ಕನ್ನಡಪ್ರಭ ವಾರ್ತೆ ಹಾಸನ
ಕಾರ್ಯಕ್ರಮದ ಆರಂಭವನ್ನು ಮಹಿಳೆಯರ ಆರೋಗ್ಯ, ಸಂತುಷ್ಟ ಜೀವನದ ಸಂಕೇತವಾಗಿ ಅತಿಥಿ ರಮೇಶ್ ಅವರು ಗಿಡಕ್ಕೆ ನೀರು ಎರೆಯುವ ಮೂಲಕ ಪ್ರಾತಿನಿಧಿಕವಾಗಿ ನೆರವೇರಿಸಿದರು. ನಂತರ ಮಾತನಾಡಿ, ಹೀಲಿಂಗ್ ಥೆರಪಿಯ ಅರ್ಥ, ಮಹತ್ವ ಮತ್ತು ನವೀನ ಸಮಾಜದಲ್ಲಿ ಅದರ ಅಗತ್ಯತೆ ಬಗ್ಗೆ ಅವರು ಮಹಿಳೆಯರೊಂದಿಗೆ ನೇರ ಸಂವಾದ ನಡೆಸಿದರು. ಹೀಲಿಂಗ್ ಥೆರಪಿ ಒಂದು ಮಾನಸಿಕ ಚಿಕಿತ್ಸಾ ವಿಧಾನವಾಗಿದ್ದು, ದೈಹಿಕ, ಮಾನಸಿಕ, ಭಾವನಾತ್ಮಕ ಒತ್ತಡವನ್ನು ಕಡಿಮೆ ಮಾಡಿಸಲು, ಆತಂಕ ನಿವಾರಣೆಗೆ ಮತ್ತು ಮನಸ್ಸಿನ ಸಮತೋಲನಕ್ಕೆ ಅತ್ಯಂತ ಸಹಕಾರಿ ಎಂದು ತಿಳಿಸಿದರು. ಔಷಧಿ, ಚುಚ್ಚುಮದ್ದು, ಯಾವುದೇ ಹೊರಗಿನ ಚಿಕಿತ್ಸೆಗಳ ಅವಲಂಬನೆಯನ್ನು ಕಡಿಮೆ ಮಾಡುವ ಸಹಜ ವಿಧಾನವಾದ್ದರಿಂದ ಇಂದು ಇದರ ಅಗತ್ಯ ಹೆಚ್ಚಾಗಿದೆ ಎಂದು ವಿವರಿಸಿದರು.
ಸಂಘದ ಅಧ್ಯಕ್ಷೆ ಜಯಾ ರಮೇಶ್ ರವರು ಮಾತನಾಡುತ್ತಾ, ಇಂದಿನ ವೇಗದ ಬದುಕಿನಲ್ಲಿ ಶಾಂತಿಯಾಗಿ ಬಾಳುವುದು ಬಹುಮಂದಿಗೆ ಸವಾಲಾಗಿದೆ. ವಿಶೇಷವಾಗಿ ಮಹಿಳೆಯರಿಗೆ ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ಕೆಲಸ, ಜವಾಬ್ದಾರಿ, ಒತ್ತಡ ಇದೆಲ್ಲವುಂಟು. ಇಂತಹ ಸಂದರ್ಭದಲ್ಲಿ ಯಾವುದೇ ಔಷಧಿಯ ಅವಶ್ಯಕತೆಯಿಲ್ಲದೆ ಹೀಲಿಂಗ್ ಥೆರಪಿ ಮನಶ್ಶಾಂತಿ ಕೊಡಬಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕಾರ್ಯಕ್ರಮ ಜಯಾ ರಮೇಶ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಸುನಂದಾ ಕೃಷ್ಣರವರ ಪ್ರಾರ್ಥನೆಯಿಂದ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಲೀಲಾವತಿ ರವರು ಅತಿಥಿ ಸದಸ್ಯರನ್ನು ಸ್ವಾಗತಿಸಿದರು. ಪದ್ಮಾ ಶರ್ಮ ಅವರ ನಿರೂಪಣೆಯಿಂದ ಕಾರ್ಯಕ್ರಮ ಉತ್ತಮವಾಗಿ ಮುಂದುವರಿದರು. ಸಭೆಯಲ್ಲಿ ಸಂಘದ ಕಾರ್ಯದರ್ಶಿ ಶಾಂತಲಾದೇವಿ, ಖಜಾಂಚಿ ಕಲಾ ನರಸಿಂಹ, ಸಾವಿತ್ರಿ, ಕಾಮಾಕ್ಷಿ, ರಾಜೇಶ್ವರಿ, ಹೇಮಲತಾ, ಚೇತನಾ, ಶೈಲಾ, ಮಾಲಿನಿ, ಸುಜಾತ, ಮಣಿ, ಭಾಗ್ಯ, ಲಕ್ಷ್ಮೀ ಸೇರಿದಂತೆ ಅನೇಕ ಸದಸ್ಯರು ಆಗಮಿಸಿ ಸಕ್ರಿಯವಾಗಿ ಭಾಗವಹಿಸಿದರು.