ನಾಳೆಯಿಂದ ಕೆಸಿಡಿ ಮೈದಾನದಲ್ಲಿ ಮೂರು ದಿನ ಧಾರವಾಡ ಹಬ್ಬ

KannadaprabhaNewsNetwork |  
Published : Jan 25, 2024, 02:01 AM IST
habba | Kannada Prabha

ಸಾರಾಂಶ

ಇಲ್ಲಿಯ ಕರ್ನಾಟಕ ಕಾಲೇಜು ಮೈದಾನದಲ್ಲಿ ಜ. 26ರಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿದೆ.

ಧಾರವಾಡ: ಜಾನಪದ, ಸಂಗೀತ, ಕ್ರೀಡೆ ಸೇರಿದಂತೆ ಹತ್ತು ಹಲವು ಸಂಗತಿಗಳನ್ನು ಒಳಗೊಂಡ ಧಾರವಾಡ ಹಬ್ಬವನ್ನು ಇಲ್ಲಿಯ ಕರ್ನಾಟಕ ಕಾಲೇಜು ಮೈದಾನದಲ್ಲಿ ಜ. 26ರಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ಸಂಯೋಜಕ ಗಿರೀಶ ಹೆಗಡೆ ಹೇಳಿದರು.

ಹೆಗಡೆ ಗ್ರುಪ್, ವಿಜನ್ ಫೌಂಡೇಶನ್, ನ್ಯೂಸ್ ಟೈಮ್ ಹಾಗೂ ಕರ್ನಾಟಕ ವಿವಿಯ ಲಲಿತ ಕಲಾ ಹಾಗೂ ಸಂಗೀತ ಕಾಲೇಜು ಸಹಯೋಗದಲ್ಲಿ ಧಾರವಾಡ ಹಬ್ಬ ನಡೆಯಲಿದ್ದು, ಜ. 26ರಂದು ಸಂಜೆ 6ಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್ ಉದ್ಘಾಟಿಸಲಿದ್ದಾರೆ. ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎನ್. ಕೋನರಡ್ಡಿ, ವೈಶುದೀಪ ಫೌಂಡೇಶನ್ ಅಧ್ಯಕ್ಷರಾದ ಶಿವಲೀಲಾ ಕುಲಕರ್ಣಿ ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಜ. 26 ರಂದು ಖ್ಯಾತ ನಿರ್ದೇಶಕ ಡಾ. ವಿ. ನಾಗೇಂದ್ರ ಪ್ರಸಾದ ಅವರಿಂದ ನಿರ್ದೇಶಿಸಲ್ಪಟ್ಟ ಸಂವಿಧಾನ ಪೀಠಿಕೆ ಎಂಬ ವಿಶೇಷ ಕಾರ್ಯಕ್ರಮ ಜರುಗಲಿದ್ದು, ಅಂದು ಸಂಪೂರ್ಣವಾಗಿ ದೇಶಭಕ್ತಿ ಗೀತೆಗಳು ಕಾರ್ಯಕ್ರಮದ ಮೆರಗು ಹೆಚ್ಚಿಸಲಿವೆ. ಸಂಗೀತ ಕಾಲೇಜು ವಿಧ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9.30ಕ್ಕೆ ಆಲ್ ಓಕೆ ತಂಡ ಹಾಗೂ ಚಿತ್ರನಟ ವಿನಯ ರಾಘವೇಂದ್ರ ರಾಜಕುಮಾರ ತಂಡದ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದೆ ಎಂದರು.

ಜ. 27ರ ಶನಿವಾರ ಸಂಜೆ 6ರ ನಂತರ ಟ್ವಿನ್ ಸಿಟಿ ಐಡಲ್ ಸೀಸನ್-5ರ ಸ್ಪರ್ಧೆ ನಡೆಯಲಿದ್ದು, ನಿರ್ಣಾಯಕರಾಗಿ ಖ್ಯಾತ ನಿರ್ದೇಶಕರಾದ ಡಾ. ವಿ ನಾಗೇಂದ್ರ ಪ್ರಸಾದ, ಸಂಗೀತ ನಿರ್ದೇಶಕ ವಿ. ಮನೋಹರ ಭಾಗವಹಿಸಲಿದ್ದಾರೆ. ಅಂತಿಮ ಸ್ಪರ್ಧೆಯಲ್ಲಿ ವಿಜೇತರಾದ ಎಂಟು ಜನ ಯುವ ಗಾಯಕರು ಭಾಗವಹಿಸಲಿದ್ದಾರೆ. ನಂತರ ಕಾಮಿಡಿ ಕಿಲಾಡಿ ತಂಡದವರು ಕಾರ್ಯಕ್ರಮ ನಡೆಸಿ ಕೊಡಲಿದ್ದು, ಹಿಂದಿ ಚಿತ್ರ ಧಾಖ್ ತಂಡದ ನಾಯಕ ನಟ ಸಲೀಮ ಮುಲ್ಲಾನವರ ಹಾಗೂ ಸಿನಾ ಶಹಾಬಾದಿ, ರುಸ್ಲಾನ್ ಮುಮತಾಜ್ ರಂಜಿಸಲಿದ್ದಾರೆ. ಟ್ವಿನ್ ಸಿಟಿ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಚಾಲನೆ ನೀಡಲಿದ್ದು, ಶಾಸಕರಾದ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ್, ಶ್ರೀನಿವಾಸ ಮಾನೆ, ಮಾಜಿ ಮಹಾಪೌರ ಈರೇಶ್ ಅಂಚಟಗೇರಿ, ಮೋಹನ ಅಸುಂಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಇನ್ನು, ಜ. 28ರಂದು ಸಂಜೆ 6ರಿಂದ ಸಮಾರೋಪ ನಡೆಯಲಿದ್ದು ಖ್ಯಾತ ಗಾಯಕಿ ಅನನ್ಯ ಭಟ್‌ ಆಗಮಿಸಲಿದ್ದಾರೆ. ಅಂದು ವಿವಿಧ ಕ್ಷೇತ್ರದ ಗಣ್ಯರಿಗೆ ಸನ್ಮಾನ ಮಾಡಲಾಗುವುದು. ಮೂರು ದಿನಗಳ ಕಾಲ ನಡೆಯಲಿರುವ ಧಾರವಾಡ ಹಬ್ಬದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನತೆ ಭಾಗವಹಿಸಬೇಕೆಂದು ಗಿರೀಶ್ ಹೆಗಡೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಘಟಕರಾದ ಮುಸ್ತಫಾ ಕುನ್ನಿಭಾವಿ, ಸತೀಶ್ ಹೆಗಡೆ, ಬಾಸ್ಕೊ, ಸುನೀಲ ಜಾ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ