ಕನ್ನಡಪ್ರಭ ವಾರ್ತೆ ಬೀದರ್
ಜನರಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆ ಬಗ್ಗೆ ಅರಿವು ಇರದ ಕಾರಣ ಅನೇಕ ಮೋಸಗಳಾಗುತ್ತಿವೆ. ಆದ್ದರಿಂದ ಎಲ್ಲರಿಗೂ ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅರಿವು ಅಗತ್ಯವಾಗಿದೆ ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಕವಿತಾ ಹುಷಾರೆ ಹೇಳಿದರು.ಜಿಲ್ಲಾಡಳಿತ, ಜಿಪಂ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಆಶ್ರಯದಲ್ಲಿ ಬೀದರ್‌ನ ಜನವಾಡ ರಸ್ತೆ ಬಳಿಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಸಾಕಷ್ಟು ಜನರು ಸರಕುಗಳ ಖರೀದಿ ಹಾಗೂ ಆಸ್ಪತ್ರೆ, ಸಾರಿಗೆ ಸೇರಿದಂತೆ ಇತರೆ ಸೇವೆಗಳನ್ನು ಪಡೆಯುವ ಸಂದರ್ಭದಲ್ಲಿ ಮೋಸ ಹೋಗುತ್ತಿದ್ದಾರೆ.ತಂತ್ರಜ್ಞಾನ ಹೆಚ್ಚಾದಂತೆ ಸರಕುಗಳ ಮಾರಾಟದ ಮಾರ್ಗಗಳು ಬದಲಾಗಿವೆ. ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸುವಾಗ ಎಚ್ಚರ ವಹಿಸಬೇಕು. ವಸ್ತುಗಳನ್ನು ಪಡೆದ ತಕ್ಷಣ ಅವುಗಳನ್ನು ಪರಿಶೀಲನೆ ಮಾಡಬೇಕು, ರಶೀದಿ ಪಡೆಯಬೇಕು. ಇದರಿಂದ ಗ್ರಾಹಕರು ಮಾರಾಟಗಾರರಿಂದ ಮೋಸ ಹೋದಲ್ಲಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಜೀವ ವಿಮೆಗಳ ಪರಿಹಾರ ಹಾಗೂ ಆಸ್ಪತ್ರೆ ಚಿಕಿತ್ಸೆ ಸಂದರ್ಭದಲ್ಲಿಯು ಸಾಕಷ್ಟು ಗ್ರಾಹಕರು ಮೋಸ ಹೋಗುತ್ತಿ ದ್ದಾರೆ. ಇಂತಹ ಪ್ರಕರಣಗಳಲ್ಲಿಯೂ ಸಹ ಗ್ರಾಹಕರು ದಾವೆ ಹೂಡಿ ಪರಿಹಾರ ಕಂಡುಕೊಳ್ಳಬಹುದು. ಈಗಾಗಲೇ ಯಾರಾದರೂ ಮೋಸ ಹೋದಲ್ಲಿ ಆಯೋಗಕ್ಕೆ ಬಂದು ದೂರು ಸಲ್ಲಿಸಬಹುದು ಎಂದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲ ಬಿ.ಎಸ್.ಪಾಟೀಲ್ ಮಾತನಾಡಿ, ಇತ್ತೀಚೆಗೆ ಮಹಿಳೆಯರ ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇವುಗಳನ್ನು ತಡೆಗಟ್ಟಲು ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಕಾನೂನು ಅರಿವು ನೀಡುವುದು ಅಗತ್ಯವಾಗಿದೆ ಎಂದರು.
ಬೀದರ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಾನೂನು ಅರಿವು ಮೂಡಿಸುವುದು, ಕಾನೂನು ನೆರವು ಮತ್ತು ಸೌಹಾರ್ದಯುತ ಇತ್ಯರ್ಥದ ಮೂಲಕ ವಿವಾದಗಳನ್ನು ಇತ್ಯರ್ಥಪಡಿಸುವುದು, ನಾಗರಿಕರಿಗೆ ಮತ್ತು ವಿಶೇಷವಾಗಿ ಸಮಾಜದ ದುರ್ಬಲ ವರ್ಗಗಳಿಗೆ ಕಾನೂನು ಜ್ಞಾನದ ಸಬಲೀಕರಣಕ್ಕಾಗಿ ಕಾನೂನು ಅರಿವಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಉಪ ನಿರ್ದೇಶಕರಾದ ಸುರೇಖಾ ಮಾತನಾಡಿ, ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಡಿ.24ರ ಬದಲಾಗಿ ಡಿ.28ರಂದು ಹಮ್ಮಿಕೊಳ್ಳಲಾಗಿದೆ. ಅಂದು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆಹಾರ ಸಂರಕ್ಷಣಾಧಿಕಾರಿ ಡಾ.ಸಂತೋಷ ಕಾಳೆ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿರ್ದೇಶಕ ರಾಜೀವ ಸೂರ್ಯನ್, ಕರ್ನಾಟಕ ರಾಜ್ಯ ಆಹಾರ ನಿಗಮ ಬೀದರ್‌ನ ವ್ಯವಸ್ಥಾಪಕ ವಿನೋದ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಸಿದ್ದಮ್ಮಾ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮನೋಜಕುಮಾರ ಕುಲಕರ್ಣಿ, ಇತಿಹಾಸ ಪ್ರಾಧ್ಯಾಪಕಿ ವಿಜಯಲಕ್ಷ್ಮೀ, ಸಮಾಜಶಾಸ್ತ್ರದ ಪ್ರಾಧ್ಯಾಪಕ ಶ್ರೀನಿವಾಸ ರೆಡ್ಡಿ, ವಾಣಿಜ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಉಮಾಕಾಂತ ಗಣಪತಿ, ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.