ಅತ್ಯಾಚಾರ, ದೌರ್ಜನ್ಯ ಪ್ರಕರಣ ರಾಜಿ ಇತ್ಯರ್ಥ ಬದಲು ಕೇಸು ದಾಖಲಿಸಿ: ಡಿಸಿಪಿ

KannadaprabhaNewsNetwork |  
Published : Mar 24, 2025, 12:35 AM IST
ಡಿಸಿಪಿ ಸಿದ್ಧಾರ್ಥ್‌ ಗೋಯಲ್‌ ಸಭೆ ನಡೆಸುತ್ತಿರುವುದು | Kannada Prabha

ಸಾರಾಂಶ

ಮಂಗಳೂರು ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಭಾನುವಾರ ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಅತ್ಯಾಚಾರ, ಅತ್ಯಾಚಾರ ಯತ್ನ, ದೌರ್ಜನ್ಯ ಮುಂತಾದ ಪ್ರಕರಣಗಳನ್ನು ರಾಜಿ ಪಂಚಾಯ್ತಿಕೆಯಲ್ಲಿ ಬಗೆಹರಿಸಲು ಯತ್ನಿಸುವ ಬದಲು ಕಾನೂನು ರೀತ್ಯಾ ಕೇಸು ದಾಖಲಿಸಲು ಕ್ರಮ ಕೈಗೊಳ್ಳುವಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯಲ್‌ ಎಲ್ಲ ಠಾಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ನಗರದ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಭಾನುವಾರ ನಡೆದ ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.

ಹಿಂದಿನ ಸಭೆಯಲ್ಲಿ ಪ್ರಸ್ತಾಪಗೊಂಡಿದ್ದ ದಲಿತ ಯುವತಿ ಮೇಲೆ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯ ವಿಚಾರ ಠಾಣಾ ಹಂತದಲ್ಲೇ ಬಗೆಹರಿದಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದಾಗ ಅದಕ್ಕೆ ದಲಿತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಮಧ್ಯಪ್ರವೇಶಿಸಿ ಮಾತನಾಡಿದ ಡಿಸಿಪಿ ಸಿದ್ಧಾರ್ಥ ಗೋಯಲ್‌, ಇಂತಹ ಗಂಭೀರ ಪ್ರಕರಣಗಳನ್ನು ಠಾಣಾ ಹಂತದಲ್ಲೇ ಮಾತುಕತೆ ನಡೆಸಿ ಪರಿಹರಿಸಿದರೆ ಕೊನೆಗೆ ಅದೇ ಪೊಲೀಸರಿಗೆ ತಿರುಗುಬಾಣವಾಗುತ್ತದೆ. ಅಂಥದ್ದಕ್ಕೆ ಆಸ್ಪದ ನೀಡದಂತೆ ಕಾನೂನು ಪ್ರಕಾರ ಕೇಸು ದಾಖಲಿಸುವಂತೆ ಸಂತ್ರಸ್ತರಿಗೆ ಪೊಲೀಸರು ಸೂಚಿಸಬೇಕು ಎಂದರು.

ಎಸ್‌ಸಿ ಎಸ್‌ಟಿ ದೌರ್ಜನ್ಯ ಕಾಯ್ದೆ ಹಾಗೂ ಪೋಕ್ಸೋ ಕೇಸುಗಳಲ್ಲಿ ಎಸ್ಪಿ ಹಂತದ ಅಧಿಕಾರಿಯೇ ತನಿಖಾಧಿಕಾರಿ ಆಗಿರುತ್ತಾರೆ. ಹಾಗಾಗಿ ಈ ಎರಡು ಪ್ರಕರಣಗಳಿಗೂ ಎಸಿಪಿಯೇ ತನಿಖಾಧಿಕಾರಿ ಆಗಿರುತ್ತಾರೆ ಎಂದು ಅವರು ಹೇಳಿದರು.

ಆಟೋಗಳ ಚಾಲಕರ ಸಭೆ:

ಆಟೋರಿಕ್ಷಾ ಚಾಲಕರನ್ನು ಕರೆದಲ್ಲಿಗೆ ಬರುತ್ತಿಲ್ಲ. ಆಟೋ ನಿಲ್ದಾಣಗಳಲ್ಲಿ ಬೇರೊಂದು ಆಟೋಗಳು ಬಂದರೆ ತಗಾದೆ ತೆಗೆಯುತ್ತಾರೆ. ಕೆಲವು ಆಟೋ ಚಾಲಕರು ದುಂಡಾವರ್ತನೆ ನಡೆಸುತ್ತಿದ್ದಾರೆ. ಇವುಗಳಿಗೆ ಕಡಿವಾಣ ಹಾಕಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.

ಈ ಬಗ್ಗೆ ಪೊಲೀಸ್‌ ಕಮಿಷನರ್‌ರ ಸೂಚನೆ ಮೇರೆಗೆ ಶೀಘ್ರವೇ ಆಟೋರಿಕ್ಷಾ ಚಾಲಕ, ಮಾಲೀಕರ ಸಭೆ ಕರೆಯಲಾಗುವುದು. ಅವರ ವರ್ತನೆ ಬದಲಾಯಿಸಲು ಬುದ್ಧಿಮಾತು ಹೇಳಲಾಗುವುದು ಎಂದು ಡಿಸಿಪಿ ಸಿದ್ಧಾರ್ಥ ಗೋಯಲ್‌ ಹೇಳಿದರು.

ಹಾಸ್ಟೆಲ್‌ಗೆ ಅರ್ಜಿ ಅವಕಾಶ:

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತಿಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದಾಕ್ಷಣ ಮುಂದಿನ ವಿದ್ಯಾಭ್ಯಾಸಕ್ಕೆ ಹಾಸ್ಟೆಲ್‌ ಸೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಜೂನ್‌ನಲ್ಲಿ ಪಿಯು ಕಾಲೇಜು ಆರಂಭವಾಗುತ್ತದೆ, ಆಗಸ್ಟ್‌ ವೇಳೆಗೆ ಹಾಸ್ಟೆಲ್‌ಗೆ ಅರ್ಜಿ ಆಹ್ವಾನಿಸುತ್ತಾರೆ. ಇದರಿಂದಾಗಿ ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಪ್ರವೇಶ ಸಿಗುತ್ತಿಲ್ಲ. ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ದಲಿತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಇಲಾಖಾ ಅಧಿಕಾರಿ, ಕೈಬರಹದ ಮೂಲಕ ಮೊದಲು ಅರ್ಜಿ ನೀಡಲು ಅವಕಾಶ ಇದೆ. ಬಳಿಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದರು.

ಪೊಲೀಸ್‌ ಕಮಿಷನರ್‌ ಸಭಾಂಗಣದಲ್ಲಿ ಅಂಬೇಡ್ಕರ್‌ ಚಿತ್ರ ಅಳವಡಿಸುವಂತೆ ದಲಿತ ಮುಖಂಡರು ಒತ್ತಾಯಿಸಿದರು. ನಗರದ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಲಿಫ್ಟ್‌ ಸೌಲಭ್ಯಕ್ಕೆ ಆಪರೇಟರ್‌ನ್ನು ನೇಮಿಸಬೇಕು. ಕೇಂದ್ರ ಮಾರುಕಟ್ಟೆಯಲ್ಲಿ 15 ದಿನದಲ್ಲಿ ಪೊಲೀಸ್‌ ಔಟ್‌ಪೋಸ್ಟ್‌ ರಚನೆಗೆ ಬೇಡಿಕೆ ವ್ಯಕ್ತಗೊಂಡಿತು.

ಸಂಚಾರ ವಿಭಾಗದ ಡಿಸಿಪಿ ರವಿಶಂಕರ್‌ ಇದ್ದರು. ಎಸಿಪಿ ಧನ್ಯಾ ನಾಯಕ್‌ ನಿರೂಪಿಸಿದರು. ...................

ಎಸ್‌ಸಿ ಎಸ್‌ಟಿ ಕೇಸು ನಾಗರಿಕ ಹಕ್ಕು ಠಾಣೆಗೆ

ಎಸ್‌ಸಿ ಎಸ್‌ಟಿ ದೌರ್ಜನ್ಯಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣಗಳ ದೂರು ಇನ್ನು ಮುಂದೆ ಸರ್ಕಾರದ ಸೂಚನೆಯಂತೆ ಆಯಾ ಜಿಲ್ಲೆಗಳಲ್ಲಿ ಹೊಸದಾಗಿ ಸ್ಥಾಪನೆಯಾಗುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಠಾಣೆಗಳಲ್ಲಿ ದಾಖಲಾಗಲಿದೆ.

ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ ಹಾಗೂ ದ.ಕ. ಜಿಲ್ಲೆಗೆ ಸಂಬಂಧಿಸಿ ಪ್ರಾದೇಶಿಕ ಕಚೇರಿ ಕೂಡ ಮಂಗಳೂರಿನಲ್ಲೇ ಇರಲಿದೆ. ದ.ಕ. ಜಿಲ್ಲೆಯ ಕಚೇರಿಯೂ ಮಂಗಳೂರಿನ ಮೂಡಾ ಕಟ್ಟಡದಲ್ಲೇ ಒಂದೇ ಕಡೆ ಇರಲಿದೆ. ಹಾಲಿ ಕಚೇರಿಯನ್ನು ಪೊಲೀಸ್‌ ಠಾಣೆಯಾಗಿ ಪರಿವರ್ತಿಸಲು ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಸಿಬ್ಬಂದಿ ನೇಮಕ, ಮೂಲಸೌಕರ್ಯಗಳ ಅಳವಡಿಕೆ ಪೂರ್ಣಗೊಂಡು ಏಪ್ರಿಲ್‌ನಿಂದ ಕಾರ್ಯಾರಂಭಿಸಲು ಉದ್ದೇಶಿಸಲಾಗಿದೆ ಎಂದು ಸಭೆಗೆ ಅಧಿಕಾರಿ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ