ಕುಮಟಾ: ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಘನಾಶಿನಿ ಸಹಿತ ಇತರ ಉಪನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ.
ಅಗ್ನಿಶಾಮಕ ಸಿಬ್ಬಂದಿ ಜತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕ ತಂಡದವರು ಕೈಜೋಡಿಸಿ ರಾತ್ರಿಯಿಂದಲೇ ಜನರ ಸ್ಥಳಾಂತರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ೩೦೦ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದ್ದಾರೆ. ಯೋಜನಾಧಿಕಾರಿ ಕಲ್ಮೇಶ ಎಂ. ಸ್ಥಳದಲ್ಲಿದ್ದು ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ೨೮ ಕುಟುಂಬದ ೧೦೮ ಜನ ಆಶ್ರಯ ಪಡೆದಿದ್ದಾರೆ.250 ಮನೆಗಳಿಗೆ ನುಗ್ಗಿದ ನೀರು:
ಮಳೆಯಿಂದಾಗ ೧೨ ಮನೆಗಳಿಗೆ ತೀವ್ರ ಹಾನಿಯಾಗಿದೆ. ಮೂರೂರಿನಲ್ಲಿ ಅಂಗಡಿಕೇರಿಯ ಗಣಪತಿ ಸತ್ಯನಾರಾಯಣ ಭಟ್ಟ ಅವರ ಜವಳಿ ಅಂಗಡಿ ಹಿಂಭಾಗದ ಧರೆ ಕುಸಿದು ಅಂಗಡಿ ಮೇಲೆ ಬಿದ್ದಿದ್ದು, ಅಪಾರ ಹಾನಿಯಾಗಿದೆ.
ಪ್ರವಾಹದಿಂದ ಜಲಾವೃತವಾದ ಕುಟುಂಬಗಳಿಗೆ ಸಂಬಂಧಿಸಿ ಊರಕೇರಿಯ ಕಡವು, ಮೂರೂರು, ಬೊಗ್ರಿಬೈಲ್, ಕರ್ಕಿಮಕ್ಕಿ, ಹೆಗಡೆ, ಮಣಕೋಣ,ದೀವಗಿ, ಖೈರೆ, ತಾರಿಬಾಗಿಲ, ಶಿರಗುಂಜಿ, ಕೋಡ್ಕಣಿ, ಉಪ್ಪಿನಪಟ್ಟಣ, ಮೇಲಿನಕೇರಿ, ಭಾವಿಕೊಡ್ಲ, ಮಣಕಿ, ಗುಡಕಾಗಾಲ, ತೆಪ್ಪ ಶಾಲೆಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಕಾಳಜಿ ಕೇಂದ್ರದಲ್ಲಿ ಒಟ್ಟೂ ೨೮೩ ಕುಟುಂಬಗಳ ೮೨೫ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ತಹಸೀಲ್ದಾರ್ ಕಚೇರಿ ಮಾಹಿತಿ ತಿಳಿಸಿದೆ. ಶಾಸಕ ದಿನಕರ ಶೆಟ್ಟಿ ಅಧಿವೇಶನದ ನಿಮಿತ್ತ ಬೆಂಗಳೂರಿನಲ್ಲಿದ್ದರೂ ಕ್ಷೇತ್ರದ ಪ್ರವಾಹ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ.