ಯುದ್ಧ ನಿಲ್ಲಿಸಿದ್ದೇಕೆ, ಮೋದಿ ಹೇಳಲೇ ಇಲ್ಲ : ಸಿ.ಎಂ.ಇಬ್ರಾಹಿಂ

KannadaprabhaNewsNetwork |  
Published : May 20, 2025, 01:31 AM ISTUpdated : May 20, 2025, 12:29 PM IST
19ಕೆಎಂಎನ್‌ಡಿ-6ಮಂಡ್ಯದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭನದಲ್ಲಿ ಸ್ವಾಭಿಮಾನಿ-ಸ್ವಾವಲಂಬಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಜನತೆಯ ನಡುವೆ ಜನತಾ ಪ್ರಣಾಳಿಕೆ ಚರ್ಚೆ ಕಾರ್ಯಕ್ರಮವನ್ನು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಉದ್ಘಾಟಿಸಿದರು. | Kannada Prabha

ಸಾರಾಂಶ

ಐದು ಗ್ಯಾರಂಟಿ ಯೋಜನೆಗಳು ಮುಂದಿನ ಚುನಾವಣೆಗೆ ಲಂಚದ ರೂಪದಲ್ಲಿವೆ. ಅಡ್ವಾನ್ಸ್ ಆಗಿ ಜನರಿಗೆ ಮಂಕುಬೂದಿ ಎರಚುತ್ತಿರುವ ಕಾರ್ಯಕ್ರಮ . ಇವೆಲ್ಲವೂ ಓಟಿಂಗ್ ಗಿಮಿಕ್ ಎಂದು ಕುಟುಕಿದರು.

 ಮಂಡ್ಯ : ಪಾಕಿಸ್ತಾನದ ಜೊತೆ ಯುದ್ಧ ನಿಲ್ಲಿಸಿದ್ದೇಕೆ, ಅಮೆರಿಕಾ ಅಧ್ಯಕ್ಷ ಟ್ರಂಪ್ ಹೇಳಿದ ಕಾರಣಕ್ಕೆ ಯುದ್ಧ ನಿಲ್ಲಿಸಿದರಾ. ಇದರ ಬಗ್ಗೆ ಇದುವರೆಗೂ ಮೋದಿ ಮಾತನಾಡಿಲ್ಲ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಟೀಕಿಸಿದರು.

ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸ್ವಾಭಿಮಾನಿ- ಸ್ವಾವಲಂಬಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಜನತೆಯ ನಡುವೆ ಜನತಾ ಪ್ರಣಾಳಿಕೆ ಚರ್ಚೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಹಲ್ಗಾಂ ದಾಳಿಯಲ್ಲಿ 26 ಜನ ಸತ್ತರು. ಅವರನ್ನು ಹೊಡೆದವರು ಯಾರು, ಅವರನ್ನು ಹಿಡಿದರಾ, ಅವರ ಹೆಸರೇನು ಎನ್ನುವುದು ಇದುವರೆಗೂ ಯಾರಿಗೂ ಗೊತ್ತಿಲ್ಲ. ಸುಮ್ಮನೆ ಬಡ ಬಡಾ ಅಂತಾ ಪಾಕಿಸ್ತಾನದ ಮೇಲೆ ಬಾಂಬ್‌ ಹಾಕಿದರು. ಅಮೆರಿಕಾ ಅಧ್ಯಕ್ಷ ಟ್ರಂಪ್‌ ಹೇಳಿದ ತಕ್ಷಣ ಯುದ್ಧ ನಿಂತೋಯ್ತು. ಯಾವನು ಅವನು ಟ್ರಂಪ್‌. ನಮ್ಮ ಮಾವನಾ, ಚಿಕ್ಕಪ್ಪನ ಮಗನಾ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಇಂದಿರಾಗಾಂಧಿ ಪ್ರಧಾನಿಯಾಗಿದ್ದ ವೇಳೆ ನಮ್ಮ ಸೈನ್ಯ 24 ಗಂಟೆಯಲ್ಲಿ 98 ಸಾವಿರ ಪಾಕಿಸ್ತಾನಿ ಸೈನಿಕರನ್ನು ಸೆರೆಹಿಡಿದು ತಂದಿದ್ದರು. ಆಗಿನ ಪಾಕ್‌ ಪ್ರಧಾನಿ ಜುಲ್ಫೀಕರ್‌ ಭುಟ್ಟೋ ಬಂದು ಇಂದಿರಾಗಾಂಧಿ ಕಾಲಿಗೆ ಬಿದ್ದು ತಪ್ಪಾಯಿತು ಅಂತ ಹೇಳಿ ತನ್ನ ಸೈನಿಕರನ್ನು ಕರೆದುಕೊಂಡು ಹೋಗಿದ್ದ ಎಂದು ಹೇಳಿದರು.

ಭಾರತ- ಪಾಕಿಸ್ತಾನದ ಮಧ್ಯೆ ಇದುವರೆಗೆ ಯಾವ ದೇಶವೂ ಮೂಗು ತೂರಿಸಿರಲಿಲ್ಲ. ಆದರೆ, ಈ ಟ್ರಂಪ್‌ ಪದೇ ಪದೇ ನಾನು ಯುದ್ಧ ನಿಲ್ಲಿಸಿದೆ ಅಂತ ಹೇಳುತ್ತಿದ್ದಾರೆ. ಆದರೆ, ಇದುವರೆಗೂ ಮೋದಿ ಅದರ ಬಗ್ಗೆ ಉಸಿರುಬಿಡುತ್ತಿಲ್ಲ. ಯುದ್ಧ ಏಕೆ ನಿಲ್ಲಿಸಿದೆವು ಎಂದು ಹೇಳುತ್ತಿಲ್ಲ. ಪಾಕಿಸ್ತಾನದವರು ಬಂದು ಸುಸೂತ್ರವಾಗಿ ನಮ್ಮನ್ನು ಹೊಡೆದು ಹೋದರು. ಭಾರತೀಯರಾಗಿ ನಾವು ಅವರನ್ನು ಹಿಡಿಯಲೂ ಇಲ್ಲ, ಹೊಡೆಯಲೂ ಇಲ್ಲ ಎಂದು ಕುಟುಕಿದರು.

ಹಿಂದೆ ಪ್ರಧಾನಿ ಮೋದಿ ಅವರು ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಮನೆಗೆ ಹೋಗಿದ್ದರು. ಬಿರಿಯಾನಿ ತಿನ್ನೋಕೆ ಹೋಗಿದ್ರಾ. ನಿಮ್ಮನ್ನು ಅವರು ಕರೆದಿದ್ದರೇ. ಷರೀಫ್‌ ಮನೆಗೆ ಏಕೆ ಹೋದೆ ಅಂತ ಇವತ್ತಿನವರೆಗೂ ಮೋದಿ ಹೇಳಲಿಲ್ಲ ಎಂದು ದೂಷಿಸಿದರು.

ಜೈಲಿಗೆ ಹೋಗಿ ಬಂದವರೇ ಇವತ್ತಿನ ದೇಶದ ನಾಯಕರಾಗುತ್ತಿದ್ದಾರೆ. ಹಣವಿಲ್ಲದೆ ಚುನಾವಣೆ ನಡೆಸಲಾಗುವುದಿಲ್ಲ ಎಂಬ ಪರಿಸ್ಥಿತಿ ಇದೆ. ಇದು ಬದಲಾಗಬೇಕು. ಬದಲಾಗಬೇಕಾದರೆ ಜನರಲ್ಲಿ ಜಾಗೃತಿ ಮೂಡಬೇಕು. ಸಭೆ- ಸಮಾರಂಭಗಳಿಗೆ ಬಂದ ಜನರಿರಬೇಕು. ತಂದ ಜನರಿರಬಾರದು ಎಂದು ಹಾಸ್ಯಮಯವಾಗಿ ಹೇಳಿದರು.

ಒಂದು ಎಕರೆ ಭತ್ತ, ಕಬ್ಬು ಬೆಳೆಯಲು ಎಷ್ಟು ಖರ್ಚಾಗುತ್ತದೆ ಎಂದು ಗೊತ್ತಿಲ್ಲದವರೆಲ್ಲಾ ಮಂತ್ರಿಗಳಾಗಿದ್ದಾರೆ. ಬೆಳೆ ಬಂದಾಗ ಬೆಲೆ ಇಲ್ಲ, ಬೆಲೆ ಇದ್ದಾಗ ಬೆಳೆ ಇರೋಲ್ಲ. ಇದರ ಬಗ್ಗೆ ಸರ್ಕಾರ ಅಧ್ಯಯನ ಮಾಡಿದೆಯಾ. ಇದನ್ನು ಆಳವಾಗಿ ಅಧ್ಯಯನ ಮಾಡುವುದಕ್ಕಾಗಿ ಪ್ರಣಾಳಿಕೆ ಮಾಡಿದ್ದೇವೆ. ಇದೇ ನಮಗೆ ಇರುವ ಬೈಬಲ್‌, ನಮಗಿರುವ ಸಿದ್ಧಾಂತ. ಇದು ಜಾರಿಯಾದರೆ ರೈತರು ಬೇಡುವ ಸ್ಥಿತಿಯಲ್ಲಿ ಇರುವುದಿಲ್ಲ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ರಾಜಕೀಯ- ಅಧಿಕಾರ, ಸ್ಥಾನಮಾನಗಳು ಲಭ್ಯವಾಗುತ್ತಿವೆ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಆಶಯಗಳ ಈಡೇರಿಕೆಗಾಗಿ ಮತ್ತು ರಾಜ್ಯದಲ್ಲಿ ಹೊಸ ಬದಲಾವಣೆಗಾಗಿ ಪ್ರಾದೇಶಿಕ ಪಕ್ಷವೊಂದು ಸ್ಥಾಪನೆಯಾಗಲಿದೆ ಎಂದು ನುಡಿದರು.

ರಾಜ್ಯದಲ್ಲಿ ೨ ಲಕ್ಷ ಉದ್ಯೋಗಗಳು ಖಾಲಿ ಬಿದ್ದಿವೆ, ಸರ್ಕಾರಗಳು ಭರ್ತಿ ಮಾಡಿಕೊಳ್ಳುತ್ತಿಲ್ಲ, ನಿರುದ್ಯೋಗಿಗಳು ಏನು ಆಗಬೇಕು, ಮಹಿಳೆಯರಿಗೆ ೨ ಸಾವಿರ ಹಣ ನೀಡುವ ಬದಲು ಸ್ತ್ರೀಶಕ್ತಿ ಗುಂಪುಗಳಿಗೆ ತಲಾ 10  ಕೋಟಿ ರು. ಹಣ ನೀಡಿ, ಉದ್ಯೋಗ- ಉದ್ಯಮ ಸೃಷ್ಟಿಯಾಗುತ್ತವೆ ಎಂದು ಸಲಹೆ ನೀಡಿದರು.

ನಂತರ ಮಾತನಾಡಿದ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ೨೦೨೮ಕ್ಕೆ ಹೊಸ ಪ್ರಾದೇಶಿಕ ಪಕ್ಷ ಅಧಿಕಾರ ಹಿಡಿಯುವ ಸಾಮರ್ಥ್ಯಕ್ಕೆ ಜನತೆಯು ಬೆಂಬಲ ನೀಡಬೇಕು, ಕಾಂಗ್ರೆಸ್, ಜೆಡಿಎಸ್- ಬಿಜೆಪಿ ತೊಲಗಿಸಿ, ನಾವು ನೀವು ಅಧಿಕಾರ ಹಿಡಿಯಬೇಕಿದೆ ಎಂದು ಕಿವಿಮಾತು ಹೇಳಿದರು.

ಐದು ಗ್ಯಾರಂಟಿ ಯೋಜನೆಗಳು ಮುಂದಿನ ಚುನಾವಣೆಗೆ ಲಂಚದ ರೂಪದಲ್ಲಿವೆ. ಅಡ್ವಾನ್ಸ್ ಆಗಿ ಜನರಿಗೆ ಮಂಕುಬೂದಿ ಎರಚುತ್ತಿರುವ ಕಾರ್ಯಕ್ರಮಗಳಾಗಿವೆ. ಇವೆಲ್ಲವೂ ಓಟಿಂಗ್ ಗಿಮಿಕ್ ಎಂದು ಕುಟುಕಿದರು.

ಹೊಸ ಬದಲಾವಣೆ ತರದಿದ್ದರೆ ನೀವು ನಾವು ಹೀಗೇ ಇರುತ್ತೇವೆ, ಅನಾಹುತಕಾರಿ ಬೆಳೆವಣಿಗೆಗೆ ರಹದಾರಿಯಾಗುತ್ತದೆ. ಬಡವರು ಬಡವರಾಗಿಯೇ ಇರುತ್ತಾರೆ, ಶ್ರೀಮಂತರು ಶ್ರೀಮಂತರಾಗಿಯೇ ಬೆಳೆಯುತ್ತಾರೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ದಸಂಸ ಮುಖಂಡ ವೆಂಕಟಗಿರಿಯಯ್ಯ, ಎಐಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಎಂ.ಗೋಪಿನಾಥ್, ಜಿಲ್ಲಾಧ್ಯಕ್ಷ ಕೆ.ಎಂ.ಅನಿಲ್‌ಕುಮಾರ್, ಉಪಾಧ್ಯಕ್ಷ ಬಿ.ಆನಂದ್ ಮದ್ದೂರು,ಮಹಿಳಾ ಘಟಕ ಅಧ್ಯಕ್ಷೆ ಸುಶ್ಮಿತಾ, ದಸಂಸ ಮುಖಂಡ ಬ್ಯಾಡರಹಳ್ಳಿ ಪ್ರಕಾಶ್, ಆರ್.ಪಿ.ಐ. ರಾಷ್ಟ್ರೀಯ ಅಧ್ಯಕ್ಷ ಎನ್.ಮೂರ್ತಿ, ರಾಜ್ಯಾಧ್ಯಕ್ಷ ಮೋಹನ್‌ರಾಜ್, ಶ್ರೀನಿವಾಸ್ ಮತ್ತಿತರರಿದ್ದರು.

PREV
Read more Articles on