸಾಕಾನೆಗಳ ಸಹಾಯದಿಂದ ಹಗ್ಗ ಹಾಕಿ ರಸ್ತೆಗೆ ಎಳೆದು ತರುವ ಪ್ರಯತ್ನ ನಡೆಸಲಾಯಿತು. ಆದರೆ, ಬೇರೆಡೆ ಸಾಗಿಸವು ಪ್ರಯತ್ನಕ್ಕೆ ಸತತ ಮೂರು ಗಂಟೆಗಳ ಪ್ರಬಲ ಪ್ರತಿರೋಧ ತೋರಿದ್ದರಿಂದ ಸಿಬ್ಬಂದಿ ಹೈರಾಣಾಗುವಂತೆ ಮಾಡಿತ್ತು.
ನಂತರ ಗಂಟೆಗೊಂದರಂತೆ ಮತ್ತೆರಡು ಅರವಳಿಕೆ ಮದ್ದನ್ನು ನೀಡುವ ಮೂಲಕ ಆನೆಯನ್ನು ಮಂಕಾಗುವಂತೆ ಮಾಡಿದ ಸಿಬ್ಬಂದಿ ಮಧ್ಯಾಹ್ನ ೧.೧೫ಕ್ಕೆ ಸಾಕಾನೆಗಳ ಸಹಾಯದಿಂದ ಅತಿ ಸಾಹಸದ ಮೂಲಕ ರಸ್ತೆಗೆ ಎಳೆದು ತರಲಾಯಿತು. ನಂತರ ಸಾಕಾನೆ ಸಹಾಯದಿಂದ ಕಾಡಾನೆಗೆ ಬೆಲ್ಟ್ ಅಳವಡಿಸಿ ಕ್ರೇನ್ ಬಳಸಿ ಲಾರಿಗೆ ಹತ್ತಿಸಲಾಯಿತು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಮಖ್ನಾ ಆನೆ, ಲಾರಿ ಅಲುಗಾಡುವಂತೆ ಆರ್ಭಟಿಸಲಾರಂಭಿಸಿತ್ತು. ಆದರೂ ವಿಚಲಿತರಾಗದ ಸಿಬ್ಬಂದಿ ಆನೆ ಅಲುಗಾಡದಂತೆ ಕಬ್ಬಿಣದ ಸರಳುಗಳನ್ನು ಅಳವಡಿಸಿ ಶಿವಮೊಗ್ಗದ ಸಕ್ರೆಬೈಲ್ ಆನೆ ಶಿಬಿರಕ್ಕೆ ಸಾಗಿಸಲಾಯಿತು.ಕಾಡಾನೆ ಸಮಸ್ಯೆ ಸುಧಾರಣೆಗೆ ತರುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬೇಲೂರು ಹಾಗೂ ಸಕಲೇಶಪುರ ತಾಲೂಕಿನ ಜನರಿಗೆ ಉಪಟಳ ನೀಡುತ್ತಿರುವ ಭೀಟಮ್ಮ ಗುಂಪಿನ ಮುಖ್ಯ ಹೆಣ್ಣಾನೆಗೆ ಕಾಲರ್ ಐಡಿ ಅಳವಡಿಸಲಾಗುವುದು. ಇದಲ್ಲದೆ ಮೂಡಿಗೆರೆ ತಾಲೂಕಿನಲ್ಲಿ ಸಂಚರಿಸುತ್ತಿರುವ ಗಂಡಾನೆಗಳು ಜಿಲ್ಲೆಗೆ ಪ್ರವೇಶ ಪಡೆದ ತಕ್ಷಣ ಈ ಆನೆಗಳಿಗೂ ಕಾಲರ್ ಐಡಿ ಆಳವಡಿಸಲಾಗುವುದು ಎಂದರು. ಸಮಸ್ಯಾತ್ಮಕ ಮತ್ತೆರೆಡು ಕಾಡಾನೆ ಸೆರೆಗೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಸರ್ಕಾರದಿಂದ ಪ್ರತಿಕ್ರಿಯೆ ಬಂದ ತಕ್ಷಣ ಮತ್ತೇರಡು ಕಾಡಾನೆಗಳನ್ನು ಸೇರೆಹಿಡಿಯಲಾಗುವುದು ಎಂದರು. ಕಾರ್ಯಾಚರಣೆಯಲ್ಲಿ ಡಿ.ಎಫ್.ಒ ಸೌರಭ್ ಕುಮಾರ್, ಹಾಸನ ವಿಭಾಗದ ಎ.ಸಿ.ಎಫ್ ಮೋಹನ್, ಸಕಲೇಶಪುರ ವಿಭಾಗದ ಎ.ಸಿ.ಎಫ್ ಮಧುಸೂದನ್, ಚನ್ನರಾಯಪಟ್ಟಣ ವಿಭಾಗದ ಎ.ಸಿ.ಎಫ್ ಖಲಂದರ್, ಸಕಲೇಶಪುರ ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ಸೇರಿದಂತೆ ನೂರಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಕಾರ್ಯಾಚರಣೆ ವೀಕ್ಷಿಸಲು ನೂರಾರು ಗ್ರಾಮಸ್ಥರು ಸ್ಥಳದಲ್ಲಿ ನೆರದಿದ್ದರು.
ಜನರ ಅಸಮಾಧಾನ:ಸೆರೆ ಹಿಡಿದಿರುವ ಕಾಡಾನೆ ಅತಿ ಚಿಕ್ಕದಾಗಿದ್ದು ಸಮಸ್ಯೆ ನೀಡುತ್ತಿರುವ ಬೃಹತ್ ಕಾಡಾನೆ ಸೆರೆಗೆ ಬದಲು ಸಿಕ್ಕಿದ ಕಾಡಾನೆ ಸೆರೆ ಹಿಡಿಯಲಾಗಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಕಾರ್ಯಾಚರಣೆ ವೇಳೆ ಆಗಮಿಸಿದ್ದ ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದರು.* ಹೇಳಿಕೆ:1
ಮಾರ್ಚ್ ೩ರಂದು ನಡೆದ ಸಭೆಯಲ್ಲಿ ನಿರ್ಣಯಿಸಿದಂತೆ ಪ್ರತಿಯೊಂದು ಅಂಶಗಳನ್ನು ಹಂತಹಂತವಾಗಿ ಕಾರ್ಯಾಚರಣೆಗೆ ತರಲಾಗುತ್ತಿದೆ. ಈಗಾಗಲೇ ಕಳೆದ ವಾರ ಬೇಲೂರು ತಾಲೂಕಿನಲ್ಲಿ ಮಾನವರಿಗೆ ಮಾರಕವಾಗಿದ್ದ ಎರಡು ಕಾಡಾನೆಗಳನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ. ಭಾನುವಾರ ಸಕಲೇಶಪುರ ತಾಲೂಕಿನಲ್ಲಿ ಸುಮಾರು ೧೫ ವರ್ಷದ ಮಖ್ನಾ ಕಾಡಾನೆ ಸೆರೆ ಹಿಡಿಯುವ ಮೂಲಕ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ.- ಏಳುಕೊಂಡಲವಾಡ, ಸಿ.ಸಿ.ಎಫ್