ಮೊಳಕಾಲ್ಮುರು: ತಾಲೂಕಿನ ಬಿಜಿಕೆರೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಯರಬಳ್ಳಿ ಮಾರಮ್ಮ ನೂತನ ದೇವಸ್ಥಾನ ಲೋಕಾರ್ಪಣೆ ಮತ್ತು ವಿಗ್ರಹ ಪ್ರತಿಷ್ಠಾಪನೆ ಕಳಸಾ ರೋಹಣ ಕಾರ್ಯುಕ್ರಮ ಗುರುವಾರ ನಡೆಯಲಿದೆ.
ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಿರ್ಮಿಸಿರುವ ನೂತನ ದೇವಸ್ಥಾನ ಲೋಕಾಪರ್ಣೆಗೆ ಸಿದ್ಧತೆ ನಡೆಸಿರುವ ಗ್ರಾಮಸ್ಥರು ಗುರುವಾರ ಗೋಧೂಳಿ ಲಗ್ನದಲ್ಲಿ ಬಸವೇಶ್ವರ ದೇವಸ್ಥಾನದ ಆವರಣದಿಂದ ಗ್ರಾಮದ ಮಾತೆಯರಿಂದ ಆಗ್ರೋಧಕ, ಮಹಾಲಕ್ಷ್ಮಿ ಸಹಿತ ಗಂಗಾ ಪೂಜೆ, ಗೋಪೂಜೆ, ಗಣಪತಿ ಪೂಜೆಯೊಂದಿಗೆ ಕುಂಭ ಮೇಳದ ಮೂಲಕ ದೇವಿಯ ವಿಗ್ರಹ ಭವ್ಯ ಮೆರವಣಿಗೆ ನಡೆಯಲಿದೆ.ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಕರೆತಂದು ವಾಸ್ತು ಪೂಜೆ, ಸ್ವಸ್ತ ಪುಣ್ಯಾಹವಚನ ಪೂಜೆ, ನಾಂದಿ, ಪೂಜೆ, ಪಂಚಕಲಶ, ಶಾಂತಿ ಸಪ್ತ ಸಭಾ ದೇವತಾ ಪೂಜೆ, ಆದಿತ್ಯಾದಿ, ನವಗ್ರಹ ಹೋಮ, ಏಕಾದಶಿ, ರುದ್ರಪೂಜೆ, ಗೋಪುರದ ಕಳಸ ಪೂಜೆ, ಮಹಾ ಗಣಪತಿ ಹೋಮ, ನವಗ್ರಹ ಹೋಮ ನಡೆಸಿ ದೇವಾಲಯ ಲೋಕಾರ್ಪಣೆ ಹಾಗೂ ಕಳಸಾ ರೋಹಣ ಕಾರ್ಯ ನೆರವೇರಲಿದೆ.
ಶುಕ್ರವಾರ ಬೆಳಗಿನ ಜಾವ ದೇವಿ ಹೋಮ, ಮಹಾ ಗಣಪತಿ ಹೋಮ, ವಾಸ್ತು ಹೋಮ, ವಿಶೇಷ ದೇವಿ ಹೋಮ, ರಕ್ಷೋಘ್ನ ಹೋಮ, ಚಂಡಿಕಾ ಹೋಮ, ದೇವಾಲಯ ಬಲಿ ಪೂಜೆ, ಲಘು ಪೂರ್ಣಾಹುತಿ ಪೂಜೆಯೊಂದಿಗೆ ಶುಕ್ರವಾರ ಬೆಳಗಿನ ಜಾವ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಜರುಗಲಿದೆ. ಓಂಕಾರ ಹುಚ್ಚ ಜಗಳೂರು ತಾಲೂಕಿನ ಮುಸ್ಟೂರಿನ ನಾಗಲಿಂಗ ಸ್ವಾಮಿ ದಾಸೋಹ ಮಠದ ಷಬ್ರ, ರುದ್ರಮುನಿ ಶಿವಾಚಾರ್ಯ ಮಹಾ ಸ್ವಾಮೀಜಿ ನೇತೃತ್ವದಲ್ಲಿ ಪೂಜಾ ಕಾರ್ಯಗಳು ಜರುಗಲಿವೆ.ಗ್ರಾಮ ದೇವತೆ ಯರಬಳ್ಳಿ ಮಾರಮ್ಮ ದೇವಸ್ಥಾನ ಲೋಕಾರ್ಪಣೆಗೆ ಗ್ರಾಮದಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಪೂರ್ಣಾಹುತಿ, ಮಹಾ ಮಂಗಳಾರತಿ, ತೀರ್ಥ ಪ್ರಸಾದ, ಫಲ ಪಂಚಾಮೃತ ಹಾಗೂ ಅನ್ನ ಸಂತರ್ಪಣೆ ಆಯೋಜಿಸಲಾಗಿದೆ. ಗ್ರಾಮವು ಅಲ್ಲದೆ ಸುತ್ತಲಿನ ಹಳ್ಳಿಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಗ್ರಾಮದ ಹಿರಿಯ ಮುಖಂಡರು ಆಗ್ರಹಿಸಿದ್ದಾರೆ.