ಕನ್ನಡಪ್ರಭ ವಾರ್ತೆ ಚಳ್ಳಕೆರೆ

ನೂರಾರು ಕನಸು ಹೊತ್ತು ಪಿಎಸ್ಐ ಪರೀಕ್ಷೆ ಬರೆದವರು, ಬಡತನ ಕುಟುಂಬವಿದ್ದರೂ ಸಾಧನೆ ಮಾಡಬೇಕೆಂಬ ಹಂಬಲ ಎಲ್ಲರಲ್ಲೂ ಹೆಚ್ಚಾಗಿಯೇ ಇತ್ತು. ಪಿಎಸ್ಐ ಆಗಬೇಕೆಂದು ಹಗಲು ರಾತ್ರಿ ಎನ್ನದೆ ಅಬ್ಯಾಸ ಮಾಡಿ 2023ರಲ್ಲಿ ಪರೀಕ್ಷೆ ಬರೆದು ತಮ್ಮ ಆಸೆಯನ್ನು ಈಡೇರಿಸಿಕೊಳ್ಳುವತ್ತ ಸಾಗಿದ್ದರು. ಆದರೆ, ಜವರಾಯನ ಅಟ್ಟಹಾಸಕ್ಕೆ ಮೂರು ಜೀವಗಳು ಬಲಿಯಾದ ಘಟನೆ ಭಾನುವಾರ ಬೆಳ್ಳಗೆ ನಡೆದಿದೆ.

ರಾಯಚೂರು ಮೂಲದ ಅಮರೇಶ್ ಬರ್ಗಿ (29), ತೀರ್ಥಹಳ್ಳಿಯ ಸಚ್ಚಿನ್(29), ಬಳ್ಳಾರಿಯ ಮಂಜುನಾಥ ಧಾರಿಮಣಿ (32) ಸ್ಥಳದಲ್ಲೇ ಸಾವನಪ್ಪಿ, ಬೆಳಗಾವಿಯ ಮಹಂತೇಶ್ (30), ಶಿವಮೊಗ್ಗ ಜಿಲ್ಲೆಯ ಉರುಳಗಲ್ಲು ಗ್ರಾಮದ ಸಿವಿಲ್ ಪಿಎಸ್ಐ ಎಲ್.ಈಶ್ವರ (28) ತೀರ್ವವಾಗಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನ ಶಸಸ್ತ್ರ ಮೀಸಲು ಪಡೆಯ ಸಬ್ಇನ್ಸ್ಪೆಕ್ಟರ್ (ಆರ್‌ಎಸ್ಐ)ಗಳಾಗಿ ಆಯ್ಕೆಗೊಂಡ ಇವರು ಪ್ರೊಫೆಷನರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇನ್ನೊಂದು ತಿಂಗಳೊಳಗೆ ಪ್ರೊಫೆಷನರಿ ಮುಗಿಸಿ ಹಲವಾರು ಕೇಂದ್ರಗಳಿಗೆ ಹೋಗಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.

ಅಲ್ಲದೆ ಆರ್‌ಎಸ್‌ಐಗೆ ಆಯ್ಕೆಗೊಂಡ ಸ್ನೇಹಿತ ವೀರೇಶ ಎಂಬುವವರ ವಿವಾಹ ಬಳ್ಳಾರಿಯ ವಾಲ್ಮೀಕಿ ಭವನದಲ್ಲಿ ಭಾನುವಾರ ನಡೆಯುತ್ತಿತು. ಈ ವಿವಾಹ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಬಳ್ಳಾರಿಗೆ ಕಾರಿನಲ್ಲಿ ಐವರು ಖುಷಿ, ಖುಷಿಯಿಂದಲೇ ಬೆಳಗ್ಗೆ ಹೊರಟವರು. ಆದರೆ ತಾಲೂಕಿನ ಹೆಗ್ಗೆರೆ ಬಳಿ ಚಳ್ಳಕೆರೆ ಕಡೆಗೆ ಬರುತ್ತಿದ್ದ ಲಾರಿಗೆ ಇವರ ಕಾರು ಹಿಂಬದಿಯಿಂದ ಡಿಕ್ಕಿಯಾಗಿ ಲಾರಿ ಕೆಳಗೆ ಸಿಕ್ಕಿಕೊಂಡಿದೆ. ಅದನ್ನು ಗಮನಿಸದ ಲಾರಿ ಚಾಲಕ ಕಾರನ್ನು ಎಳೆದುಕೊಂಡು ಬಂದ ಪರಿಣಾಮ ಮೂವರು ಮೃತಪಟ್ಟಿದ್ದು, ಮತ್ತಿಬ್ಬರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.


ಈಗಾಗಲೇ ಪ್ರೊಬೇಷನರಿ ಡಿಕ್ಲಿಯರ್ ಅಗುವ ಹಂತದಲ್ಲಿದ್ದ ಮಂಜುನಾಥ ಧಾರಿಮಣಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಭದ್ರತೆಯಲ್ಲಿ, ಸಚಿನ್ ಬೆಂಗಳೂರು ಸಿಟಿ ವಿವಿಐಪಿ ಸೆಕ್ಯೂರಿಟಿಯಾಗಿ, ಅಮರೇಶ್ ಬರ್ಗಿ ಸಿಎಆರ್ ಪಶ್ಚಿಮ, ಮಹಾಂತೇಶ್ ಸಿಎಆರ್ ಉತ್ತರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಹೆಗ್ಗೆರೆ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟ ಮೂವರು, ಗಾಯಗೊಂಡ ಇಬ್ಬರು ಅವಿವಾಹಿತರು.

*ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಸಚ್ಚಿನ್: ಹುದ್ದೆಗಳನ್ನು ಪಡೆದು ಮದುವೆಯಾಗಬೇಕೆಂಬ ಕನಸು ಕಂಡಿದ್ದ ಸಚ್ಚಿನ್ ಕಳೆದ ಎರಡ್ಮೂರು ತಿಂಗಳ ಹಿಂದೆಯೇಯಷ್ಟೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಮುಂದಿನ ತಿಂಗಳು ಮದುವೆಯಾಗುವ ಯೋಜನೆಯಲ್ಲಿದರು ಎಂದು ಸ್ನೇಹಿತ ಮಂಜು ತಿಳಿಸಿದ್ದಾರೆ.

*ಅಕ್ರಂದನ: ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ನಡೆದ ಲಾರಿ-ಕಾರು ಡಿಕ್ಕಿಯಲ್ಲಿ ಮೂವರು ಶಸಸ್ತ್ರ ಮೀಸಲು ಪಡೆಯ ಸಬ್‌ ಇನ್ಸ್ಪೆಕ್ಟರ್ (ಆರ್‌ಎಸ್ಐ)ಗಳು ಸಾವನಪ್ಪಿದ ಸುದ್ದಿ ತಿಳಿದು ಸಾರ್ವಜನಿಕ ಆಸ್ಪತ್ರೆಗೆ ದೌಡಾಯಿಸಿದ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಕಷ್ಟಪಟ್ಟು ಓದಿಸಿ, ನೂರಾರು ಕನಸು ಹೊತ್ತು ಪೊಲೀಸ್ ಹುದ್ದೆಗೆ ಕಳಿಸಿದ ಬದುಕು ಕಮರಿತು ಎಂದು ಗೋಳಾಡಿದರು.

*ಲಾರಿ ಚಾಲಕನ ಸ್ಪಷ್ಟಣೆ: ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ನಡೆದ ಅಪಘಾತಕ್ಕೀಡಾದ ಲಾರಿ ಚಾಲಕ ಜಾರ್ಖಂಡ್ ಮೂಲದ ಲಾರಿ ಚಾಲಕ ಇಮಾಮುದ್ದೀನ್ ಪ್ರತಿಕ್ರಿಯಿಸಿ, ಖಾಲಿ ಲಾರಿಯನ್ನು ಬಳ್ಳಾರಿಗೆ ಕೊಂಡೊಯ್ಯುತ್ತಿದ್ದು ತುಮಕೂರಿನಿಂದ ಬಳ್ಳಾರಿಯ ಜಿಂದಾಲ್ ಗೆ ನಿಧಾನವಾಗಿ ಒಂದೇ ಬದಿಯಲ್ಲಿ ತೆರಳುತ್ತಿದ್ದೆನು. ಹಿಂಬದಿಯಿಂದ ಕಾರು ಡಿಕ್ಕಿಯಾಗಿರುವುದು ತಿಳಿದ ತಕ್ಷಣ ಲಾರಿ ನಿಲ್ಲಿಸಿದ್ದೇನೆ ಎಂದು ತಿಳಿಸಿದ್ದಾನೆ.

*ಗೃಹ ಸಚಿವರ ಭೇಟಿ: ಸುದ್ದಿ ತಿಳಿಯುತ್ತಲೇ ತುಮಕೂರಿನಿಂದ ಅಪಘಾತವಾದ ಸ್ಥಳಕ್ಕೆ ಆಗಮಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಟಿ.ರಘುಮೂರ್ತಿ ಕುಟುಂಬ ವರ್ಗಕ್ಕೆ ಸಾಂತ್ವಾನ ಹೇಳಿದರು. ಈ ವೇಳೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅಪಘಾತದಲ್ಲಿ 3 ಆರ್‌ಎಸ್ಐಗಳು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಳ್ಳಾರಿಯಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಎಲ್ಲರೂ ಇತ್ತೀಚೆಗೆ ನೇಮಕ ಆದವರು, ರಜೆ ಮೇಲೆ ಬಳ್ಳಾರಿಯ ವಿವಾಹ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ಅಪಘಾತದಲ್ಲಿ ಯಾರದು ತಪ್ಪು ಎಂದು ತನಿಖೆ ತಿಳಿಯಬೇಕಿದೆ, ಈ ಘಟನೆ ದುರದೃಷ್ಟಕರ, ಮೃತರು ರಜೆಯಲ್ಲಿದ್ದಾಗ ಈ ಘಟನೆ ನಡೆದಿದೆ. ಯಾವ ರೀತಿ ನೆರವು ನೀಡಬಹುದು ಎಂಬ ಬಗ್ಗೆ ಚರ್ಚಿಸಿ ಸರ್ಕಾರದಿಂದ ನೆರವು ಕೊಡಿಸುವ ಭರವಸೆ ನೀಡಿದರು.

ಸ್ಥಳಕ್ಕೆ ಐಜಿಪಿ ಲಾಭೂರಾಮ್, ಡಿಐಜಿಪಿ ಕೆ.ಪರಶುರಾಮ್, ಜಿಲ್ಲಾ ರಕ್ಷಣಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಎಸ್‌ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.