ಪುತ್ತೂರು: ಪುತ್ತೂರಿನಲ್ಲಿ ನಿರ್ಮಾಣಗೊಳ್ಳಲಿರುವ ತಾಲೂಕು ಮಟ್ಟದ ಪ್ರಥಮ ಪಶು ಪಾಲಿ ಕ್ಲಿನಿಕ್‌ನ ನೂತನ ಕಟ್ಟಡದ ಶಿಲಾನ್ಯಾಸ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮ ಸೋಮವಾರ ಪುತ್ತೂರಿನ ಪಶು ವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ ನಡೆಯಿತು.ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ, ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಪಶು ವೈದ್ಯಕೀಯ ಇಲಾಖೆಯಲ್ಲಿ ತಳಮಟ್ಟದಲ್ಲಿ ಕೆಲಸ ಮಾಡಲು ಇಲಾಖೆಯ ಯೋಜನೆಗಳನ್ನು ಮನೆ ಮನೆಗೆ ಮುಟ್ಟಿಸಲು ಪಶು ಸಖಿಯರನ್ನು ಸರ್ಕಾರ ನೇಮಕ ಮಾಡಿದೆ. ಈ ಮೂಲಕ ತಳಮಟ್ಟದಲ್ಲಿ ಜಾನುವಾರಗಳ ಕಾಳಜಿ ವಹಿಸುವ ಕೆಲಸ ಸರ್ಕಾರ ಮಾಡಿದೆ. ಇಲಾಖೆಯಿಂದ ನೀಡುತ್ತಿರುವ ದೇಸಿ ತಳಿಯ ಕರುಗಳ ಪ್ರದರ್ಶನ ಕಾರ್ಯಕ್ರಮ ಮಾಡುವುದು ಉತ್ತಮ. ಕೆಎಂಎಫ್‌ನಿಂದ ಹೈನುಗಾರರಿಗೆ ತಮಿಳುನಾಡಿನಿಂದ ಉತ್ತಮ ತಳಿಯ, ಹೆಚ್ಚಿನ ಹಾಲು ನೀಡುವ ಹಸುಗಳನ್ನು ಖರೀದಿ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.ಕೇಂದ್ರ ಸರ್ಕಾರದ ಯೋಜನೆಯಾದ ವೆಟರ್ನರಿ ಕೌನ್ಸಿಲ್ ಆಫ್ ಇಂಡಿಯ ಇದರಲ್ಲಿ ದೇಶದ ನಾಲ್ಕು ಕಡೆ ಪಶು ವೈದ್ಯಕೀಯ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಲಿದೆ. ಇದರಲ್ಲಿ ದಕ್ಷಿಣ ಭಾಗದಲ್ಲಿ ಕೊಯಿಲ ಪಶು ವೈದ್ಯಕೀಯ ಕಾಲೇಜನ್ನು ಆಯ್ಕೆ ಮಾಡುವ ಪ್ರಸ್ತಾವನೆ ಇದೆ. ಇದಕ್ಕೆ ಬೇಕಾದ ಎಲ್ಲಾ ಪೂರಕ ಮೂಲಭೂತ ವ್ಯವಸ್ಥೆಗಳು ಇಲ್ಲಿ ಇದೆ. ಆದುದರಿಂದ ವಿಶ್ವವಿದ್ಯಾನಿಲಯ ಆರಂಭಗೊಂಡರೆ ಉಪ್ಪಿನಂಗಡಿ, ಪುತ್ತೂರು ಅಭಿವೃದ್ಧಿಗೊಳ್ಳಲಿದೆ ಎಂದು ಹೇಳಿದರು.ಪಶುವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಧರ್ಮಪಾಲ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಲೂಕಿನ ಹೈನುಗಾರರಿಗೆ ಉತ್ತೇಜನ ನೀಡಲು ಹಸುಗಳ ಆರೋಗ್ಯ ದೃಷ್ಟಿಯಿಂದ ಶೇ.50ರ ಸಹಾಯಧನದಲ್ಲಿ ಒಟ್ಟು 18 ಫಲಾನುಭವಿಗಳಿಗೆ ತಲಾ 2 ರಬ್ಬರ್ ನೆಲಹಾಸು, 6 ಫಲಾನುಭವಿಗಳಿಗೆ 2 ಹೆಚ್‌ಪಿ ಸಾಮರ್ಥ್ಯದ ಮೇವು ಕತ್ತರಿಸುವ ಯಂತ್ರ ಹಾಗೂ 3 ಫಲಾನುಭವಿಗಳಿಗೆ ಮಲೆನಾಡು ಗಿಡ್ಡ ತಳಿಯ ಹೆಣ್ಣುಕರುಗಳನ್ನು ವಿತರಿಸಲಾಯಿತು.
ಉಪ್ಪಿನಂಗಡಿ ಪಶುವೈದ್ಯಾಧಿಕಾರಿ ಡಾ.ಉಷಾ, ಪಾಣಾಜೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಂ.ಪಿ.ಪ್ರಕಾಶ್, ಗುತ್ತಿಗೆದಾರರಾದ ರಾಧಾಕೃಷ್ಣ ಇದ್ದರು.ಜಾನುವಾರು ಅಭಿವೃದ್ಧಿ ಅಧಿಕಾರಿ ಪುಷ್ಪರಾಜ ಶೆಟ್ಟಿ, ಹಿರಿಯ ಪಶುವೈದ್ಯಕೀಯ ಪರೀಕ್ಷಕ ವೀರಪ್ಪ, ಈಶ್ವರಮಂಗಲದ ಹಿರಿಯ ಪಶುವೈದ್ಯ ಪರೀಕ್ಷಕ ಬಸವರಾಜ್ ಮತ್ತಿತರರಿದ್ದರು.