ಕೆಎಂಎಫ್‌ನಿಂದ ಮೆಕ್ಕೆಜೋಳ ಖರೀದಿಗೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Oct 10, 2023 1:00 AM

ಸಾರಾಂಶ

ಕೆಎಂಎಫ್‌ ಸೂಕ್ತ ಬೆಂಬಲ ಬೆಲೆ ನೀಡಿ ರೈತರಿಂದ ನೇರವಾಗಿಯೇ ಮೆಕ್ಕೆಜೋಳ ಖರೀದಿಸಬೇಕೆಂದು ಒತ್ತಾಯಿಸಿ ಜೆಡಿಎಸ್‌ ನಾಯಕ ಎಚ್‌.ಡಿ. ರೇವಣ್ಣ ನೇತೃತ್ವದಲ್ಲಿ ಸೋಮವಾರ ಡೀಸಿ ಕಚೇರಿ ಮುಂದೆ ಜೋಳ ಸುರಿದು ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಹಾಸನ ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರದ ವಿರುದ್ಧ ಎಚ್‌.ಡಿ. ರೇವಣ್ಣ ಆಕ್ರೋಶ ತೀವ್ರ ಬರದ ನಡುವೆಯೂ ರೈತರು ಕಷ್ಟಪಟ್ಟು ಬೆಳೆದ ಮೆಕ್ಕೆಜೋಳವನ್ನು ಸೂಕ್ತ ಬೆಂಬಲ ಬೆಲೆಯಲ್ಲಿ ಕೆಎಂಎಫ್‌ ರೈತರಿಂದ ನೇರವಾಗಿಯೇ ಖರೀದಿಸಬೇಕೆಂದು ಒತ್ತಾಯಿಸಿ ಜೆಡಿಎಸ್‌ ನಾಯಕ ಎಚ್‌.ಡಿ. ರೇವಣ್ಣ ನೇತೃತ್ವದಲ್ಲಿ ಸೋಮವಾರ ಡೀಸಿ ಕಚೇರಿ ಮುಂದೆ ಜೋಳ ಸುರಿದು ಪ್ರತಿಭಟನೆ ನಡೆಸಲಾಯಿತು. ರೈತರ ಟ್ರ್ಯಾಕ್ಟರ್‌ ಮೂಲಕ ಮೆಕ್ಕೆಜೋಳದೊಂದಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದ ಅವರು, ಪಶು ಆಹಾರ ಉತ್ಪಾದನೆಗೆ ಬೇಕಾಗುವ ಪ್ರಮುಖ ಕಚ್ಚಾ ಪದಾರ್ಥವಾದ ಮೆಕ್ಕೆಜೋಳವನ್ನು ಸುಗ್ಗಿಕಾಲದಲ್ಲಿ ನೇರವಾಗಿ ರೈತರಿಂದ ಖರೀದಿ ಮಾಡಿ ದಾಸ್ತಾನು ಮಾಡಿಕೊಳ್ಳಲು ಕಳೆದ ತಿಂಗಳು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ನಾನು ಪ್ರಸ್ತಾಪಿಸಿದ್ದೇನೆ. ಹಾಗೂ ಲಿಖಿತವಾಗಿ ಪತ್ರವನ್ನು ಸಹ ಬರೆದಿರುತ್ತೇನೆ. ಪ್ರಸ್ತುತ ಮೆಕ್ಕೆಜೋಳವನ್ನು ಎಂ.ಎಸ್‌.ಪಿ. ಬೆಲೆಯನ್ನು ನಿಗದಿಪಡಿಸಿಕೊಂಡು ರೈತರಿಂದ ನೇರವಾಗಿ ಮೆಕ್ಕಜೋಳವನ್ನು ಖರೀದಿ ಮಾಡಲು ಆಡಳಿತ ಮಂಡಳಿಯಲ್ಲಿ ವಿಷಯ ಪ್ರಸ್ತಾಪಿಸಿದ್ದರೂ ಕರ್ನಾಟಕ ಹಾಲು ಮಂಡಳಿಯಿಂದ ಈವರೆಗೆ ಯಾವುದೇ ಪೂರಕ ಕ್ರಮ ಕೈಗೊಂಡಿರುವುದಿಲ್ಲ ಎಂದರು. ಫೆಬ್ರವರಿ ತಿಂಗಳಲ್ಲಿ ಮೆಕ್ಕೆಜೋಳವನ್ನು ಕೆ.ಎಂ.ಎಫ್‌ ಮೂಲಕ ಪ್ರತೀ ಕ್ವಿಂಟಲ್‌ಗೆ ರು. ೨೪೦೦ರಂತೆ ಟೆಂಡರ್‌ ಮುಖಾಂತರ ಖರೀದಿಸಲಾಗಿರುತ್ತದೆ. ಪ್ರಸ್ತುತ ಸುಗ್ಗಿ ಕಾಲ ಪ್ರಾರಂಭವಾಗಿದ್ದು, ರೈತರು ಮೆಕ್ಕೆಜೋಳವನ್ನು ಕಟಾವು ಮಾಡುತ್ತಿರುತ್ತಾರೆ. ಭಾರತ ಸರ್ಕಾರವು ಪ್ರತಿ ಕ್ವಿಂಟಲ್‌ಗೆ ನಿಗದಿಪಡಿಸಿರುವ ಬೆಂಬಲ ಬೆಲೆ ೨೦೯೦ ರು. ಆಗಿದ್ದು, ಹಿಂದಿನ ಸಾಲಿನ ಟೆಂಡರ್‌ ಖರೀದಿ ದರವನ್ನು ಹೋಲಿಸಿದಾಗ ಪ್ರಸ್ತುತ ಪ್ರಸ್ತಾಪಿಸಿರುವ ಬೆಂಬಲ ಬೆಲೆಯು ಅತೀ ಕಡಿಮೆಯಾಗಿರುತ್ತದೆ. ಕೆಎಂಎಫ್‌ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ರೈತರು ಬೆಳೆದ ಎಲ್ಲಾ ಮೆಕ್ಕೆಜೋಳವು ಕಡಿಮೆ ಬೆಲೆಗೆ ವ್ಯಾಪಾರಸ್ಥರ ಪಾಲಾಗುತ್ತಿದೆ. ಪುನಃ ಇದೇ ವ್ಯಾಪಾರಸ್ಥರಿಂದ ಕಟಾವು ಟೆಂಡರ್‌ ಕರೆದು ಅತಿ ಹೆಚ್ಚಿನ ದರದಲ್ಲಿ ಮೆಕ್ಕೆಜೋಳವನ್ನು ಖರೀದಿ ಮಾಡುವ ಮುಖಾಂತರ ಪಶು ಆಹಾರ ಮಾರಾಟ ಬೆಲೆಯನ್ನು ಹೆಚ್ಚಿಸಿ ಹಾಲು ಉತ್ಪಾದಕರಿಗೆ ನಷ್ಟವುಂಟು ಮಾಡುತ್ತಿದ್ದಾರೆ. ಈ ಅಂಶಗಳ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿ ವ್ಯವಸ್ಥೆಯನ್ನು ಪರಿಷ್ಕರಿಸಿ, ಎಂ.ಎಸ್‌.ಪಿ. ಬೆಲೆಗೆ ಬದಲಾಗಿ ಆಯಾ ಪ್ರದೇಶಗಳಲ್ಲಿರುವ ಮಾರಾಟ ದರಗಳನ್ನು ಪರಿಶೀಲಿಸಿ ಅದಕ್ಕಿಂತ ಸ್ವಲ್ಪ ಹೆಚ್ಚಿನ ದರವನ್ನು ನಿಗದಿಪಡಿಸಿದಲ್ಲಿ ರೈತರು ಕಹಾಮದ ಪಶು ಆಹಾರ ಕಾರ್ಖಾನೆಗಳಿಗೆ ಮೆಕ್ಕೆಜೋಳ ಸರಬರಾಜು ಮಾಡಲು ಆಸಕ್ತಿ ತೋರುತ್ತಾರೆ. ವ್ಯಾಪಾರಸ್ಥರು ರೈತರ ಮನೆಯ ಬಾಗಿಲಿಗೆ ಹೋಗಿ ಖಾಲಿ ಚೀಲಗಳನ್ನು ಉಚಿತವಾಗಿ ಒದಗಿಸಿ ಮೆಕ್ಕೆಜೋಳವನ್ನು ಖರೀದಿ ಮಾಡುವುದರಿಂದ ಹಾಗೂ ರೈತರಿಗೆ ಖಾಲಿ ಚೀಲದ ಖರ್ಚು ಮತ್ತು ಸಾಗಾಣಿಕೆ ವೆಚ್ಚ ಉಳಿತಾಯುತ್ತದೆ ಎನ್ನುವ ಕಾರಣಕ್ಕೆ ರೈತರು ಅನಿವಾರ್ಯವಾಗಿ ವ್ಯಾಪಾರಸ್ಥರು ಕೇಳಿದಷ್ಟು ಬೆಲೆಗೆ ಜೋಳ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಿದರು. ಇದೇ ವೇಳೆ ಶಾಸಕರಾದ ಸಿ.ಎನ್‌. ಬಾಲಕೃಷ್ಣ, ಮಾಜಿ ಶಾಸಕ ಕೆ.ಎಸ್. ಲಿಂಗೇಶ್‌, ಜಿಲ್ಲಾ ಜೆಡಿಎಸ್‌ ವಕ್ತಾರ. ಹೊಂಗೆರೆ ರಘು ಜೆಡಿಎಸ್‌ ತಾಲೂಕು ಅಧ್ಯಕ್ಷ ಎಸ್‌. ದ್ಯಾವೇಗೌಡ, ಜಿ.ಪಂ. ಮಾಜಿ ಅಧ್ಯಕ್ಷ ಸತ್ಯನಾರಾಯಣ, ದುದ್ದ ಲಕ್ಷ್ಮಣಗೌಡ, ನಗರಸಭೆ ಮಾಜಿ ಅಧ್ಯಕ್ಷ , ಸಿ.ಆರ್. ಶಂಕರ್‌, ನಗರಸಭೆ ಸದಸ್ಯರಾದ ವಾಸುದೇವ್‌, ಅಮೀರ್ ಜಾನ್‌, ಸಯಾದ್‌ ಅಕ್ಬರ್, ಕ್ರಾಂತಿ ಪ್ರಸಾದ್‌ ತ್ಯಾಗಿ, ಮುಖಂಡರಾದ ಹೊಸೂರು ಗಂಗಾಧರ್‌, ಸ್ವಾಮಿಗೌಡ, ಅಗಿಲೆ ಮೊಗಣ್ಣಗೌಡ, ಇತರರು ಉಪಸ್ಥಿತರಿದ್ದರು.

Share this article