ಸ್ಕ್ಯಾನಿಂಗ್ ಸೆಂಟರ್ ನಡೆಸಲು ಸರ್ಕಾರದಿಂದ ನಿಗದಿಪಡಿಸಿರುವ ಎಲ್ಲ ನಿಯಮ ಪಾಲಿಸಬೇಕು, ಎಂಪ್ಯಾನಲ್ ಮಾಡಿಕೊಂಡಿರುವ ವೈದ್ಯರು ಮಾತ್ರ ಸ್ಕ್ಯಾನಿಂಗ್ ಕೆಲಸ ನಿರ್ವಹಿಸಬೇಕು, ಸ್ಕ್ಯಾನಿಂಗ್ ಮಾಡಿಸಿದ ಗರ್ಭಿಣಿಯರ ವಿವರವನ್ನು ಬಾಲಿಕಾ ಸಾಪ್ಟ್ ವೇರ್‌ನಲ್ಲಿ ಅಪ್‌ಲೋಡ್ ಮಾಡಿ ನಿಗದಿಪಡಿಸಿರುವ ದಾಖಲೆ ಹಾಜರುಪಡಿಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಸ್ಕ್ಯಾನಿಂಗ್ ಸೆಂಟರ್‌ಗಳು ಗರ್ಭಿಣಿಯರ ಸ್ಕ್ಯಾನಿಂಗ್ ನಡೆಸಿದಾಗ ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿಯಂತೆ ನಿಗದಿತ ನಮೂನೆಯಲ್ಲಿ ದಾಖಲಿಸಿ ದಾಖಲೆಗಳನ್ನು ಕನಿಷ್ಠ ಎರಡು ವರ್ಷಗಳ ಕಾಲ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಮಿಮ್ಸ್ ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ತಂತ್ರ (ದುರ್ಬಳಕೆ ಮತ್ತು ತಡೆ) ಕಾಯಿದೆ 1994ರ ಕಾಯಿದೆ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಸ್ಕ್ಯಾನಿಂಗ್ ಸೆಂಟರ್ ನಡೆಸಲು ಸರ್ಕಾರದಿಂದ ನಿಗದಿಪಡಿಸಿರುವ ಎಲ್ಲ ನಿಯಮ ಪಾಲಿಸಬೇಕು. ಎಂಪ್ಯಾನಲ್ ಮಾಡಿಕೊಂಡಿರುವ ವೈದ್ಯರು ಮಾತ್ರ ಸ್ಕ್ಯಾನಿಂಗ್ ಕೆಲಸ ನಿರ್ವಹಿಸಬೇಕು ಎಂದರು.
ಪಿಸಿಪಿಡಿಎನ್ ಟಿ ಕಾಯ್ದೆಯಡಿ ರಚಿಸಲಾಗಿರುವ ಸಮಿತಿಯು ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಪ್ರತಿ 3 ತಿಂಗಳಿಗೊಮ್ಮೆ ಅಥವಾ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಗರ್ಭಿಣಿಯರ ವಿವರವನ್ನು ಬಾಲಿಕಾ ಸಾಪ್ಟ್ ವೇರ್ ನಲ್ಲಿ ಅಪ್‌ಲೋಡ್ ಮಾಡಿ ನಿಗದಿಪಡಿಸಿರುವ ದಾಖಲೆ ಹಾಜರುಪಡಿಸಬೇಕು. ಇಲ್ಲವಾದಲ್ಲಿ ಕಾಯ್ದೆ ಪ್ರಕಾರ ಪರವಾನಗಿ ರದ್ದು ಮಾಡಿ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅನಕ್ಷರಸ್ಥರು ಹಾಗೂ ಮೂಢ ನಂಬಿಕೆಯಿಂದ ಬಹಳಷ್ಟು ಜನರು ಭ್ರೂಣ ಹತ್ಯೆಯಂತಹ ಸಮಾಜ ಘಾತುಕ ಕೆಲಸಕ್ಕೆ ಕೈ ಹಾಕುತ್ತಾರೆ. ಆದರೆ ಸ್ಕ್ಯಾನಿಂಗ್ ಹಾಗೂ ಭ್ರೂಣ ಹತ್ಯೆ ಮಾಡುವವರು ವಿದ್ಯಾವಂತರು. ಇದರ ಪರಿಣಾಮ ಹಾಗೂ ಶಿಕ್ಷೆ ಅವರಿಗೆ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.
ಹೆಣ್ಣನ್ನು ದೇವತೆ ಎಂದು ಪೂಜಿಸುವ ಸಮಾಜ ಭ್ರೂಣದಲ್ಲೇ ಹೆಣ್ಣನ್ನು ಕೊಂದರೆ. ಮಾನವೀಯ ಮೌಲ್ಯಗಳು ಸಮಾಜದಲ್ಲಿ ಉಳಿಯಲು ಸಾಧ್ಯವಿಲ್ಲ. ಗಂಡು ಮತ್ತು ಹೆಣ್ಣು ಸಮಾಜದ ಎರಡು ಮುಖಗಳಿದ್ದ ಆಗೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ವಸುಂಧರ ಭೂಪತಿ, ರಾಜ್ಯ ತಪಾಸಣಾ ಮತ್ತು ಮೇಲ್ವಿಚಾರಣೆ ಸಮಿತಿ ಸದಸ್ಯರಾದ ವಸಂತ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಮಿಮ್ಸ್ ಅಧೀಕ್ಷಕ ಡಾ. ಶ್ರೀಧರ್, ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.