ಕನ್ನಡಪ್ರಭ ವಾರ್ತೆ ಮಂಗಳೂರು
ಭಾರತದ ಬೇರೆ ಬೇರೆ ಭಾಷೆಗಳಿಂದ ಆಯ್ಕೆಯಾದ 70 ಸಾಕ್ಷ್ಯಚಿತ್ರ ಹಾಗೂ ಜಗತ್ತಿನ ಬೇರೆಬೇರೆ ದೇಶಗಳಿಂದ ಆಯ್ಕೆಯಾದ 310 ಚಲ ಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಅದರಲ್ಲಿ ತುಳು ಭಾಷೆಯ ಜಾನಪದ ವಿಭಾಗದಲ್ಲಿ ಈ ಸಾಕ್ಷ್ಯಚಿತ್ರವನ್ನು ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ ತುಳು ಭಾಷೆಯ ಏಕೈಕ ಸಾಕ್ಷ್ಯಚಿತ್ರವಾಗಿ ಆಯ್ಕೆಯಾಗಿದೆ.
ಮಧ್ಯಕಾಲೀನ ಕರ್ನಾಟಕದ ರಹಸ್ಯ ತಾಂತ್ರಿಕ ಪಂಥಗಳ ಪ್ರಭಾವದಿಂದ ಇಂದಿಗೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದು ಭಾಗಗಳಲ್ಲಿ ಕಂಡುಬರುವ ಒಂದು ಮಹತ್ವದ ಕುಣಿತ ‘ಪುರ್ಸ ಕಟ್ಟುನ’. ಬೆಳ್ತಂಗಡಿ ತಾಲೂಕಿನ ಕುದುರೆಮುಖ ಘಟ್ಟದ ತಳಭಾಗದಲ್ಲಿ ಇಂದಿಗೂ ಪ್ರಚಲಿತವಿರುವ ಈ ಕುಣಿತವು ಸುಗ್ಗಿ ತಿಂಗಳ ಹುಣ್ಣಿಮೆಯ ಆಸುಪಾಸು ದಿನಗಳಲ್ಲಿ ನಡೆಯುತ್ತದೆ. ತುಳು ಭಾಷೆಯನ್ನು ಮಾತನಾಡುವ ಹಲವು ಜನಾಂಗಗಳು ಒಟ್ಟು ಸೇರಿ ನಡೆಸುವ ಈ ಕುಣಿತ ಮೂಲತಃ ಗೌಡ ಸಮುದಾಯದವರು ನಡೆಸುತ್ತಾ ಬಂದದ್ದಾಗಿದೆ. ಆಚರಣೆ, ಮನರಂಜನೆ, ನಂಬಿಕೆ, ವಿಡಂಬನೆ ಮತ್ತು ಸಮನ್ವಯದ ಭಾಗವಾಗಿ ನಡೆಯುವ ಈ ಕುಣಿತದ ಒಳತಿರುಳು ಇದರಲ್ಲಿದೆ. ಒಟ್ಟು 40 ನಿಮಿಷದ ಈ ಸಾಕ್ಷ್ಯಚಿತ್ರ ತುಳುನಾಡಿನಲ್ಲಿ ಪ್ರಚಲಿತವಿದ್ದ ತಾಂತ್ರಿಕ ಪಂಥ ಮತ್ತು ಜನಪದ ಕುಣಿತಕ್ಕೆ ಸಂಬಂಧಿಸಿದ್ದಾಗಿದೆ.ತುಳುನಾಡಿನ ಘಟನಾವಳಿ ಹಾಗೂ ವಿದ್ವಾಂಸರ ವಿಶ್ಲೇಷಣೆಯೊಂದಿಗೆ ಮೈಸೂರಿನ ಕನ್ನಡಿ ಕ್ರಿಯೇಷನ್ ತಯಾರಿಸಿದ ಈ ಸಾಕ್ಷ್ಯಚಿತ್ರ ಯೂಟ್ಯೂಬ್ ಮತ್ತು ವಿಕಿಮೀಡಿಯ ಕಾಮನ್ಸ್ ಮೂಲಕ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ.