ಹಳೇ ತತ್ವವು ಹೊಸ ಜೀವನಕ್ಕೆ ಪೂರಕ

KannadaprabhaNewsNetwork | Published : May 20, 2025 1:31 AM
ನಗರದ ಬಬ್ಬೂರು ಸಮೀಪದ ಮಾಹಿ ಫಾರ್ಮ್‌ಹೌಸ್‌ನಲ್ಲಿ ಹಳೆ ಬೇರು ಹೊಸ ಚಿಗುರು ಎಂಬ ಸಾಹಿತ್ಯಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Follow Us

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯಿಂದ ಸಾಹಿತ್ಯಗೋಷ್ಠಿ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಹಿರಿಯೂರು

ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ವತಿಯಿಂದ ವೇದಿಕೆಯ ಸಂಸ್ಥಾಪಕರಾದ ದಯಾವತಿ ಪುತ್ತುರ್ಕರ್ ರವರ ನೇತೃತ್ವದಲ್ಲಿ ನಗರದ ಬಬ್ಬೂರು ಸಮೀಪದ ಮಾಹಿ ಫಾರ್ಮ್ ಹೌಸ್‌ನಲ್ಲಿ ಹಳೆ ಬೇರು ಹೊಸ ಚಿಗುರು ಎಂಬ ಸಾಹಿತ್ಯಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸುಮಾ ರಾಜಶೇಖರ್ ಮಾತನಾಡಿ, ತಲೆಮಾರಿನಿಂದ ತಲೆಮಾರಿಗೆ ಹಿರಿಯರ ಅನುಭವ, ಸಂಸ್ಕೃತಿ, ಸಂಸ್ಕಾರ ಮುಂತಾದ ವಿಚಾರಧಾರೆಗಳು ಹೊಸ ತಲೆಮಾರಿಗೆ ವರ್ಗಾವಣೆಗೊಂಡಾಗ ಮಾತ್ರ ಯಾವುದೇ ವ್ಯಕ್ತಿ, ವಿಷಯ, ವಸ್ತು ಬೆಳೆಯಲು ಸಾಧ್ಯ. ಅಜ್ಜನಿಂದ ಮೊಮ್ಮಗನಿಗೆ, ಗುರುಗಳಿಂದ ಶಿಷ್ಯರಿಗೆ ಹಳೇಬೇರು ಹೊಸ ಚಿಗುರು ಪರಂಪರೆ ಹರಿದು ಬರಬೇಕು. ಹಳೇ ತತ್ವವು ಹೊಸ ಜೀವನಕ್ಕೆ ಪೂರಕ ಮತ್ತು ಪ್ರೇರಕವಾಗಿರುತ್ತದೆ ಎಂದರು.

ಉಪನ್ಯಾಸಕ ಶಿವಾನಂದ ಎನ್.ಬಂಡೇಹಳ್ಳಿ ಮಾತನಾಡಿ, ನಮ್ಮ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಹಿರಿಯರ ಸಲಹೆ ಸಹಕಾರ ಇರಲೇಬೇಕು. ಆಗ ಮಾತ್ರ ಅವರ ಅನುಭವದ ತಳಹದಿಯ ಮೇಲೆ ಹೊಸತೊಂದು ಸಮಾಜವನ್ನು ನಿರ್ಮಿಸಬಹುದು. ಭೂತದ ಮೇಲೆ ವರ್ತಮಾನ, ವರ್ತಮಾನದ ಮೇಲೆ ಭವಿಷ್ಯ ನಿಂತಿರುತ್ತದೆ. ಹಾಗಾಗಿ ಹಳೆಯದನ್ನು ಅರಿಯದೆ ಹೊಸದನ್ನು ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ಮೂರು ಕಾಲಕ್ಕೂ ಹಿಂದಿನ ತತ್ವಗಳು ಪ್ರಸ್ತುತವಾಗಿರುತ್ತವೆ. ಹಳೆಯ ಅನುಭವ, ಆಚಾರ, ವಿಚಾರ, ಸಂಸ್ಕಾರವಿಲ್ಲದೆ ಯಾವುದೇ ರಂಗದಲ್ಲೂ ಹೊಸತನ ಕಾಣಲು ಸಾಧ್ಯವಿಲ್ಲ. ಅಜ್ಜ ಅಜ್ಜಿ ಹೇಳುತ್ತಿದ್ದ ನೀತಿ ಕಥೆಗಳು ಇಂದಿನ ಆಧುನಿಕ ಯುಗದ ನಮ್ಮ ಬದುಕಿಗೆ ಆದರ್ಶವಾಗಬೇಕು ಎಂದರು.

ಡಾ.ಗೌರಮ್ಮ ಮಾತನಾಡಿ, ಸಂಸ್ಕಾರ ಎಂಬುದು ಬರೀ ತೋರ್ಪಡಿಕೆಯಾಗದೆ ಅದು ನಿಜ ಜೀವನದಲ್ಲಿ ಪ್ರತೀ ಮನೆಯಲ್ಲೂ ಪ್ರಾಯೋಗಿಕವಾಗಿ ಆಚರಣೆಗೆ ಬರಬೇಕು. ಆಗ ಮಾತ್ರ ಹಳೇ ತತ್ವವು ಹೊಸ ಚಿಗುರಾಗಿ ಬೆಳೆದು ಸಮಾಜದಲ್ಲಿ ಸಾಮರಸ್ಯ ಬೆಳೆಯುತ್ತದೆ ಎಂದರು.

ಈ ಸಂದರ್ಭದಲ್ಲಿ ಬೆಳಕುಪ್ರಿಯ, ದಯಾ ಪುತ್ತುರ್ಕರ್, ಪ್ರವೀಣ್ ಬೆಳಗೆರೆ, ಶಿಕ್ಷಕ ಮುದ್ದುರಾಜ್ ಹುಲಿತೊಟ್ಲು, ಪಂಡ್ರಹಳ್ಳಿ ಶಿವರುದ್ರಪ್ಪ, ಕೌಶಿಕ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಹಿರಿಯರಿಂದ ಕಿರಿಯರಿಗೆ ಪುಸ್ತಕ ವಿತರಣೆ ಹಾಗೂ ಜಾನಪದ ಗೀತೆ, ಕವಿತೆ, ಭಾವಗೀತೆ ಏಕಪಾತ್ರಾಭಿನಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.