ಗೌಡ ಫುಟ್ಬಾಲ್ 2025: ಕಡ್ಯದ ತಂಡ ಚಾಂಪಿಯನ್ಸ್

KannadaprabhaNewsNetwork | Published : May 20, 2025 1:30 AM
ಮರಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಎಂಟನೇ ವರ್ಷದ ಫುಟ್ಪಾಲ್‌ ಕಪ್‌ ಪಂದ್ಯಾವಳಿಯ ಚಾಂಪಿಯನ್‌ ಪಟ್ಟವನ್ನು ಕಡ್ಯದ ತಂಡ ತನ್ನದಾಗಿಸಿಕೊಂಡಿದೆ.
Follow Us

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಗೌಡ ಫುಟ್ಬಾಲ್ ಅಕಾಡಮಿ ವತಿಯಿಂದ ಮರಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಎಂಟನೇ ವರ್ಷದ ಗೌಡ ಫುಟ್ಬಾಲ್ ಕಪ್ ಪಂದ್ಯಾವಳಿಯ ಚಾಂಪಿಯನ್ ಪಟ್ಟವನ್ನು ಕಡ್ಯದ ತಂಡ ತನ್ನದಾಗಿಸಿಕೊಂಡಿದೆ.

ಮಞಂಡ್ರ ಹಾಗೂ ಕಡ್ಯದ ತಂಡಗಳ ನಡುವೆ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಕಡ್ಯದ ತಂಡ ಗೆಲುವು ಸಾಧಿಸಿತು. ಮಞಂಡ್ರ ತಂಡದ ಪರ ಧೀಲನ್ 1 ಗೋಲ್ ದಾಖಲಿಸಿದರೆ, ಕಡ್ಯದ ತಂಡದ ಪರ ವೈಶಕ್ 2 ಗೋಲ್ ದಾಖಲಿಸಿದರು. ಪರಿಣಾಮ 2025 ನೇ ಸಾಲಿನ ಗೌಡ ಫುಟ್ಬಾಲ್ ಟ್ರೋಫಿ 2025 ರ ಚಾಂಪಿಯನ್ ತಂಡವಾಗಿ ಕಡ್ಯದ ತಂಡ ಹೊರಹೊಮ್ಮಿತ್ತು. ಮಞಂಡ್ರ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯ ಐಯ್ಯಂಡ್ರ ಹಾಗೂ ಕಡ್ಯದ ತಂಡಗಳ ನಡುವೆ ನಡೆಯಿತು. ಐಯ್ಯಂಡ್ರ ತಂಡದ ಪರ ರೋಹನ್ 1 ಗೋಲ್ ಬಾರಿಸಿದರೆ, ಕಡ್ಯದ ತಂಡದ ಪರ ಕಾರ್ತಿಕ್ 1 ಗೋಲ್ ಬಾರಿಸಿದರು. ಇತ್ತಂಡಗಳು ತಲಾ ಒಂದು ಗೋಲು ದಾಖಲಿಸಿ ಸಮಬಲ ಸಾಧಿಸಿತು. ಅಂತಿಮವಾಗಿ ಟ್ರೈ ಬ್ರೇಕರ್‌ನಲ್ಲಿ 4-2 ಗೋಲ್‌ಗಳಿಂದ ಕಡ್ಯದ ತಂಡ ಜಯಸಾಧಿಸಿ ಫೈನಲ್ ಪ್ರವೇಶಿಸಿದೆ.

ಎರಡನೇ ಸೆಮಿಫೈನಲ್ ಪಂದ್ಯ ಪೊಕ್ಕುಳಂಡ್ರ ಹಾಗೂ ಮಞಂಡ್ರ ತಂಡಗಳ ನಡುವೆ ನಡೆಯಿತು. 3-2 ಗೋಲುಗಳ ಅಂತರದಲ್ಲಿ ಮಞಂಡ್ರ ತಂಡ ಗೆಲುವು ಸಾಧಿಸಿತು. ಪೊಕ್ಕುಳಂಡ್ರ ತಂಡದ ಪರ ಕರಣ್ ಹಾಗೂ ಮನೋಜ್ ತಲಾ 1 ಗೋಲು ದಾಖಲಿಸಿದರೆ, ಮಞಂಡ್ರ ತಂಡದ ಪರ ಲೋಹಿತ್(ಪಿಕ್ಕ) 2 ಗೋಲ್ ಹಾಗೂ ಮೀನಿಶ್ 1 ಗೋಲ್ ಬಾರಿಸಿ ಫೈನಲ್ ಪ್ರವೇಶಕ್ಕೆ ಕಾರಣರಾದರು.

ಅಂಡರ್ 16 ಫುಟ್ಬಾಲ್ ಪಂದ್ಯದ ಫೈನಲ್ ಪಂದ್ಯ ಮರಂದೋಡ ಬಾಯ್ಸ ಹಾಗೂ ಗೌಡ ಕಿಡ್ಸ್ ತಂಡಗಳ ನಡುವೆ ನಡೆಯಿತು. ಗೌಡ ಕಿಡ್ಸ್ ತಂಡ 3 ಗೋಲ್ ದಾಖಲಿಸಿ ಫೈನಲ್ ಪಂದ್ಯದಲ್ಲಿ ಜಯಗಳಿಸಿತು. ಮಹಿಳೆಯರಿಗೆ ನಡೆದ ಪಂದ್ಯದಲ್ಲಿ ಟೀಂ ಬ್ಲೇಜ್ ಮತ್ತು ಫ್ಯಾನ್ಸಿಂಗ್ ಪಿಕೋಕ್ ತಂಡಗಳು ಸೆಣಸಾಟ ನಡೆಸಿತು. ಟೀಂ ಬ್ಲೇಜ್ ತಂಡ 2 ಗೋಲು ದಾಖಲಿಸಿ ಗೆಲುವು ಸಾಧಿಸಿತು.

ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದಕೊಂಡ ಕಡ್ಯದ ತಂಡಕ್ಕೆ 1 ಲಕ್ಷ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಮಞಂಡ್ರ ತಂಡಕ್ಕೆ 50 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ತೃತೀಯ ಹಾಗೂ ಚರ್ತುಥ ಸ್ಥಾನ ಪಡೆದ ಪೊಕ್ಕುಳಂಡ್ರ, ಅಯ್ಯಂಡ್ರ ತಂಡಕ್ಕೆ ತಲಾ 15 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು.

ವೈಯುಕ್ತಿಕ ಬಹುಮಾನ : ಬೆಸ್ಟ್ ಪ್ಲೇಯರ್ ಮತ್ತು ಅತೀ ಹೆಚ್ಚು ಗೋಲು ಸ್ಕೋರರ್ ಆಗಿ ಮಞಂಡ್ರ ಲೋಹಿತ್, ಬೆಸ್ಟ್ ಗೋಲ್ ಕೀಪರ್ ಅಯ್ಯಂಡ್ರ ಮೊನೀಶ್, ಬೆಸ್ಟ್ ಡಿಫೆಂಡರ್ಸ್‌ ಕಡ್ಯದ ದರ್ಶನ್, ಎಮರ್ಜಿಂಗ್ ಪ್ಲೇಯರ್ ಪೊಕ್ಕುಳಂಡ್ರ ತನು ಪಡೆದುಕೊಂಡರೆ, ಬೆಸ್ಟ್ ಟೀಂ ಪ್ರಶಸ್ತಿಯನ್ನು ಚಂಡೀರ ತಂಡ ಪಡೆದುಕೊಂಡಿತು.

ಗೌಡ ಫುಟ್ಬಾಲ್ ಅಕಾಡೆಮಿ ಅಧ್ಯಕ್ಷ ಬಡುವಂಡ್ರ ಸುಜಯ್ ಅಧ್ಯಕ್ಷತೆಯಲ್ಲಿ ನಡೆದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂತರ್‌ಗೌಡ, ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ, ಸಂಗೀತ ನಿರ್ದೇಶಕರಾದ ಎಂ.ಆರ್.ಚರಣ್‌ರಾಜ್, ಮಾಜಿ ಸೈನಿಕರಾದ ಯಾಲದಾಳು ಕ್ಯಾಪ್ಟನ್ ಚೇತನ್, ಮಾಜಿ ನಗರಸಭೆ ಸದಸ್ಯ ಪಾಣತ್ತಲೆ ಕವನ್, ಮರಗೋಡು ಸ.ಮಾ.ಪ್ರಾ ಶಾಲೆಯ ಮುಖ್ಯ ಶಿಕ್ಷಕಿ ಕೆದಂಬಾಡಿ ಚಂದ್ರಕಲಾ ಮತ್ತಿತರರು ಇದ್ದರು.