ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಶ್ರೀ ಅಯ್ಯಪ್ಪ ಸೇವಾ ಸಮಿತಿ ನಾವೂರು ಇದರ 40ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ ಹಾಗೂ ಶಬರಿಮಲ ಅಯ್ಯಪ್ಪ ಸೇವಾ ಸಮಾಜಂ ದ.ಕ ಜಿಲ್ಲೆ ಇವರಿಂದ ‘ಹರಿವರಾಸನಂ’ ಗೀತೆಯ ಶತಾಬ್ಧಿ ಕಾರ್ಯಕ್ರಮ ಡಿ. 27ರಂದು ನಾವೂರು ಶ್ರೀ ಗುರುಕೃಪಾ ಭಜನಾ ಮಂದಿರದ ವಠಾರದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಶಬರಿಮಲೆಯ ಪಂದಳರಾಜ ಶಶಿಕುಮಾರ ವರ್ಮ ಹಾಗೂ ಅವರ ಪತ್ನಿ ಆಗಮಿಸಲಿದ್ದಾರೆ ಎಂದು ಶ್ರೀ ಅಯ್ಯಪ್ಪ ಸೇವಾ ಸಮಿತಿ ನಾವೂರಿನ ಅಧ್ಯಕ್ಷ ಡಾ. ಪ್ರದೀಪ್ ಆಟಿಕುಕ್ಕೆ ಹೇಳಿದರು.ಅವರು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಭಗವದ್ಗೀತೆ ಮತ್ತು ವಿಷ್ಣುಸಹಸ್ರನಾಮ ಪಾಠ-ಪಠಣವನ್ನು ನಡೆಸಲಾಗುತ್ತಿದ್ದು, ದೇವಸ್ಥಾನ ಮತ್ತು ಶ್ರೀ ಗುರುಕೃಪಾ ಭಜನಾ ಮಂದಿರದಲ್ಲಿರುವ ಶ್ರೀ ಅಯ್ಯಪ್ಪ ಸೇವಾ ಸಮಿತಿಗೆ ಅವಿನಾಭವ ಸಂಬಂಧ ಇದೆ. ಸುಮಾರು 40 ವರ್ಷಗಳ ಇತಿಹಾಸ ಇರುವ ಶ್ರೀ ಅಯ್ಯಪ್ಪ ಸೇವಾ ಸಮಿತಿಯಲ್ಲಿ ಪ್ರತಿ ವರ್ಷವೂ ಸುಮಾರು 50ಕ್ಕಿಂತಲೂ ಹೆಚ್ಚು ಅಯ್ಯಪ್ಪ ವ್ರತಧಾರಿಗಳು ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡುತ್ತಿದ್ದಾರೆ ಎಂದರು. ನಾವೂರಿನ ಸೇಸಪ್ಪ ಮೂಲ್ಯ ಗುರುಸ್ವಾಮಿ ಇವರ 50 ನೇ ವರ್ಷದ ಮತ್ತು ಶ್ರೀಧರ ಗುಡಿಗಾರ ಗುರುಸ್ವಾಮಿಯವರ 18ನೇ ವರ್ಷದ ಶಬರಿಮಲೆ ಯಾತ್ರೆಯನ್ನು ಮಾಡುತ್ತಿರುವುದು ನಮಗೆಲ್ಲ ಮತ್ತಷ್ಟು ಸಂತೋಷವಾಗುತ್ತಿದೆ. ಡಿ.27ರಂದು 40ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ ಆಚರಿಸುವ ಸಂದರ್ಭದಲ್ಲಿ 1923ರಲ್ಲಿ ರಚನೆಯಾದ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ಪವಿತ್ರವಾದ ಭಕ್ತಿಗೀತೆಯಾದ ‘ಹರಿವರಾಸನಂ’ ಗೀತೆಯ ಶತಾಬ್ಧಿ ಆಚರಣೆಯನ್ನು ಶಬರಿಮಲ ಅಯ್ಯಪ್ಪ ಸೇವಾ ಸಮಾಜಂ ದ.ಕ ಜಿಲ್ಲೆ ಇವರ ಆಶ್ರಯದಲ್ಲಿ ನಾವೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಪಂದಳ ರಾಜ ಶಶಿಕುಮಾರ ವರ್ಮ ಹಾಗೂ ಅವರ ಪತ್ನಿ ನಾವೂರು ಗ್ರಾಮಕ್ಕೆ, ಅದರಲ್ಲೂ ದ.ಕ ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸುತ್ತಿದ್ದಾರೆ. ಅಂದು ಸಂಜೆ 5.30ಕ್ಕೆ ಶ್ರೀ ಅರ್ಧನಾರೀಶ್ವರ ದೇವಸ್ಥಾನದಿಂದ ಭಜನೆಯ ಮೂಲಕ - ಪಾಲಶಕೊಂಬು ಮೆರವಣಿಗೆಯೊಂದಿಗೆ ಅವರಿಬ್ಬರನ್ನು ಭವ್ಯ ರಥದಲ್ಲಿ ಅಯ್ಯಪ್ಪ ದೀಪೋತ್ಸವಕ್ಕೆ ಬರಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.ರಾತ್ರಿ ಗಂಟೆ 8ರಿಂದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಡಾ. ಪ್ರದೀಪ್ ಎ. ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪಂದಳ ರಾಜರಾಗಿರುವ ಶಶಿಕುಮಾರ ವರ್ಮ ಹಾಗೂ ಅವರ ಪತ್ನಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಬರಿಮಲ ಅಯ್ಯಪ್ಪ ಸೇವಾ ಸಮಾಜಂ ದ.ಕ. ಜಿಲ್ಲೆಯ ಅಧ್ಯಕ್ಷ ಗಣೇಶ್ ಪೊದುವಾಳ್, ಶಾಸಕ ಹರೀಶ್ ಪೂಂಜ, ಎಂಎಲ್ಸಿಗಳಾದ ಹರೀಶ್ ಕುಮಾರ್, ಹಾಗೂ ಪ್ರತಾಪಸಿಂಹ ನಾಯಕ್, ಉದ್ಯಮಿ ಶಶಿಧರ ಬಿ. ಶೆಟ್ಟಿ ನವಶಕ್ತಿ ಬರೋಡ, ಪ್ರಾಂತ ಸಹ ಕಾರ‍್ಯವಾಹ ಪ್ರಕಾಶ್ ಪಿ,ಎಸ್, ಗ್ರಾ.ಪಂ. ಅಧ್ಯಕ್ಷೆ ಸುನಂದ, ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷ ಹರೀಶ್ ಸಾಲಿಯನ್, ಸಿ ಎ ಬ್ಯಾಂಕ್ ಬಂಗಾಡಿ ನಿರ್ದೇಶಕ ಎ.ಬಿ. ಉಮೇಶ್ ಅತ್ಯಡ್ಕ ಭಾಗವಹಿಸುತ್ತಾರೆ ಎಂದರು.
ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ಕಾರಿಂಜ ಸ್ವಾಗತಿಸಿ, ವಂದಿಸಿದರು.ಗುರುಸ್ವಾಮಿ ಶ್ರೀಧರ ಗುಡಿಗಾರ, ಕುಂಜಿರ ಗುರುಸ್ವಾಮಿ ಚಾರ್ಮಾಡಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಗಣೇಶ್ ನೆಲ್ಲಿಪಲ್ಕೆ, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೇಸಪ್ಪ ಮೂಲ್ಯ ಗುರುಸ್ವಾಮಿ, ಧರ್ಣಪ್ಪ ಮೂಲ್ಯ, ಉದಯ ಬಂಗೇರ ನಾವೂರು ಇದ್ದರು.