ಚಿಕ್ಕಮಗಳೂರುಭಾರತ ದೇಶದಲ್ಲಿ ಕೃಷಿ, ಕೈಗಾರಿಕೆಗಳು, ಸೇವೆ, ವ್ಯಾಪಾರ ಮುಂತಾದವುಗಳಿಂದ ಜಿಡಿಪಿ ಮೂಲಕ ಆರ್ಥಿಕ ಶಕ್ತಿ ತುಂಬಲಾಗುತ್ತಿದೆ. ಕೈಗಾರಿಕಾ ಕ್ಷೇತ್ರ ಪ್ರಗತಿಯಾದಾಗ ಮಾತ್ರ ದೇಶ ಆರ್ಥಿಕವಾಗಿ ಮುಂದೆ ಬರುತ್ತದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿ.ಎಂ ಮಹೇಶ್‌ಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಭಾರತ ದೇಶದಲ್ಲಿ ಕೃಷಿ, ಕೈಗಾರಿಕೆಗಳು, ಸೇವೆ, ವ್ಯಾಪಾರ ಮುಂತಾದವುಗಳಿಂದ ಜಿಡಿಪಿ ಮೂಲಕ ಆರ್ಥಿಕ ಶಕ್ತಿ ತುಂಬಲಾಗುತ್ತಿದೆ. ಕೈಗಾರಿಕಾ ಕ್ಷೇತ್ರ ಪ್ರಗತಿಯಾದಾಗ ಮಾತ್ರ ದೇಶ ಆರ್ಥಿಕವಾಗಿ ಮುಂದೆ ಬರುತ್ತದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿ.ಎಂ ಮಹೇಶ್‌ಕುಮಾರ್ ತಿಳಿಸಿದರು. ಜಿಪಂ ಹತ್ತಿರ ಯೂನಿಯನ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಎಂಎಸ್‌ಎಂಇ ನಿರ್ದೇಶನಾಲಯ ಕೆಸಿಟಿಯು ಟೆಕ್ಸಾಕ್ ಬೆಂಗಳೂರು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ ಎಂಎಸ್‌ಎಂಇ ಗಳ ಕಾರ್ಯಕ್ಷಮತೆ ಹೆಚ್ಚಿಸಿ ಮತ್ತು ವೇಗಗೊಳಿಸುವುದು, ರ್‍ಯಾಂಪ್ ಯೋಜನೆಯಡಿ ಬಿಡಿಎಸ್‌ಪಿ ಯೋಜನೆ ಕುರಿತು ಒಂದು ದಿನದ ಅರಿವು ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಸೂಕ್ಷ್ಮ, ಮಧ್ಯಮ ಕೈಗಾರಿಕೆಗಳು ಹೆಚ್ಚು ಹೆಚ್ಚು ಸ್ಥಾಪನೆಯಾದಾಗ ಅತಿ ಹೆಚ್ಚು ಉದ್ಯೋಗ ಸೃಷ್ಟಿ ಸಾಧ್ಯ. ಇದರಿಂದ ದೇಶದ ಆರ್ಥಿಕ ಶಕ್ತಿ ಹೆಚ್ಚಾಗಲಿದೆ. ಕೈಗಾರಿಕೆಗಳಲ್ಲಿ ಬೇರೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ೬ನೇ ಸ್ಥಾನದಲ್ಲಿದೆ. ಅಮೇರಿಕ, ಚೀನಾ, ಜಪಾನ್, ಜರ್ಮನಿ, ದಕ್ಷಿಣ ಕೊರಿಯಾ ದೇಶಗಳ ಕೈಗಾರಿಕೆಗಳಲ್ಲಿ ಕೈಗೊಂಡಿರುವ ತಂತ್ರಜ್ಞಾನಗಳ ಬಗ್ಗೆ ತಿಳಿದು ಈ ದೇಶಗಳ ಜೊತೆಗೆ ಭಾರತ ಸ್ಪರ್ಧೆ ಮಾಡಬೇಕಾಗಿದೆ ಎಂದರು.ಯುವಜನತೆಗೆ ಕೃಷಿಯಲ್ಲಿ ಆಸಕ್ತಿ ಇಲ್ಲ ಎಂದು ವಿಷಾಧಿಸಿದ ಅವರು, ಯುವಕರಿಗೆ ಅಗತ್ಯವಾಗಿರುವುದು ಉದ್ಯೋಗ, ಇದನ್ನು ಅರಸಿ ದೊಡ್ಡ ದೊಡ್ಡ ನಗರಗಳತ್ತ ಮುಖಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಂಎಸ್‌ಎಂಇ ಸ್ಥಾಪನೆಯಾದರೆ ಭಾರತದಲ್ಲೇ ಉದ್ಯೋಗ ನೀಡಲು ಸಹಕಾರಿ ಎಂದು ಹೇಳಿದರು.ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳ ಉದ್ದಿಮೆದಾರರಿಗೆ ಮಾರ್ಕೆಟಿಂಗ್ ಮತ್ತು ಸ್ಪರ್ಧಾತ್ಮಕ ತಾಂತ್ರಿಕ ಸಲಹೆ-ತರಬೇತಿ ನೀಡಲು ವಿಷಯಾಧಾರಿತ ರ್‍ಯಾಂಪ್ ಯೋಜನೆಯನ್ನು ಕೇಂದ್ರಸರ್ಕಾರ ಜಾರಿಗೆ ತಂದಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಬೇಕಾದ ಇಂಕ್ಯೂಮೇಷನ್ ಕಾರ್ಯಕ್ರಮ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ನೀಡಲಾಗುತ್ತಿದೆ. ಅವಕಾಶಗಳ ಬಗ್ಗೆ ಅರಿವು ಮೂಡಿಸುವುದೇ ಇಂಕ್ಯೂಮೇಷನ್. ಅದೇ ರೀತಿ ಬಿಡಿಎಸ್‌ಪಿ ಯನ್ನು ಅನುಷ್ಠಾನ ಗೊಳಿಸಬೇಕಾಗಿದೆ ಎಂದರು.ಕೈಗಾರಿಕೋದ್ಯಮಿಗಳ ವ್ಯಾಪಾರ ವೃದ್ಧಿ ಹಾಗೂ ರಫ್ತು ಮಾಡುವ ಕುರಿತು ಇ-ಮಾರ್ಕೆಟಿಂಗ್, ಅಕೌಂಟಿಂಗ್ ಬಗ್ಗೆ ಈ ಕಾರ್ಯಾಗಾರದಲ್ಲಿ ತರಬೇತಿ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ, ಏಲಕ್ಕಿ, ಮೆಣಸು, ಅಡಕೆ, ತೆಂಗು ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಪ್ರದೇಶ ವಾಗಿದ್ದು, ಹೊಸ ಉದ್ದಿಮೆ ಸ್ಥಾಪನೆಯಾದರೆ ಲಾಭದಾಯಕವಾಗಿ ನಡೆಸಬಹುದಾಗಿದೆ ಎಂದು ಸಲಹೆ ನೀಡಿದರು. ಪ್ರಾರಂಭದ ಹಂತದಲ್ಲಿ ಲಾಭ ಕಡಿಮೆ ಇದ್ದು, ಒತ್ತಡ ಜಾಸ್ತಿ ಇರುತ್ತದೆ. ಇದನ್ನು ಸರಿದೂಗಿಸಲು ಸಬ್ಸಿಡಿ ದರದಲ್ಲಿ ಸಾಲಸೌಲಭ್ಯ ನೀಡುತ್ತೇವೆ ಎಂದು ಸಲಹೆ ನೀಡಿದರು.ಲೀಡ್‌ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಎಚ್.ಎನ್.ಮಹೇಶ್ ಮಾತನಾಡಿ, ಕೇಂದ್ರ ಸರ್ಕಾರದ ಎಂಎಸ್‌ಎಂಇ ಮಹತ್ತರ ಯೋಜನೆಗಳಡಿ ರ್‍ಯಾಂಪ್, ಬಿಡಿಎಸ್‌ಪಿ ಬಗ್ಗೆ ಉದ್ದಿಮೆದಾರರಿಗೆ ಸೂಕ್ತ ತರಬೇತಿ ನೀಡಿ ನಷ್ಟದಲ್ಲಿರುವ ಉದ್ದಿಮೆಗಳನ್ನು ಪುನ ರುಜ್ಜೀವನಗೊಳಿಸಲು ನಿರ್ಧರಿಸಲಾಗಿದೆ ಎಂದರು.ಇದಕ್ಕಾಗಿ ಕೇಂದ್ರಸರ್ಕಾರ ₹೬೫೦೦ ಕೋಟಿ ಮೀಸಲಿಟ್ಟು, ಸಂಶೋಧನೆ, ತರಬೇತಿ, ಅಭಿವೃದ್ಧಿ, ಸಬ್ಸಿಡಿ ಸಾಲಸೌಲಭ್ಯ ಈ ರೀತಿ ಅನೇಕ ಆಯಾಮಗಳಲ್ಲಿ ಎಂಎಸ್‌ಎಂಇ ಪ್ರಮುಖ ಪಾತ್ರ ವಹಿಸಿದೆ. ಬಿಡಿಎಸ್‌ಪಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲಾ ಉದ್ದಿಮೆದಾರರು ಆರ್ಥಿಕ ಅಭಿವೃದ್ಧಿ ಹೊಂದಬೇಕೆಂದು ಕರೆನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಣ್ಣ ಕೈಗಾರಿಕೆಗಳ ಸಂಘದ ಜಿಲ್ಲಾಧ್ಯಕ್ಷ ಎನ್.ಎ.ಇಂದ್ರೇಶ್ ವಹಿಸಿದ್ದರು. ಕಾಸಿಯಾ ಸದಸ್ಯ ಸುಭಾಷ್ ಸಿ ಭಟ್ ಉದ್ಘಾಟಿಸಿದರು. ಕೆಎಸ್‌ಎಫ್‌ಸಿ ವ್ಯವಸ್ಥಾಪಕಿ ಎಚ್.ಪ್ರಮೀಳಾ, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಈ.ಈ.ಅಶೋಕ್, ಜಿಲ್ಲಾ ಕೈಗಾರಿಕಾ ಕೇಂದ್ರ ಪ್ರಭಾರಿ ಸಹಾಯಕ ನಿರ್ದೇಶಕ ಎಸ್.ಎಚ್.ಚಿಕ್ಕಪ್ಪ, ಶ್ರೀಪ್ರಸಾದ್ ಕೃಷ್ಣತ್ ಶೇಟ್ ಮತ್ತಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.