ಮಂಡ್ಯ ಜಿಲ್ಲೆಯಲ್ಲಿ ರಾಗಿ ಬೆಳೆದ ಅನ್ನದಾತರಿಗೆ ‘ಮಳೆ ಸಂಕಷ್ಟ’..!

KannadaprabhaNewsNetwork |  
Published : May 27, 2025, 11:45 PM ISTUpdated : May 27, 2025, 11:46 PM IST
ರಾಗಿ ಬೆಳೆದ ರೈತರಿಗೆ ಮಳೆ ಸಂಕಷ್ಟ | Kannada Prabha

ಸಾರಾಂಶ

ಅವಧಿಗೆ ಮುನ್ನವೇ ಮುಂಗಾರು ಮಳೆ ಚುರುಕಾಗಿರುವುದರಿಂದ ಜಿಲ್ಲೆಯಲ್ಲಿ ರಾಗಿ ಬೆಳೆದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆಯಿಂದ ಬೆಳೆಯನ್ನು ಕೊಯ್ಲು ಮಾಡಲಾಗುತ್ತಿಲ್ಲ. ಇದರಿಂದ ರಾಗಿ ಬೆಳೆಗೆ ಶೀತ ಹೆಚ್ಚಾಗಿ ತೆನೆಯಲ್ಲೇ ಮೊಳಕೆಯೊಡೆಯುವ ಆತಂಕ ಎದುರಾಗಿದೆ.

ಎಚ್‌.ಕೆ.ಅಶ್ವಥ್‌ ಹಳುವಾಡಿ

ಕನ್ನಡಪ್ರಭ ವಾರ್ತೆ ಮಂಡ್ಯ

ಅವಧಿಗೆ ಮುನ್ನವೇ ಮುಂಗಾರು ಮಳೆ ಚುರುಕಾಗಿರುವುದರಿಂದ ಜಿಲ್ಲೆಯಲ್ಲಿ ರಾಗಿ ಬೆಳೆದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆಯಿಂದ ಬೆಳೆಯನ್ನು ಕೊಯ್ಲು ಮಾಡಲಾಗುತ್ತಿಲ್ಲ. ಇದರಿಂದ ರಾಗಿ ಬೆಳೆಗೆ ಶೀತ ಹೆಚ್ಚಾಗಿ ತೆನೆಯಲ್ಲೇ ಮೊಳಕೆಯೊಡೆಯುವ ಆತಂಕ ಎದುರಾಗಿದೆ.

ಕೆಲವು ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ ಶೇ.೩೦ರಷ್ಟು ರಾಗಿ ಬೆಳೆಯನ್ನು ಮಾತ್ರ ಕೊಯ್ಲು ಮಾಡಲಾಗಿದೆ. ಇನ್ನೂ ಶೇ.೭೦ರಷ್ಟು ರಾಗಿ ಬೆಳೆ ಕೊಯ್ಲು ಮಾಡಬೇಕಿರುವುದರಿಂದ ನಷ್ಟದ ಭೀತಿಯನ್ನು ರೈತರು ಎದುರಿಸುತ್ತಿದ್ದಾರೆ.

ರಾಗಿಗೆ ಉತ್ತಮ ಬೆಲೆ:

ರಾಗಿಗೆ ಉತ್ತಮ ಬೆಲೆ ಇದ್ದ ಕಾರಣದಿಂದ ಕೆರೆಯಾಶ್ರಿತ ಪ್ರದೇಶದ ರೈತರು ಮಾತ್ರವಲ್ಲದೆ ಕೆಲವೆಡೆ ನಾಲಾ ಬಯಲಿನ ರೈತರೂ ಕೂಡ ರಾಗಿಯನ್ನೇ ಬೆಳೆದಿದ್ದರು. ರಾಗಿ ಪ್ರತಿ ಕ್ವಿಂಟಲ್‌ಗೆ ೩೬೦೦ ರು.ನಂತೆ ಮಾರಾಟವಾಗುತ್ತಿತ್ತು. ರಾಗಿ ಬೆಲೆ ಕ್ವಿಂಟಲ್‌ಗೆ ೪ ಸಾವಿರ ರು. ತಲುಪುವ ಸಾಧ್ಯತೆಗಳಿದ್ದ ಕಾರಣ ರೈತರು ರಾಗಿ ಬೆಳೆಯತ್ತ ಹೆಚ್ಚಿನ ಒಲವು ತೋರಿದ್ದರು.

ನಾಲೆಯಲ್ಲಿ ನೀರು ಹರಿದಿದ್ದರಿಂದ ಮಳೆಯ ಸ್ಪಂದನೆಯೂ ಸಿಕ್ಕಿದ್ದರಿಂದ ರಾಗಿ ಬೆಳೆ ಕೈ ಸೇರುವ ಹಂತದಲ್ಲಿತ್ತು. ಈ ಸಮಯದಲ್ಲಿ ಮಳೆ ಎದುರಾಗಿರುವುದು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದೆ ಎನ್ನುವಂತಾಗಿದೆ. ಹಲವು ದಿನಗಳಿಂದ ನಿರಂತರ ಮಳೆಯಾಗುತ್ತಿರುವುದರಿಂದ ರಾಗಿ ಬೆಳೆಗೆ ಹೊಡೆತ ಬೀಳುವಂತೆ ಮಾಡಿದೆ.

ರಾಗಿ ಕೊಯ್ಲಿಗೆ ಬಂದಿರುವುದರಿಂದ ತೆನೆಯನ್ನು ಕೊಯ್ಲು ಮಾಡಿಕೊಳ್ಳುವುದು ಉತ್ತಮ ಎಂಬ ಸಲಹೆಗಳು ಕೇಳಿಬರುತ್ತಿವೆ. ಮಳೆಯಿಂದ ಶೀತ ಹೆಚ್ಚಾದರೆ ಕೊಯ್ಲಿಗೆ ಬಂದಿರುವ ರಾಗಿ ಬೆಳೆ ತೆನೆಯಲ್ಲೇ ಮೊಳಕೆಯೊಡೆಯುವುದರಿಂದ ಕೂಲಿಯಾಳುಗಳನ್ನು ಬಳಸಿಕೊಂಡು ತೆನೆಗಳನ್ನು ಕೊಯ್ದುಕೊಂಡರೆ ಬೆಳೆ ಹಾನಿಯಿಂದ ಪಾರಾಗಬಹುದು. ಕೂಲಿಯಾಳುಗಳ ಸಮಸ್ಯೆ ಇರುವುದರಿಂದ ರೈತರಿಗೆ ಬೆಳೆಯನ್ನು ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಏನು ಮಾಡಬೇಕೆಂದು ತೋಚದೆ ರಾಗಿ ಬೆಳೆಗಾರರು ದಿಕ್ಕೆಟ್ಟಿದ್ದಾರೆ.

೧೮೭೭೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ:

ಮಳೆಯಾಗುತ್ತಿರುವುದರಿಂದ ಕೊಯ್ಲಿಗೆ ಬಂದಿರುವ ಭತ್ತ ಗದ್ದೆಯಲ್ಲೇ ಮಕಾಡೆ ಮಲಗಿದೆ. ಭತ್ತ ಗದ್ದೆಯಲ್ಲಿದ್ದರೂ ಮೊಳಕೆಯೊಡೆಯುವುದಿಲ್ಲ. ಹಾಗಾಗಿ ಮೇ ೩೧ರ ವೇಳೆಗೆ ಮಳೆ ಕಡಿಮೆಯಾಗುವುದರಿಂದ ಆನಂತರ ಕೊಯ್ಲು ಮಾಡಿಕೊಳ್ಳುವುದಕ್ಕೆ ಅವಕಾಶವಿದೆ.

ಜಿಲ್ಲೆಯಲ್ಲಿ ೧೮೭೭೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಇದೆ. ಇದರಲ್ಲಿ ಸುಮಾರು ೭೭೦೦ ಹೆಕ್ಟೇರ್‌ನಷ್ಟು ಭತ್ತ ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕಿನಲ್ಲಿದೆ. ಕೆಆರ್‌ಎಸ್ ನೀರನ್ನು ಬಳಸಿಕೊಂಡು ಮೊದಲು ನಾಟಿ ಮಾಡುವವರು ಶ್ರೀರಂಗಪಟ್ಟಣ, ಪಾಂಡವಪುರ ತಾಲೂಕಿನ ರೈತರೇ ಆಗಿರುವುದರಿಂದ ಮೊದಲು ಕಟಾವಿಗೆ ಬರುವುದು ಈ ಭಾಗದಲ್ಲೇ ಆಗಿದೆ. ಇನ್ನು ರಾಗಿ ೨೫೮೦ ಹೆಕ್ಟೇರ್‌ನಲ್ಲಿದ್ದು ಮಳವಳ್ಳಿ, ಮಂಡ್ಯ, ಮದ್ದೂರು ಭಾಗದಲ್ಲಿ ರಾಗಿಯನ್ನು ಬೆಳೆಯಲಾಗಿದೆ.

ಕೊಯ್ಲಿಗೆ ಇನ್ನೂ ೧೦ ದಿನ ಕಾಲಾವಕಾಶ:

ಭತ್ತ ಕೊಯ್ಲು ಮಾಡುವುದಕ್ಕೆ ಇನ್ನೂ ೧೦ ದಿನಗಳ ಕಾಲಾವಕಾಶವಿದೆ. ಭತ್ತದ ಬೆಳೆ ಗದ್ದೆಯಲ್ಲೇ ಒಣಗಿದರೂ ಬೆಳೆಗೆ ಹಾನಿಯಾಗುವುದಿಲ್ಲ. ಭತ್ತದ ತೆನೆಗಳು ಮಣ್ಣು ಸೇರದಂತೆ ನೋಡಿಕೊಳ್ಳಬೇಕು. ತೆನೆಗಳು ಮಣ್ಣು ಸೇರಿದರೆ ಭತ್ತವೂ ಮೊಳಕೆಯೊಡುವ ಆತಂಕವಿದೆ. ಹಾಗಾಗಿ ಭತ್ತ ಬೆಳೆದವರು ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ. ಕಟಾವಿಗೆ ಮಳೆ ನಿಲ್ಲುವವರೆಗೂ ಕಾಯಬಹುದು.

ಮಳೆಯಿಂದಾಗಿ ಗದ್ದೆಯಲ್ಲಿ ನೀರು ನಿಂತಿರುವುದರಿಂದ ಈಗ ಕಟಾವು ಮಾಡಲಾಗುವುದಿಲ್ಲ. ಕಟಾವಿಗೆ ಮುಂದಾದರೆ ನಷ್ಟಕ್ಕೊಳಗಾಗುವ ಸಾಧ್ಯತೆಗಳಿರುವುದರಿಂದ ಮೇ ೩೧ರ ಬಳಿಕವಷ್ಟೇ ಕಟಾವಿಗೆ ಇಳಿಯುವುದು ಸೂಕ್ತ ಎನ್ನಲಾಗಿದೆ.

ಈಗಾಗಲೇ ಭತ್ತ ಕೊಯ್ಲು ಮಾಡಿದವರು ಬೆಳೆಯನ್ನು ಒಣಗಿಸಿಕೊಳ್ಳಲು ಪರದಾಡುವಂತಾಗಿದೆ. ಮಳೆಯಾಗುತ್ತಿರುವುದರಿಂದ ಭತ್ತವನ್ನು ಸಂರಕ್ಷಿಸಿಡಲು ಹರಸಾಹಸಪಡುತ್ತಿದ್ದಾರೆ.

ಅದಕ್ಕಾಗಿ ಕೆಲವರು ಮನೆಯೊಳಗೆ ಟಾರ್ಪಾಲುಗಳನ್ನು ಹಾಸಿ ಭತ್ತದ ಬೆಳೆಯನ್ನು ಒಣಗಿಸುತ್ತಿದ್ದಾರೆ. ಹಲವರು ಮಳೆ ಆದಷ್ಟು ಬೇಗ ನಿಂತು ಬಿಸಿಲು ಬರುವಂತಾಗಲಿ. ಭತ್ತ, ರಾಗಿ ಕೊಯ್ಲು ಮುಗಿಯುವವರೆಗೆ ಮಳೆ ಅವಕಾಶ ನೀಡಲಿ ಎಂದು ದೇವರಲ್ಲಿ ಮೊರೆ ಇಟ್ಟಿದ್ದಾರೆ.ಇನ್ನು ಮೂರು ದಿನಗಳ ಕಾಲ ಮಳೆ ಇರಲಿದೆ. ನಂತರ ಕಡಿಮೆಯಾಗಿ ಬಿಸಿಲು ಬರಲಿದೆ. ಅಲ್ಲಿಯವರೆಗೆ ಭತ್ತವನ್ನು ಕಟಾವು ಮಾಡದಿದ್ದರೂ ತಡೆದುಕೊಳ್ಳುತ್ತವೆ. ರಾಗಿಯ ತೆನೆಯನ್ನು ಕೊಯ್ಲು ಮಾಡಿಕೊಳ್ಳುವುದು ಉತ್ತಮ. ತೆನೆಯಲ್ಲೇ ರಾಗಿ ಮೊಳಕೆಯೊಡೆಯುವ ಸಾಧ್ಯತೆಗಳಿರುವುದರಿಂದ ಹೊಲದಲ್ಲೇ ಬಿಟ್ಟರೆ ಶೀತ ಹೆಚ್ಚಾಗುತ್ತದೆ. ರಾಗಿ ಬೆಳೆದ ರೈತರು ಈ ಬಗ್ಗೆ ಎಚ್ಚರ ವಹಿಸುವ ಅಗತ್ಯ.

- ಅಶೋಕ್, ಜಂಟಿ ಕೃಷಿ ನಿರ್ದೇಶಕರು

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್