ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಗ್ರಾಮಾಂತರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಹೆಣ್ಣಿನಿಂದ ಅಸಾಧ್ಯ ಎಂಬುದು ಯಾವುದು ಇಲ್ಲ. ಬದುಕಿನ ಅನೇಕ ಸವಾಲುಗಳನ್ನು ಎದುರಿಸುವ ಮೂಲಕ ಮನೆ ಮತ್ತು ಸಮಾಜವನ್ನು ಕಾಪಾಡುವ ಶಕ್ತಿ ಹೆಣ್ಣಿಗಿದೆ ಎಂದು ಸಮಾಜ ಸೇವಕಿ ಪಲ್ಲವಿ ಸಿ.ಟಿ.ರವಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಗ್ರಾಮಾಂತರ ಮಹಿಳಾ ಮೋರ್ಚಾದಿಂದ ಆಯೋಜಿಸಿದ್ಧ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹೆಣ್ಣು ಮನಸ್ಸು ಮಾಡಿದರೆ ಸಮಾಜದ ಯಾವುದೇ ಕ್ಷೇತ್ರ ಗಳಲ್ಲಿ ಗೆಲುವು ಸಾಧಿಸಬಲ್ಲಳು. ಕುಟುಂಬದ ಜವಾಬ್ದಾರಿ, ಮಕ್ಕಳ ಪಾಲನೆ ಜತೆಗೆ ವಿವಿಧ ರಂಗದಲ್ಲಿ ಹೆಣ್ಣು ಇಂದು ಸಾಧನೆ ಮಾಡುವ ಮೂಲಕ ಪುರುಷರ ಸರಿಸಮಾನವಾಗಿ ಬೆಳೆದು ನಿಂತಿದ್ದಾಳೆ ಎಂದು ಹೇಳಿದರು.

ವಕೀಲೆ ಡಿ.ಎಸ್.ಮಮತಾ ಮಾತನಾಡಿ, ಆಧುನಿಕ ಮಹಿಳೆಯರಿಗೆ ವಿಶೇಷವಾಗಿ ಹೆಚ್ಚು ಕಾನೂನಿನ ತ ಳುವಳಿಕೆ ಅವಶ್ಯವಿದೆ. ಸಂಕಷ್ಟು ಸಮಯದಲ್ಲಿ ನೆರವಾಗುವ ವಿವಿಧ ಮಹಿಳಾ ಸಹಾಯವಾಣಿಗಳ ಬಗ್ಗೆ ತಿಳಿಸಬೇಕು. ಇದು ಮಹಿಳಾ ರಕ್ಷಣೆಗೆ ಅತ್ಯಂತ ಹೆಚ್ಚು ಪರಿಣಾಮಕಾರಿ ಎಂದರು.


ಬಿಜೆಪಿ ನಗರ ಮಂಡಲ ಅಧ್ಯಕ್ಷೆ ಪವಿತ್ರಾ ಮಧು ಗುಂಡ ಮಾತನಾಡಿ, ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸ ಬೇಕು. ದಿನದ 24 ಗಂಟೆಗಳಲ್ಲಿ ಕನಿಷ್ಟ ಒಂದು ಗಂಟೆ ಮಹಿಳೆಯರು ತಮ್ಮ ಸ್ವಂತ ಆರೋಗ್ಯ ಮತ್ತು ಇತರೆ ಚಟುವಟಿಕೆಗಳಿಗೆ ಮೀಸಲಿಡಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷೆ ಲೀಲಾ ಪರಮೇಶ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತ ಅನಿಲ್ ಕುಮಾರ್, ತಾಪಂ. ಮಾಜಿ ಸದಸ್ಯೆ ದ್ರಾಕ್ಷಾಯಿಣಿ ಪ್ರಾಣೇಶ್, ಮುಖಂಡರಾದ ರೇಖಾ, ಅಂಬಿಕಾ ಪ್ರಕಾಶ್, ಆವಿಲಾ ಚಂದ್ರಶೇಖರ್, ಸಂಗೀತ ಪ್ರಸಾದ್, ಪಲ್ಲವಿ ನೀವೇಶ್, ಆಶಾ ರಾಣಿ, ವಿಮಲ ತೊಗರಿಹಂಕಲ್, ಚೈತ್ರಾ ಉಪಸ್ಥಿತರಿದ್ದರು.