ರಾಜನಹಳ್ಳಿ ವಾಲ್ಮೀಕಿ ಜಾತ್ರೆ ಯಶಸ್ಸಿಗೆ ಮನವಿ

KannadaprabhaNewsNetwork | Published : Jan 25, 2024 2:01 AM

ಸಾರಾಂಶ

ಈ ಬಾರಿ ಉಚಿತ ಬಸ್ ಸೌಲಭ್ಯ ಇರುವುದರಿಂದ ಮಹಿಳೆಯರು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು.

ಹರಪನಹಳ್ಳಿ: ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಫೆ. 8 ಮತ್ತು 9ರಂದು ನಡೆಯಲಿರುವ 6ನೇ ವರ್ಷದ ವಾಲ್ಮೀಕಿ ಜಾತ್ರೆಗೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದವರು ಭಾಗವಹಿಸಿ ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ವೈ.ಡಿ. ಅಣ್ಣಪ್ಪ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗಳ ಆದೇಶದಂತೆ ಕಳೆದ 11 ದಿನಗಳಿಂದ ತಾಲೂಕಿನ ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ನೀಡಿ ಎರಡು ದಿನಗಳ ಕಾಲ ನಡೆಯುವ ವಾಲ್ಮೀಕಿ ಜಾತ್ರೆಗೆ ಆಗಮಿಸುವಂತೆ ಕೋರಿದ್ದು, ಈ ವರ್ಷ ವಿಶೇಷವಾಗಿ ಗ್ರಾಮೀಣ ಮತ್ತು ಪಟ್ಟಣ ಭಾಗದಲ್ಲಿ ಅನ್ಯ ಸಮುದಾಯದವರನ್ನು ಸಹ ಜಾತ್ರೆಗೆ ಆಹ್ವಾನಿಸಲಾಗಿದೆ ಎಂದರು.

ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷೆ ಎಚ್.ಟಿ. ವನಜಾಕ್ಷಿ ಶಿವಯೋಗಿ ಮಾತನಾಡಿ, ಶ್ರೀಗಳು ನನಗೆ ವಾಲ್ಮೀಕಿ ಜಾತ್ರಾ ಸಮಿತಿಯ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ ಮೇಲೆ ಗ್ರಾಮೀಣ ಭಾಗಕ್ಕೆ ಸಂಚರಿಸಿದ ಸಂದರ್ಭದಲ್ಲಿ ಅಭೂತಪೂರ್ವವಾಗಿ ನಮ್ಮನ್ನು ಸ್ವಾಗತಿಸಿದ್ದಾರೆ. ನಮ್ಮನ್ನು ಅವರ ಕುಟುಂಬದಂತೆ ಕಂಡಿದ್ದಾರೆ. ಇದರಿಂದ ನಮಗೆ ಸಮುದಾಯದ ಸ್ಥಿತಿಗತಿಯನ್ನು ತಿಳಿಯಲು ಸಾಧ್ಯವಾಯಿತು. ಜತೆಗೆ ಕೆಲ ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸಲು ಪ್ರಯತ್ನಿಸಲಾಯಿತು. ಈ ಬಾರಿ ಉಚಿತ ಬಸ್ ಸೌಲಭ್ಯ ಇರುವುದರಿಂದ ಮಹಿಳೆಯರು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ. ಹಾಲೇಶ, ವಾಲ್ಮೀಕಿ ಸಮುದಾಯದ ಮಾಜಿ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಕೆ. ಮಂಜುನಾಥ, ಮಹಿಳಾ ಘಟಕದ ಉಪಾಧ್ಯಕ್ಷೆ ಲಕ್ಷ್ಮಿಚಂದ್ರಶೇಖರ, ಮುಖಂಡರಾದ ಆರ್. ಲೋಕೇಶ, ಗಿಡ್ಡಳ್ಳಿ ನಾಗರಾಜ, ಮಂಡಕ್ಕಿ ಸುರೇಶ್, ಕೆ. ಬಸವರಾಜ, ದ್ಯಾಮಜ್ಜಿ ಹನುಮಂತಪ್ಪ, ರಾಯದುರ್ಗದ ವಾಗೀಶ ರೇವಣಸಿದ್ದಪ್ಪ, ಗುಂಡಿ ಮಂಜುನಾಥ್, ತಳವಾರ ನಾಗರಾಜ, ಮೂಲಿಮನಿ ಹನುಮಂತ, ಪಾಲಾಕ್ಷಪ್ಪ, ಮ್ಯಾಕಿ ದುರುಗಪ್ಪ, ಕಮ್ಮಾರ ಶಂಕರ, ಪಿ. ಪರಶುರಾಮ, ಬಾಣದ ಗಂಗಪ್ಪ, ಬಾಗಳಿ ಆನಂದಪ್ಪ ಸೇರಿದಂತೆ ಇತರರು ಇದ್ದರು.

Share this article