ಶೃಂಗೇರಿ ಕ್ಷೇತ್ರಕ್ಕೆ ಅರಣ್ಯ ಸಚಿವರ ಆಗಮನಕ್ಕೆ ತಿಂಗಳ ಗಡುವು

KannadaprabhaNewsNetwork |  
Published : Dec 12, 2025, 01:15 AM IST
೧೧ಬಿಹೆಚ್‌ಆರ್ ೧: ಬಾಳೆಹೊನ್ನೂರಿನಲ್ಲಿ ನಡೆದ ಮಲೆನಾಡು ನಾಗರೀಕ ರೈತ ಹಿತರಕ್ಷಣಾ ಕ್ಷೇತ್ರ ಸಮಿತಿಯ ಸಭೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಂಜಿತ್ ಮಾತನಾಡಿದರು. ಎಂ.ಎನ್.ನಾಗೇಶ್, ರತ್ನಾಕರ್, ಚಂದ್ರಶೇಖರ್ ರೈ, ನವೀನ್ ಕರಗಣೆ, ಮಂಜುನಾಥ್ ತುಪ್ಪೂರು ಇದ್ದರು. | Kannada Prabha

ಸಾರಾಂಶ

ಬಾಳೆಹೊನ್ನೂರುಕ್ಷೇತ್ರದಲ್ಲಿ ಈ ಹಿಂದೆ ನಡೆದ ಆನೆ ದಾಳಿ ಹಾಗೂ ಮಲೆನಾಡಿನ ಮೇಲೆ ಜಾರಿ ಮಾಡಲು ಉದ್ದೇಶಿಸಿರುವ ಅವೈಜ್ಞಾನಿಕ ಯೋಜನೆಗಳ ಬಗ್ಗೆ ಚರ್ಚಿಸಲು ಶೃಂಗೇರಿ ಕ್ಷೇತ್ರಕ್ಕೆ ಒಂದು ತಿಂಗಳ ಒಳಗೆ ಅರಣ್ಯ ಸಚಿವರು ಬರಬೇಕು. ಇಲ್ಲದಿದ್ದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಮಲೆನಾಡು ನಾಗರಿಕ, ರೈತ ಹಿತರಕ್ಷಣಾ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಂಜಿತ್ ತಿಳಿಸಿದ್ದಾರೆ.

ರೈತರ ಸಮಸ್ಯೆ ಆಲಿಸದಿದ್ದಲ್ಲಿ ಬೃಹತ್ ಹೋರಾಟ: ರಂಜಿತ್ । ಹೆದ್ದಾರಿ ತಡೆ ಎಚ್ಚರಿಕೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕ್ಷೇತ್ರದಲ್ಲಿ ಈ ಹಿಂದೆ ನಡೆದ ಆನೆ ದಾಳಿ ಹಾಗೂ ಮಲೆನಾಡಿನ ಮೇಲೆ ಜಾರಿ ಮಾಡಲು ಉದ್ದೇಶಿಸಿರುವ ಅವೈಜ್ಞಾನಿಕ ಯೋಜನೆಗಳ ಬಗ್ಗೆ ಚರ್ಚಿಸಲು ಶೃಂಗೇರಿ ಕ್ಷೇತ್ರಕ್ಕೆ ಒಂದು ತಿಂಗಳ ಒಳಗೆ ಅರಣ್ಯ ಸಚಿವರು ಬರಬೇಕು. ಇಲ್ಲದಿದ್ದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಮಲೆನಾಡು ನಾಗರಿಕ, ರೈತ ಹಿತರಕ್ಷಣಾ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಂಜಿತ್ ತಿಳಿಸಿದ್ದಾರೆ.ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮಲೆನಾಡು ನಾಗರಿಕ, ರೈತ ಹಿತರಕ್ಷಣಾ ಕ್ಷೇತ್ರ ಸಮಿತಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ ಮಲೆನಾಡಿನ ರೈತರು, ಕಾರ್ಮಿಕರು ಎದುರಿಸುತ್ತಿರುವ ಅರಣ್ಯ ಕಾಯ್ದೆಗಳ ಸಂಕಷ್ಟ, ಅವೈಜ್ಞಾನಿಕ ಯೋಜನೆಗಳ ಅನಾನುಕೂಲಗಳು, ಈ ನಿಟ್ಟಿನಲ್ಲಿ ರೂಪಿಸಬೇಕಾದ ಹೋರಾಟಗಳು, ಸರ್ಕಾರದ ಬಳಿ ನಮ್ಮ ಹಕ್ಕೊತ್ತಾಯದ ಬಗ್ಗೆ ಸಮಿತಿಸಭೆಯಲ್ಲಿ ಚರ್ಚಿಸಲಾಗಿದೆ.

ಈ ಹಿಂದೆ ರೈತ ಸಮಿತಿ ಒಗ್ಗಟ್ಟಾಗಿ ಹೋರಾಟ ಮಾಡಿದಾಗ ಅರಣ್ಯ ಸಚಿವರು ಒಂದು ವಾರದಲ್ಲಿ ಕ್ಷೇತ್ರಕ್ಕೆಬರುತ್ತಾರೆ ಎಂಬ ಸುಳ್ಳನ್ನು ಆಡಳಿತಾರೂಢ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೇಳಿದ್ದರೂ ಈ ವರೆಗೆ ಭರವಸೆ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ಸಚಿವರಿಗೆ ಒಂದು ತಿಂಗಳ ಕಾಲಾವಕಾಶ ನೀಡಲಿದ್ದು ಅಷ್ಟರಲ್ಲಿ ಕ್ಷೇತ್ರಕ್ಕೆ ಅರಣ್ಯ ಸಚಿವರು ಬಂದು ಜನರ ಸಮಸ್ಯೆಗಳನ್ನು ಆಲಿಸಬೇಕು. ಅರಣ್ಯ ಇಲಾಖೆ, ಕಂದಾಯ ಇಲಾಖೆ ನಡುವೆಯ ಗೊಂದಲದ ಕಾನೂನುಗಳು, ಜನರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಅರಣ್ಯ ಸಚಿವರು ಮಾಡಬೇಕು ಎಂದು ಆಗ್ರಹಿಸಿದರು.

ಆನೆ ಹಾವಳಿ ತಡೆಗೆ ಕ್ಷೇತ್ರದಲ್ಲಿ ತುರ್ತಾಗಿ ರೈಲ್ವೇ ಬ್ಯಾರಿಕೇಡ್ ನಿರ್ಮಿಸಬೇಕು. ಅರಣ್ಯ ಸಚಿವರು ಕ್ಷೇತ್ರಕ್ಕೆ ಬಂದು ರೈತ ಸಮಿತಿ, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜನರ ನಡುವೆ ಯಾವುದೇ ಸಭೆ ನಡೆಸದಿದ್ದರೆ, ಬೃಹತ್ ಹೋರಾಟಕ್ಕೆ ಕರೆ ನೀಡಲಾಗುವುದು. ಆಹೋರಾತ್ರಿ ಧರಣಿ ಸತ್ಯಾಗ್ರಹ, ಅನಿರ್ಧಿಷ್ಟಾವಧಿ ಹೆದ್ದಾರಿ ತಡೆ ಮಾಡಿ ಹೋರಾಟ ಮಾಡಲಾ ಗುವುದು ಎಂದು ಎಚ್ಚರಿಸಿದರು.ಅರಣ್ಯ ಇಲಾಖೆ ತುರ್ತಾಗಿ ಇಟಿಎಫ್ ಸಿಬ್ಬಂದಿ ನಿಯೋಜನೆ ಮಾಡಬೇಕು. ಪ್ರತಿದಿನ ಆನೆ ದಾಳಿ ನಡೆಯುತ್ತಿದ್ದು, ಇದಕ್ಕೆ ಕೇವಲ ಚೆಕ್ ನೀಡುವುದೇ ಪರಿಹಾರವಲ್ಲ. ಹಣ ಮಾತ್ರ ನಿಮ್ಮಿಂದ ಕೊಡುವುದಕ್ಕೆ ಆಗುವುದಾದರೆ ರೈತ ಸಮಿತಿಯವರು ಸಹ ಚಂದಾ ಎತ್ತಿ ಪರಿಹಾರ ನೀಡುತ್ತೇವೆ. ಶಾಶ್ವತ ಪರಿಹಾರ ಮಾಡಬೇಕು ಎಂಬುದೇ ನಮ್ಮ ಒತ್ತಾಯ. ಜನವಿರೋಧಿ ಅರಣ್ಯ ಯೋಜನೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಜನಾಭಿಪ್ರಾಯ ರೂಪಿಸಲು ರೈತರು, ಕಾರ್ಮಿಕರೊಂದಿಗೆ ಅಭಿಯಾನ ಮಾಡಲಾಗುವುದು. ಪ್ರಸ್ತುತ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಮಲೆನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಯಾವುದೇ ಪ್ರಶ್ನೆ ಎತ್ತಿಲ್ಲ. ಶಾಸಕರು, ವಿಧಾನಪರಿಷತ್ ಸದಸ್ಯರು ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಪಕ್ಷಾ ತೀತವಾಗಿ ಅಧಿವೇಶನದಲ್ಲಿ ಮಾತನಾಡಿ ಸರ್ಕಾರದ ಗಮನಸೆಳೆಯಬೇಕು.ಪ್ರಸ್ತುತ ಸಾವಿರಾರು ರೈತರು ಬೆಳೆ ವಿಮೆ ಪಾವತಿಸಿದ್ದು, ತಾಂತ್ರಿಕ ಸಮಸ್ಯೆಗಳಿಂದ ಬಹಳಷ್ಟು ಕಡೆಗಳಲ್ಲಿ ಬೆಳೆ ವಿಮೆ ಬಂದಿಲ್ಲ. ಈ ಬಗ್ಗೆ ಶಾಸಕರು, ಸಂಸದರು ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಎರಡೂ ಸರ್ಕಾರಗಳ ಗಮನಸೆಳೆಯಬೇಕು.ರೈತ ಹಿತರಕ್ಷಣಾ ಕ್ಷೇತ್ರ ಸಮಿತಿ ಮಾಜಿ ಅಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿ, ಅರಣ್ಯ, ಕಂದಾಯ ಇಲಾಖೆಗಳ ಅವೈಜ್ಞಾನಿಕ ತೀರ್ಮಾನಗಳ ಬಗ್ಗೆ ಯಾವ ರೀತಿ ಹೋರಾಟ ಮಾಡಬೇಕು ಎಂದು ಸಭೆಯಲ್ಲಿ ಚರ್ಚಿಸಿದ್ದು, ಇದಕ್ಕೆ ಕ್ಷೇತ್ರದ ಎಲ್ಲಾ ರೈತರು ಕೈಜೋಡಿಸಬೇಕು. ಇತ್ತೀಚೆಗೆ ರಾಜ್ಯ ಸರ್ಕಾರ ಅರಣ್ಯ ಕಾಯ್ದೆಗಳ ಬಗ್ಗೆ ಎಸ್‌ಐಟಿ ಎಂಬುದನ್ನು ರಚನೆ ಮಾಡಿದ್ದು, ಇದು ಅವೈಜ್ಞಾನಿಕ. ಈ ಬಗ್ಗೆ ಸಂಬಂಧಿಸಿದ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಸ್ಪಷ್ಟನೆ ಕೊಡಬೇಕು. ಎಸ್‌ಐಟಿ ರಚನೆಯಿಂದ ಹಲವು ಗೊಂದಲ ಸೃಷ್ಟಿಯಾಗಿದ್ದು, ರೈತರಲ್ಲಿ ಒಡಕು ಮೂಡಿಸಲಾಗುತ್ತಿದೆ. ಈ ಬಗ್ಗೆ ಕ್ಷೇತ್ರದ ಜನಪ್ರತಿನಿಧಿಗಳು ತಮ್ಮ ಕರ್ತವ್ಯ ಅರಿತು ಜನರಿಗೆ ತಿಳಿಸಬೇಕು.

ಮಲೆನಾಡಿನ ಅನೇಕ ವಿಚಾರಗಳನ್ನು ವಿಧಾನಸಭೆ, ಲೋಕಸಭೆಯಲ್ಲಿ ಚರ್ಚಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ. ನಿಮ್ಮ ಆದ್ಯ ಕರ್ತವ್ಯ ಮರೆಯಬಾರದು. ಅರಣ್ಯ ಸಚಿವರು ಕ್ಷೇತ್ರಕ್ಕೆ ಬಾರದಿದ್ದಲ್ಲಿ ಸಮಿತಿ ಕರೆ ನೀಡುವ ಹೋರಾಟಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕೋರಿದರು. ಮಲೆನಾಡಿಗರ ಕೃಷಿ ಕಸುಬು ಉಳಿದರೆ ನಾವು ಉಳಿಯಲಿದ್ದೇವೆ. ಇಲ್ಲದಿದ್ದರೆ ನಾವು ಗುಳೆ ಹೋಗುವ ಪರಿಸ್ಥಿತಿ ಎದುರಾ ಗಲಿದೆ. ಈ ಹಿಂದೆ ಗ್ರಾಪಂಗಳಲ್ಲಿ ಆಡಳಿತ ಮಂಡಳಿ ಅಧಿಕಾರದಲ್ಲಿ ಇಲ್ಲದ ಸಂದರ್ಭದಲ್ಲಿ ಅವೈಜ್ಞಾನಿಕ ಬಫರ್ ಜೋನ್ ಮುಂತಾದ ಕಾಯ್ದೆಗಳನ್ನು ಬೇನಾಮಿ ಸಹಿಗಳನ್ನು ಮಾಡಿಸಿ ಜಾರಿ ಹುನ್ನಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಪಂಗಳಲ್ಲಿ ಜನಪ್ರತಿನಿಧಿಗಳಿಲ್ಲದೆ ಕಾಯ್ದೆ ಜಾರಿಗೆ ತರುವ ಹುನ್ನಾರ ಅಧಿಕಾರಿಗಳು, ಸರ್ಕಾರ ಮಾಡಬಾರದು. ಇದಕ್ಕೆ ಎಲ್ಲಾ ಗ್ರಾಪಂ ಗಳು ತುರ್ತು ಸಭೆ ಕರೆದು ನಡಾವಳಿ ರಚಿಸಬೇಕು. ಇಲ್ಲದಿದ್ದಲ್ಲಿ ಆ ಗ್ರಾಪಂಗಳ ಮುಂಭಾಗದಿಂದಲೇ ಪ್ರತಿಭಟನೆ ಆರಂಭಿ ಸಲು ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ. ಇಂತಹ ಹೋರಾಟಕ್ಕೆ ಯಾರೂ ಗುರಿಯಾಗದಂತೆ ಕೇಳಿಕೊಳ್ಳುತ್ತೇವೆ ಎಂದರು.

ರೈತ ಹಿತರಕ್ಷಣಾ ಕ್ಷೇತ್ರ ಸಮಿತಿ ಪದಾಧಿಕಾರಿ ರತ್ನಾಕರ ಗಡಿಗೇಶ್ವರ, ಚಂದ್ರಶೇಖರ್ ರೈ, ನವೀನ್ ಕರಗಣೆ, ಮಂಜುನಾಥ್ ತುಪ್ಪೂರು, ಪ್ರೇಮೇಶ್ ಮಾಗಲು, ಧರ್ಮಪ್ಪ, ಸಂದೀಪ್ ಮಣಬೂರು, ಆದರ್ಶ, ನವೀನ್ ಕಟ್ಟಿನಮನೆ, ಅಶ್ವಿನ್ ಮತ್ತಿತರರು ಹಾಜರಿದ್ದರು.-- ಬಾಕ್ಸ್‌--

ಆಡಳಿತ ಮಂಡಳಿ ಅನುಪಸ್ಥಿತಿಯಲ್ಲಿ ಅರಣ್ಯ ಕಾಯ್ದೆ ಜಾರಿ ಬೇಡಗ್ರಾಪಂಗಳ ಅವಧಿ ಮುಕ್ತಾಯಗೊಂಡ ಬಳಿಕ ಆಡಳಿತಾಧಿಕಾರಿ ಈ ಸಂದರ್ಭದಲ್ಲಿ ಗ್ರಾಮಕ್ಕೆ ಸಂಬಂಧಿಸಿದ ಅರಣ್ಯ, ಕಂದಾಯ ಇಲಾಖೆಗೆ ಸೇರಿದ ಯಾವುದೇ ಯೋಜನೆಗಳನ್ನು ಮುಂದಿನ ಚುನಾಯಿತ ತಂಡ ಅಧಿಕಾರ ವಹಿಸಿ ಕೊಳ್ಳುವ ತನಕ ತೆಗೆದುಕೊಳ್ಳಬಾರದು. ಈ ಬಗ್ಗೆ ಕ್ಷೇತ್ರದ ಎಲ್ಲಾ ಗ್ರಾಪಂಗಳಿಗೆ ಮನವಿ ನೀಡಲಿದ್ದು, ಆಡಳಿತ ಮಂಡಳಿ ಇಲ್ಲದ ಸಂದರ್ಭದಲ್ಲಿ ಯಾವುದೇ ಅರಣ್ಯ ಕಾಯ್ದೆ ಜಾರಿಗೆ ತರದಂತೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಕಾಯ್ದೆಗಳನ್ನು ಜಾರಿಗೆ ತರುವ ನಿರ್ಣಯ ಯಾವುದೇ ಗ್ರಾಪಂಗಳು ಕೈಗೊಂಡರೆ ಆ ಗ್ರಾಪಂಗಳ ವಿರುದ್ಧ ಹೋರಾಟ ನಡೆಸ ಲಾಗುವುದು. ಈ ಬಗ್ಗೆ ಹಾಲಿ ಇರುವ ಆಡಳಿತ ಮಂಡಳಿ ಮುಂದಿನ ದಿನಗಳಲ್ಲಿ ಯಾವುದೇ ಅವೈಜ್ಞಾನಿಕ ಯೋಜನೆ ಜಾರಿಗೆ ತರದಂತೆ ನಿರ್ಣಯ ಕೈಗೊಳ್ಳಬೇಕು ಎಂದು ರಂಜಿತ್ ಹೇಳಿದರು.

೧೧ಬಿಹೆಚ್‌ಆರ್ ೧:

ಬಾಳೆಹೊನ್ನೂರಿನಲ್ಲಿ ನಡೆದ ಮಲೆನಾಡು ನಾಗರೀಕ ರೈತ ಹಿತರಕ್ಷಣಾ ಕ್ಷೇತ್ರ ಸಮಿತಿ ಸಭೆಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ರಂಜಿತ್ ಮಾತನಾಡಿದರು. ಎಂ.ಎನ್.ನಾಗೇಶ್, ರತ್ನಾಕರ್, ಚಂದ್ರಶೇಖರ್ ರೈ, ನವೀನ್ ಕರಗಣೆ, ಮಂಜುನಾಥ್ ತುಪ್ಪೂರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ