ಜಾತಿ, ಮತ, ಪಂಥ ನೋಡದೇ ಪ್ರತಿಭಾವಂತರಿಗೆ ಶಿಕ್ಷಣ

KannadaprabhaNewsNetwork |  
Published : Dec 21, 2023, 01:15 AM ISTUpdated : Dec 21, 2023, 01:16 AM IST
20 -ಕಾಗವಾಡ -1 | Kannada Prabha

ಸಾರಾಂಶ

ಕೆಎಲ್‌ಇ ಸಂಸ್ಥೆ ಈಗ 310 ಸಂಸ್ಥೆಗಳನ್ನು ಹೊಂದಿದ್ದು, ಸುಮಾರು 1 ಲಕ್ಷ 48 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಅವರು ಕಾಗವಾಡ ತಾಲೂಕಿನ ಜೂಗೂಳ ಗ್ರಾಮದಲ್ಲಿ ಕರ್ನಾಟಕ ಶಿಕ್ಷಣ ಸಮಿತಿಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ನಮ್ಮ ಸಂಸ್ಥೆ ಈಗ ಜಾತಿ, ಮತ, ಪಂಥ ನೋಡುವುದಿಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೋಡಿ ಶಿಕ್ಷಣ ನೀಡುತ್ತಿದ್ದೇವೆ. ಕೆಎಲ್‌ಇ ಸಂಸ್ಥೆ ಈಗ 310 ಸಂಸ್ಥೆಗಳನ್ನು ಹೊಂದಿದ್ದು, ಸುಮಾರು 1 ಲಕ್ಷ 48 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದರು.

ತಾಲೂಕಿನ ಜೂಗೂಳ ಗ್ರಾಮದಲ್ಲಿ ಕರ್ನಾಟಕ ಶಿಕ್ಷಣ ಸಮಿತಿಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಿಕ್ಕ ನಂತರ ದಶಕಗಳ ನಂತರ ಜುಗೂಳ ಗ್ರಾಮಕ್ಕೆ ಶಿಕ್ಷಣ ಬಂತು. ದಾನಿಗಳಿಂದಲೇ ಆರಂಭವಾದ ಕರ್ನಾಟಕ ಶಿಕ್ಷಣ ಸಮಿತಿ ಬೆಳೆಯಲು ಕಾರಣರಾದವರ ಸ್ಮರಣೆ ಸದಾ ಸ್ಮರಣೀಯ ಎಂದು ಬಣ್ಣಿಸಿದರು.

ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಈಗ ಡಾಕ್ಟರ್‌, ಇಂಜನಿಯರ್‌ ಆಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಕೆಎಲ್‌ಇ ಸಂಸ್ಥಾಪಕರಲ್ಲಿ ಒಬ್ಬರಾದ ಮಮದಾಪುರ ಅವರು ಗೋಕಾಕ ತಾಲೂಕಿನ ಸಣ್ಣ ಹಳ್ಳಿಯಲ್ಲಿಯವರು. ಇಡೀ ಜಿಲ್ಲೆಗೆ ಪ್ರಥಮ ಬಂದರೂ ಬೆಳಗಾವಿಯಲ್ಲಿ ಶಾಲೆಗೆ ಪ್ರವೇಶ ಸಿಗುವುದಿಲ್ಲ. ಜಾತಿ ಆಧಾರದ ಮೇಲೆ ಆಗ ಶಾಲೆ ಪ್ರವೇಶಕ್ಕೆ ಸಿಗುತ್ತಿತ್ತು. ಆಗ ಅವರು ಕೊಲ್ಲಾಪುರ ನಂತರ ಪುಣೆಗೆ ಹೋಗಿ ಶಿಕ್ಷಣ ಪಡೆದರು. ಕೆಎಲ್‌ಇ ಸಂಸ್ಥೆಯ ಸಪ್ತ ಋಷಿಗಳು ಕೆಎಲ್‌ಇ ಸಂಸ್ಥೆಯನ್ನು ಹುಟ್ಟು ಹಾಕಿದರು. ಅದರಂತೆ ಬೆಳಗಾವಿಗೆ ಬಂದು ಸಣ್ಣಮಟ್ಟದಲ್ಲಿ ಶಾಲೆ ಪ್ರಾರಂಭಿಸುತ್ತಾರೆ. ಈ ಸಂಸ್ಥೆಯಂತೆ ಆಗಲೂ ಕೂಡ ದಾನಿಗಳು ಮುಂದೆ ಬರುತ್ತಾರೆ. 7 ಜನ ತಾವೇ ಶಿಕ್ಷಕರು ಆಗುತ್ತಾರೆ. ಆಗ ಆರಂಭಿಸಿದ ಶಾಲೆ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದೆ. ಇದರಲ್ಲಿ ಹಲವು ಮಹನೀಯರ ಕೊಡುಗೆ ಅಪಾರ ಇದೆ ಎಂದರು.

ಶಾಸಕ ರಾಜು ಕಾಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ರಾಜ್ಯದಲ್ಲಿರುವ ಮಠಾಧೀಶರು ಕೇವಲ ಧರ್ಮ ಪ್ರಚಾರ ಮಾಡುತ್ತ ಹೋಗಿದ್ದರೇ ಕೇವಲ ಬೆರಳೆಣಿಕೆಯಷ್ಟು ಜನರಿಗೆ ಶಿಕ್ಷಣ ಸಿಗುತ್ತಿತ್ತು. ಆದರೆ, ನಮ್ಮ ಮಠಾಧೀಶರಾದ ನಿಡಸೋಶಿ ಶ್ರೀಗಳು, ಸುತ್ತುರು ಶ್ರೀಗಳು, ಸಿದ್ದಗಂಗಾ ಶ್ರೀಗಳು ಸೇರದಂತೆ ಹಲವಾರು ಮಠಾಧೀಶರು ಕೆಎಲ್‌ಇ, ಬಿಎಲ್‌ಡಿ, ಬಸವೇಶ್ವರ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿ ಅಲ್ಲಿ ಬಡ ವಿದ್ಯಾರ್ಥಿಗಳಿಗೆ ಅಣ್ಣ, ಬಟ್ಟೆ, ಪುಸ್ತಕ ನೀಡಿ ಉಚಿತ ಶಿಕ್ಷಣ ನೀಡಿರುವುದರಿಂದಲೇ ಎಲ್ಲರೂ ಈಗ ವಿದ್ಯಾವಂತರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಿನ ವಿದ್ಯಾರ್ಥಿಗಳು ಕೇವಲ ಶಿಕ್ಷಣ ಪಡೆದರೇ ಸಾಲದು, ಶಿಕ್ಷಣದ ಜೊತೆಗೆ ಗುರು-ಹಿರಿಯರಿಗೆ, ತಂದೆ-ತಾಯಿ. ಶಿಕ್ಷಕರಿಗೆ ಗೌರವ ಕೊಡುವ ಸಂಸ್ಕಾರವನ್ನು ಪಡೆಯಬೇಕು ಎಂದರು.

ನಿಡಸೋಶಿಯ ಪಂಚಮ ಶಿವಲಿಂಗೇಶ್ವರ ಶ್ರೀಗಳು ಆಶೀರ್ವಚನ ನೀಡಿ, ವೇದಾಂತ ಕೇಸರಿ ಮಲ್ಲಿಕಾರ್ಜುನ ಅಪ್ಪನವರು ಹಳ್ಳಿಗಳಲ್ಲಿ ಪ್ರವಚನ ಮಾಡಿ ಭಕ್ತರು ಕೊಟ್ಟಂತ ದೇಣಿಗೆಯನ್ನು ಆಯಾ ಗ್ರಾಮದ ಪ್ರಮುರ ಕೈಯಲ್ಲಿ ಕೊಟ್ಟು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವಂತೆ ಹೇಳುತ್ತಿದ್ದರು. ಅಂತೆಯೇ ಕಾಗವಾಡದ ಶಿವಾನಂದ ಕಾಲೇಜು, ಹೈಸ್ಕೂಲ, ಶಿರಗುಪ್ಪಿ, ಜೂಳ ಸೇರಿದಂತೆ ಮಹಾರಾಷ್ಟ್ರದ ಹಲವು ಕಡೆ ಶ್ರೀಗಳ ಪ್ರೇರಣೆ ಹಾಗೂ ಕಾಣಿಕೆಯಿಂದ ಪ್ರಾರಂಭವಾದ ಶಾಲಾ ಕಾಲೇಜುಗಳು ಇಂದು ಹೆಮ್ಮರವಾಗಿ ಬೆಳೆದಿವೆ. ಈ ಸಂಸ್ಥೆಯು ಕೂಡ ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಕೋರಿದರು.

ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಶ್ರೀಗಳು, ನಿಡಸೋಶಿಯ ನಿಜಲಿಂಗೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ಕಾರ್ಯಕ್ರಮಕ್ಕೆ ಮೊದಲಿಗೆ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳ ಮತ್ತು ಸಿದ್ದೇಶ್ವರ ಶ್ರೀಗಳ ಭಾವಚಿತ್ರದ ಪೂಜೆ ನೇರವೇರಿಸಿ, ದೀಪ ಬೆಳಗಿಸಿ, ಚಾಲನೆ ನೀಡಲಾಯಿತು. ಚಿಕ್ಕೋಡಿ ಸಿಬಿಕೆಎಸ್‌ಎಸ್ ಕಾರ್ಖಾನೆಯ ನಿರ್ದೇಶಕ ಪರಸಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ