1 ಕೆಜಿ ನಕಲಿ ಚಿನ್ನದ ನಾಣ್ಯ ನೀಡಿ 9 ಲಕ್ಷ ದೋಚಿದ್ದ ವಂಚಕರು
ಕನ್ನಡಪ್ರಭ ವಾರ್ತೆ ಬೇಲೂರುಚಿನ್ನದ ಆಸೆ ತೋರಿಸಿ ಹಣ ಪಡೆದು ಪರಾರಿಯಾಗಿದ್ದ ಓರ್ವನನ್ನು ಬಂಧಿಸಿದ ಪೊಲೀಸರು ೪ ಲಕ್ಷ ರು. ವಶಪಡಿಸಿಕೊಂಡಿದ್ದಾರೆ.
ರಾಯಚೂರು ಜಿಲ್ಲೆಯ ಶಿವಣ್ಣ ಎಂಬುವವರು ಡ್ರೈವರ್ ಕೆಲಸ ಮಾಡಿಕೊಂಡಿದ್ದು, ಅವರಿಗೆ ಹಾಸನದ ಕಡೆಯವರು ಎಂದು ರಮೇಶ್ ಅವರು ಸುಳ್ಳು ಹೇಳಿ ಪರಿಚಯ ಮಾಡಿಕೊಂಡು ನಾವು ಮನೆ ಕಟ್ಟುವ ಸಂದರ್ಭದಲ್ಲಿ ನಮಗೆ ೧ ಕೆಜಿಯಷ್ಟು ಹಳೆಯ ಚಿನ್ನದ ನಾಣ್ಯಗಳು ಸಿಕ್ಕಿವೆ, ಅವುಗಳನ್ನು ಮಾರಾಟ ಮಾಡಲು ನಮಗೆ ಯಾರಾದರೂ ಪರಿಚಯ ಇದ್ದರೆ ತಿಳಿಸಿ ಎಂದಿದ್ದರು. ಅದರಂತೆ ನವೆಂಬರ್ ೬ ರಂದು ಶಿವಣ್ಣನಿಗೆ ರಮೇಶ್ ಎಂಬುವವರು ಒಂದು ಚಿನ್ನದ ನಾಣ್ಯ ನೀಡಿದ್ದು, ಅದನ್ನು ಪರೀಕ್ಷಿಸಿದಾಗ ಅದು ಚಿನ್ನದ್ದೇ ಆಗಿತ್ತು. ಆನಂತರ ಆ ಚಿನ್ನದ ನಾಣ್ಯಗಳನ್ನು ನಿಮಗೆ ಕೊಡುತ್ತೇವೆ ಎಂದು ನಂಬಿಸಿ ನಮಗೆ ೧೫ ಲಕ್ಷ ನೀಡಿ ಎಂದರು. ಆಗ ಶಿವಣ್ಣನು, ನನ್ನ ಬಳಿ ಅಷ್ಟು ಹಣ ಇಲ್ಲ, ೧೦ ಲಕ್ಷ ರು. ಕೊಡುತ್ತೇವೆ ಎಂದು ಹೇಳಿದ್ದರು. ಅದರಂತೆ ಶಿವಣ್ಣ ಮತ್ತವರ ಭಾವ ಬೇಲೂರಿಗೆ ಬಂದಾಗ ರಮೇಶ್ ಹಾಗೂ ಅವರ ಸ್ನೇಹಿತರು ಹುಣಸೆಕೆರೆ ಬಳಿ ಶಿವಣ್ಣನಿಗೆ ೧ ಕೆಜಿ ಚಿನ್ನದ ನಾಣ್ಯ ನೀಡಿದ್ದರು, ಫಲವಾಗಿ ಇವರೂ ಅವರಿಗೆ ೯ ಲಕ್ಷ ರು. ಹಣ ನೀಡಿದ್ದರು. ನಂತರ ಆ ನಾಣ್ಯವನ್ನು ಪರೀಕ್ಷಿಸಿದ ಶಿವಣ್ಣನಿಗೆ ಅವು ಸಂಪೂರ್ಣ ನಕಲಿಯಾಗಿದ್ದು ಎಂದು ತಿಳಿದಿದೆ, ತಕ್ಷಣವೇ ಬೇಲೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾಗಿ ಅವರು ತಿಳಿಸಿದರು.ತಕ್ಷಣ ಕಾರ್ಯಪ್ರವೃತ್ತರಾದ ವೃತ್ತ ನಿರೀಕ್ಷಕ ರವಿಕಿರಣ್ ಹಾಗೂ ಪಿಎಸ್ಐ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಇಬ್ಬರು ಆರೋಪಿಗಳಲ್ಲಿ ಒಬ್ಬ ಆರೋಪಿ ರಮೇಶ್ ಎಂಬುವವರನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತನನ್ನು ೪ ಲಕ್ಷ ರು. ಹಣವನ್ನು ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣ ಬೇಧಿಸಿದ ಬೇಲೂರು ವೃತ್ತನಿರೀಕ್ಷಕ ರವಿಕಿರಣ್ ಹಾಗೂ ಪಿಎಸ್ ಐ ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿಗಳನ್ನು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಅರಸೀಕೆರೆ ಡಿವೈಎಸ್ಪಿ ಅಭಿನಂದಿಸಿದ್ದಾರೆ.
---