ಕನ್ನಡಪ್ರಭ ವಾರ್ತೆ ಸಕಲೇಶಪುರ
ಏಕಾಏಕಿ ಹಿಡಿದ ಮಳೆಯಿಂದಾಗಿ ಕಾಫಿ ತೋಟದಲ್ಲಿ ಮಳೆಗಾಲಕ್ಕೂ ಮುನ್ನ ಮುಗಿಸಬೇಕಿದ್ದ ಮರಗಸಿ, ಗಿಡಕಸಿ, ಕೊಟ್ಟಿಗೆ ಗೊಬ್ಬರ ನೀಡುವುದು ಸೇರಿದಂತೆ ಹಲವು ಕೆಲಸಗಳು ಸಾಕಷ್ಟು ಬಾಕಿ ಉಳಿದಿವೆ. ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆಯಿಂದ ಮಳೆನೀರು ಹೊರ ಹರಿದಿದ್ದಕ್ಕಿಂತ ಭೂಮಿಯಲ್ಲಿ ಇಂಗಿದ್ದೇ ಹೆಚ್ಚಾಗಿದ್ದು, ಈಗಾಗಲೇ ಭೂಮಿ ಶೀತಪೀಡಿತವಾಗಿರುವುದರಿಂದ ತಾಲೂಕಿನಲ್ಲಿ ಸಾವಿರ ಮಿ.ಮೀಟರ್ ಮಳೆಯಾಗುವ ಮುನ್ನವೆ ಹಲವು ತಗ್ಗುಪ್ರದೇಶಗಳಲ್ಲಿ ಜಲ ಹೊರಹೊಮ್ಮುತ್ತಿದೆ.
ಕೊಳೆ ರೋಗದ ಭೀತಿ: ನಿರಂತರ ಜಡಿ ಮಳೆ ಹಾಗೂ ಅಲ್ಲಲ್ಲಿ ಸುರಿಯುತ್ತಿರುವ ಮಂಜಿನಿಂದಾಗಿ ವಾಣಿಜ್ಯ ಬೆಳೆಗಳಾದ ಕಾಫಿ, ಮೆಣಸು ಹಾಗೂ ಅಡಿಕೆಗೆ ಕೊಳೆರೋಗ ಆವರಿಸುವ ಭಯ ಬೆಳೆಗಾರರನ್ನು ಕಾಡುತ್ತಿದೆ. ಶೀಘ್ರವೆ ಈ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುವ ಕೆಲಸವನ್ನು ಮಳೆ ಮಧ್ಯೆಯೇ ಹಲವು ತೋಟಗಳಲ್ಲಿ ಆರಂಭಿಸಿದ್ದರಾದರೂ ಹೆಚ್ಚಿನ ಪರಿಣಾಮವಿಲ್ಲ ಎನ್ನಲಾಗುತ್ತಿದೆ. ಆದರೆ, ಸಾಕಷ್ಟು ಕಾಫಿ ಬೆಳೆಗಾರರು ಕ್ರಿಮಿನಾಶಕ ಸಿಂಪಡಣೆಗೆ ಮಳೆ ಬಿಡುವು ನೀಡುವುದನ್ನೆ ಕಾಯುತ್ತಿದ್ದಾರೆ. ಆದರೆ ಜಡಿ ಮಳೆ ನಿಲ್ಲುತ್ತಿಲ್ಲ.*ಕಾಣೆಯಾದ ಆಷಾಢದ ಮಳೆಮಲೆನಾಡಿನಲ್ಲಿ ದಿನ ಒಂದಕ್ಕೆ ಕನಿಷ್ಠ ೧೫೦ ರಿಂದ ೩೦೦ ಮೀ.ಮೀಟರ್( ೬ ರಿಂದ ೧೨) ಇಂಚು ಮಳೆಯಾಗುವುದು ಸಾಮಾನ್ಯ. ಇದರಿಂದಾಗಿ ಹಳ್ಳಕೊಳ್ಳಗಳು ಉಕ್ಕಿ ಹರಿಯುವ ಮೂಲಕ ಮಲೆನಾಡಿನಲ್ಲಿ ಮಳೆಯ ರೌದ್ರವತಾರಕ್ಕೆ ಮೆರಗು ದೊರಕುತಿತ್ತು. ಆದರೆ, ಈ ಬಾರಿ ಮಾರನಹಳ್ಳಿ ಮಳೆ ಮಾಪನ ಕೇಂದ್ರ ಒಂದನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಮಳೆ ಮಾಪನ ಕೇಂದ್ರದಲ್ಲೂ ದಿನ ಒಂದಕ್ಕೆ ೧೦೦ಮೀ.ಮೀಟರ್(೪ ಇಂಚು) ಮಳೆಯಾಗಿರುವ ನಿದರ್ಶನಗಳು ಇಲ್ಲದಾಗಿದೆ.
* ಬಾಕ್‌ನ್ಯೂಸ್: ತುಂಬದ ನದಿ ಒಡಲು ತಾಲೂಕಿನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ನಿರಂತರವಾಗಿ ಮಳೆಯಾಗುತ್ತಿದ್ದರೂ ತಾಲೂಕಿನ ಪ್ರಮುಖ ನದಿ ಹೇಮಾವತಿ ನದಿ ಸೇರಿದಂತೆ ಯಾವುದೇ ನದಿಯ ಒಡಲು ತುಂಬಿಲ್ಲ. ಹೇಮಾವತಿ ನದಿಗೆ ಕಟ್ಟಲಾಗಿರುವ ಗೊರೂರು ಅಣೆಕಟ್ಟೆಯಿಂದ ನಿರಂತರವಾಗಿ ನೀರು ಹೊರಹರಿಯುತ್ತಿರುವುದರಿಂದ ಅರ್ಧ ಮಳೆಗಾಲ ಕಳೆದರೂ ತಾಲೂಕಿನಲ್ಲಿ ಗೊರೂರು ಹಿನ್ನೀರು ಕಾಣೆಯಾಗಿದೆ. ಸಾವಿರಾರು ಎಕರೆ ಹಿನ್ನೀರು ಪ್ರದೇಶ ಸಂಪೂರ್ಣ ಹಸಿರು ಹುಲ್ಲಿನ ಹೊದಿಕೆಯಾಗಿ ಗೋಚರಿಸುತಿದ್ದು, ಜಾನುವಾರುಗಳಿಗೆ ಉತ್ತಮ ಮೇವಿನ ತಾಣವಾಗಿದೆ..*ಹೇಳಿಕೆ
ತಾಲೂಕಿನಲ್ಲಿ ನೈಜ ಮಳೆಯಾಗದಾಗಿದ್ದು ಜಡಿ ಮಳೆ ಬೆಳೆಗಳಿಗೆ ರೋಗಕಾರಕವಾಗಿದೆ. ಸದ್ಯ ಕೆಲದಿನಗಳ ಮಳೆ ಬಿಡುವು ನೀಡಿದರೆ ಬೆಳೆ ಉಳಿಸಿಕೊಳ್ಳಲು ಅನುಕೂಲವಾಗಲಿದೆ. ತಾಲೂಕಿನಲ್ಲಿ ಇದುವರೆಗೆ ೯೯೨ ಮೀ.ಮೀಟರ್ ವಾಡಿಕೆ ಮಳೆಯಾಗಬೇಕಿತ್ತು. ಸದ್ಯ ೧೨೨೫ ಮೀಟರ್ ಮಳೆಯಾಗಿದ್ದು, ಶೇ. ೨೩ರಷ್ಟು ಹೆಚ್ಚು ಮಳೆಯಾಗಿದ್ದು ಭತ್ತದ ನಾಟಿಗೆ ಇದು ಯೋಗ್ಯ ಮಳೆಯಾಗಿದೆ.- ಚಲುವರಂಗಪ್ಪ, ಸಹಾಯಕ ನಿರ್ದೇಶಕ ಕೃಷಿ ಇಲಾಖೆ,ಸಕಲೇಶಪುರ,