ಕನ್ನಡಪ್ರಭ ವಾರ್ತೆ ಬೆಳಗಾವಿ
ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವುದು ಹಾಗೂ ಬಡವರ ಪರ ನೀತಿಗಳನ್ನು ಜಾರಿಗೆ ತರುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬುಧವಾರ ಸಿಟಿಐಟಿಯು ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ ಸಂಸದ ಕಚೇರಿ ಎದುರು ಪ್ರತಿಭಟನೆ ನಡೆಸಿ ಸಂಸದೆ ಮಂಗಳಾ ಅಂಗಡಿ ಅವರಿಗೆ ಮನವಿ ಸಲ್ಲಿಸಿದರು.ಕೇಂದ್ರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಮಿಕರ ಪ್ರತಿಭಟನೆ ಎರಡನೇ ದಿನವಾದ ಬುಧವಾರವೂ ಮುಂದುವರೆಯಿತು.ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು, ರೈತರ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ನಿಗದಿಪಡಿಸಬೇಕು, ರಸಗೊಬ್ಬರ ಸೇರಿದಂತೆ ಕೃಷಿ ಸಾಮಗ್ರಿಗಳಿಗೆ ಸಬ್ಸಿಡಿ ಕಡಿತಗೊಳಿಸುವ ನೀತಿಗಳನ್ನು ಕೈಬಿಡಬೇಕು. ರೈಲ್ವೆ, ವಿದ್ಯುತ್ ಸೇರಿದಂತೆ ಎಲ್ಲ ಕ್ಷೇತ್ರವನ್ನು ಖಾಸಗೀಕರಣಗೊಳಿಸುವುದನ್ನು ಕೈಬಿಡಬೇಕು. ಗ್ರಾಪಂ ನೌಕರರಿಗೆ ಕನಿಷ್ಠ ವೇತನ ₹ 31 ಸಾವಿರ ಹಾಗೂ ₹6 ಸಾವಿರ ಪಿಂಚಣಿ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.ಐಪಿಡಿ ಸಾಲಪ್ಪ ವರದಿಯಂತೆ ಸ್ವಚ್ಛತಾಗಾರರನ್ನು ನೇಮಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ ವೇತನ ಹೆಚ್ಚಳ ಮಾಡುವುದು, ತೀವ್ರವಾದ ಅನಾರೋಗ್ಯಕ್ಕೆ ತುತ್ತಾದ ನೌಕರರಿಗೆ ಆಸ್ಪತ್ರೆ ವೆಚ್ಚ ಭರಿಸಬೇಕು. ಗುತ್ತಿಗೆ ಮತ್ತು ಹೊರಗುತ್ತಿಗೆ ನೇಮಕಾತಿ ರದ್ದುಗೊಳಿಸಬೇಕು, ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ವರ್ಗಾವಣೆ ಅವಕಾಶ ಕಲ್ಪಿಸಬೇಕು. ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗದಿಗೊಳಿಸುವುದು ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರಸಕ್ತ 2024-25ನೇ ಸಾಲಿನ ಆರ್ಥಿಕ ಆಯವ್ಯಯದಲ್ಲಿ ಸಿಐಟಿಯು ಕಾರ್ಮಿಕರಿಗೆ ಅನುದಾನ ಹೆಚ್ಚಳ ಮತ್ತು ಕನಿಷ್ಠ ವೇತನ ಘೋಷಿಸುವಂತೆ ಒತ್ತಾಯಿಸಿದರು. ಕೇಂದ್ರ ಸರ್ಕಾರ ಕಾರ್ಮಿಕರ ವಿರೋಧಿ ನೀತಿಗಳನ್ನು ಜಾರಿ ತರುತ್ತಿದೆ, ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ಪರವಾಗಿದೆ ಹಾಗಾಗಿ ಕಾರ್ಮಿಕರ ದುಡಿಯುವ ಸೌಲಭ್ಯಗಳನ್ನು ಕಡಿತಗೊಳಿಸಿಲಾಗುತ್ತಿದೆ. ಸಣ್ಣ ಕಾರ್ಮಿಕರ 11 ಜನ ಕೆಲಸ ಮಾಡುತ್ತಿದ್ದರೆ ಬೋನಸ್ ನೀಡುತ್ತಿದ್ದರು. ಕಾಯಿದೆ ತಿದ್ದುಪಡಿ ಆದಮೇಲೆ 33 ಜನಕ್ಕೆ ಏರಿಸಿ, ಕಾರ್ಮಿಕರನ್ನು ಗುಲಾಮರನ್ನಾಗಿ ದುಡಿಯುಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಸಂಸದೆ ಮಂಗಳಾ ಅಂಗಡಿ ಮನವಿ ಸ್ವೀಕರಿಸಿ ಮಾತನಾಡಿ, ಕಾರ್ಮಿಕರ ಮನವಿ ಕೇಂದ್ರ ಸರ್ಕಾರಕ್ಕೆ ತಿಳಿಸುತ್ತೇನೆ, ನಿಮಗೆ ನ್ಯಾಯ ಒದಗಿಸುತ್ತೇನೆ ಎಂದು ಭರವಸೆ ನೀಡಿದರು. ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿ ಕಾರ್ಮಿಕರ ಬಗ್ಗೆ ಸಭೆ ಮಾಡಲಾಗಿದೆ, ಸಭೆಯಲ್ಲಿ ಕಾರ್ಮಿಕರ ಬಗ್ಗೆ ಚರ್ಚೆಸಲಾಗಿದೆ. ಶೀಘ್ರದಲ್ಲಿ ನಿಮ್ಮ ಬೇಡಿಕೆಗಳು ಈಡೇರುತ್ತೇವೆ. ಸಮಿತಿಯು ವರದಿಯನ್ನು ಇಲಾಖೆಗೆ ನೀಡಿದೆ ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಜಿ.ಎಂ.ಜೈನೆಖಾನ್, ಎಲ್.ಎಸ್ ನಾಯಕ, ವೀರಭದ್ರ ಕಂಪ್ಲಿ, ಯಲ್ಲಪ್ಪ ನಾಯಕ, ಯಲ್ಲನಗೌಡ ಪಾಟೀಲ, ಮಡ್ಡೆಪ್ಪ ಭಜಂತ್ರಿ, ರಮೇಶ ಹೋಳಿ, ಗಣಪತಿ ಗುರವ, ಮಹಾಂತೇಶ ಪಾಟೀಲ, ಮಂಜುನಾಥ ಕರ್ಕಿ, ಜೀತೇಂದ್ರ ಕಾಗನಕರ, ಬಾಬು ಗೇನಾನಿ, ಬಿ.ಸಿ.ತಳವಾರ ಸೇರಿದಂತೆ ಮೊದಲಾದವರು ಇದ್ದರು.