ಕನ್ನಡಪ್ರಭ ವಾರ್ತೆ ಮಂಗಳೂರು
ಆಪಲ್ ಕಂಪೆನಿಯ ಐಫೋನ್ ಖರೀದಿ ಮಾಡಿದ ಒಂದೆರಡು ವರ್ಷದಲ್ಲೇ ಬಳಕೆ ಮಾಡಲು ಅಸಾಧ್ಯವಾಗುವಂತೆ ದೋಷ ಕಾಣಿಸಿದ್ದು ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆ ಮಹತ್ವದ ತೀರ್ಪು ನೀಡಿದೆ. ಮಂಗಳೂರು ಬಿಜೈ ನಿವಾಸಿ ಸಂಪತ್ ಕುಮಾರ್ ಅವರು ಪ್ರತಿಷ್ಠಿತ ಎಲೆಕ್ಟ್ರಾನಿಕ್ ಮಳಿಗೆಯಾದ ರಿಲಯನ್ಸ್ ಡಿಜಿಟಲ್ಸ್ ನಿಂದ ದುಬಾರಿ ಐಫೋನ್ ಖರೀದಿ ಮಾಡಿದ್ದರು. ಖರೀದಿ ಮಾಡಿದ ಕೆಲವು ಸಮಯದಲ್ಲೇ ಐಫೋನ್‌ನಲ್ಲಿ ದೋಷ ಕಂಡು ಬಂದಿದ್ದು ಅದರ ಡಿಸ್ಪ್‌ಪ್ಲೇ ಹಾಳಾಗಿತ್ತು. ಎದುರುದಾರರಲ್ಲಿ ಹೋದಾಗ ಎದುರುದಾರರು ಸರ್ವಿಸ್ ಸೆಂಟರ್‌ಗೆ ಅದನ್ನು ಕೊಡಲು ಹೇಳಿದರು.ಅದರಂತೆ ಎರಡನೇ ಎದುರುದಾರರಾದ ಬಲ್ಮಠದ ಮಾಪಲ್ ಎಕ್ಸ್ ಎನ್ನುವ ಸರ್ವಿಸ್ ಸೆಂಟರ್‌ಗೆ ಅದನ್ನು ರಿಪೇರಿಗೆ ನೀಡಿದ್ದರು. ಆದರೆ ರಿಪೇರಿಗೆ ದೊಡ್ಡ ಮೊತ್ತವನ್ನು ಹೇಳಿದ ಎರಡನೇ ಎದುರುದಾರರು ಮೊಬೈಲ್ ಫೋನ್ ವಾರಂಟಿ ಕಾಲಮಿತಿಯೊಳಗೆ ಇಲ್ಲ, ಹಾಗಾಗಿ ಉಚಿತವಾಗಿ ರಿಪೇರಿ ಮಾಡಲು ಆಗುವುದಿಲ್ಲ ಎಂದರು. ಸ್ವಲ್ಪ ಕಾಲ ಅದನ್ನು ಇಟ್ಟುಕೊಂಡು ಇದು ಸರಿಪಡಿಸಲಾಗದ ದೋಷ ಎಂದು ಮೊಬೈಲ್ ಹಿಂದಿರುಗಿಸಿದರು. ದೂರುದಾರರು ಮೂರನೇ ಎದುರುದಾರರಿಗೆ ಅಂದರೆ ಆಪಲ್ ಕಂಪೆನಿಗೆ ದೋಷಪೂರಿತ ಐಫೋನ್ ಬಗ್ಗೆ ಮೇಲಿಂದ ಮೇಲೆ ಈಮೇಲ್‌ಗಳನ್ನು ಕಳಿಸಿದ್ದರೂ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿರಲಿಲ್ಲ. ಹಾಗಾಗಿ ದೂರುದಾರರು ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆಗೆ ದೂರು ಸಲ್ಲಿಸಿದ್ದರು. ಆಪಲ್ ಕಂಪೆನಿಯವರು ಹಾಜರಾಗಿ ಐಫೋನ್ ಖರೀದಿ ಮಾಡಿ ಒಂದು ವರ್ಷ ಕಳೆದದ್ದರಿಂದ ಫೋನ್ ರಿಪೇರಿ ಸಾಧ್ಯವಿಲ್ಲ ಎಂದು ವಾದಿಸಿದ್ದರು. ದೂರುದಾರರ ಅಹವಾಲು ಮತ್ತು ಪ್ರತಿವಾದಿಗಳ ವಾದವನ್ನು ಪರಿಶೀಲಿಸಿ ಗ್ರಾಹಕ ನ್ಯಾಯಾಲಯ ದೂರನ್ನು ಪರಿಗಣಿಸಿದೆ. ಮೂರೂ ಎದುರುದಾರರು ಒಟ್ಟಾಗಿ ಆಪಲ್ ಐಫೋನ್‌ನ ಬಾಬ್ತು 81,800 ರು. ಬಡ್ಡಿ ಸಮೇತ ದೂರುದಾರರಿಗೆ ಕೊಡಬೇಕು. ದಾವೆ ಖರ್ಚು ಹಾಗೂ 10 ಸಾವಿರ ರು. ಪರಿಹಾರ ನೀಡಬೇಕು ಎಂದು ಗ್ರಾಹಕ ನ್ಯಾಯಾಲಯ ಆದೇಶಿಸಿದೆ. ದೂರುದಾರರ ಪರವಾಗಿ ನ್ಯಾಯವಾದಿ ಶಶಿರಾಜ್ ರಾವ್ ಕಾವೂರು ವಾದಿಸಿದ್ದರು.