ರಕ್ತ ಪ್ರಾಣ ಉಳಿಸಿದರೆ ನೇತ್ರದಾನ ಅಂಧರಿಗೆ ಬೆಳಕು: ಡಾ.ಜೆ.ಪಿ.ಕೃಷ್ಣೇಗೌಡ

KannadaprabhaNewsNetwork |  
Published : May 27, 2025, 11:45 PM IST
ಚಿಕ್ಕಮಗಳೂರಿನ ಲಯನ್ಸ್ ಸೇವಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರವನ್ನು ಡಾ. ಜೆ.ಪಿ. ಕೃಷ್ಣೇಗೌಡ ಅವರು ಉದ್ಘಾಟಿಸಿದರು. ಡಾ. ಹರೀಶ್‌, ಜಿ. ರಮೇಶ್‌, ಸಿ.ಎನ್‌. ಕುಮಾರ್‌ ಇದ್ದರು. | Kannada Prabha

ಸಾರಾಂಶ

ದಾನ ದಾನಗಳಲ್ಲಿ ರಕ್ತದಾನ ಮತ್ತು ನೇತ್ರದಾನ ಅತ್ಯಂತ ಮಹತ್ವದ ದಾನಗಳಾಗಿದ್ದು, ರಕ್ತ ರೋಗಿಯ ಪ್ರಾಣ ಉಳಿಸಿದರೆ, ನೇತ್ರದಾನ ಅಂಧರ ಬದುಕಿಗೆ ಬೆಳಕು ನೀಡುತ್ತದೆ ಎಂದು ಮಕ್ಕಳ ತಜ್ಞ ಡಾ.ಜೆ.ಪಿ.ಕೃಷ್ಣೇಗೌಡ ಹೇಳಿದರು.

ರಕ್ತದಾನ ಶಿಬಿರ । ಉಚಿತ ನೇತ್ರ ತಪಾಸಣಾ ಶಿಬಿರ । ರೈತ ಸಂಘ ಸೇರಿ ವಿವಿಧ ಸಂಸ್ಥೆಗಳಿಂದ ಆಯೋಜನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ದಾನ ದಾನಗಳಲ್ಲಿ ರಕ್ತದಾನ ಮತ್ತು ನೇತ್ರದಾನ ಅತ್ಯಂತ ಮಹತ್ವದ ದಾನಗಳಾಗಿದ್ದು, ರಕ್ತ ರೋಗಿಯ ಪ್ರಾಣ ಉಳಿಸಿದರೆ, ನೇತ್ರದಾನ ಅಂಧರ ಬದುಕಿಗೆ ಬೆಳಕು ನೀಡುತ್ತದೆ ಎಂದು ಮಕ್ಕಳ ತಜ್ಞ ಡಾ.ಜೆ.ಪಿ.ಕೃಷ್ಣೇಗೌಡ ಹೇಳಿದರು.

ಚಿಕ್ಕಮಗಳೂರು ಸಿವಿಲ್ ಎಂಜಿನಿಯರ್ ಸಂಘ, ಲಯನ್ಸ್ ಸಂಸ್ಥೆ, ಕರ್ನಾಟಕ ರಾಜ್ಯ ರೈತ ಸಂಘ, ವೈದ್ಯಕೀಯ ವಿಜ್ಞಾನ ಸಂಸ್ಥೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಹೋಲಿಕ್ರಾಸ್ ಆಸ್ಪತ್ರೆ ಜಂಟಿಯಾಗಿ ಮಂಗಳವಾರ ಲಯನ್ಸ್ ಸೇವಾ ಭವನದಲ್ಲಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಇಂತಹ ಮಹತ್ಪೂರ್ಣವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಬಡಜನರ ಬದುಕಿಗೆ ಸಹಕಾರ ನೀಡಿದ್ದು, ಇವರ ಈ ಕಾರ್ಯವನ್ನು ಶ್ಲಾಘಿಸಿದರು. ಚಿಕ್ಕಮಗಳೂರಿನ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಿರ್ದೇಶಕ ಡಾ.ಹರೀಶ್ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಸೇವಾ ಕಾರ್ಯಕ್ರಮಗಳಿಗೆ ಮೆಡಿಕಲ್ ಕಾಲೇಜು ತನ್ನ ಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಪುಷ್ಪರಾಜ್ ಮಾತನಾಡಿ, ಸಾಮಾನ್ಯ ಜನರಿಗೆ ರಕ್ತದಾನ ಶಿಬಿರದ ಅನುಕೂಲವಾಗುವ ದೃಷ್ಠಿಯಿಂದ ಲಯನ್ಸ್ ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸಿದ್ದು, ಮುಂದೆ ಸರ್ಕಾರದ ಸೇವಾ ಕಾರ್ಯಗಳಿಗೆ ಲಯನ್ಸ್ ಸಂಸ್ಥೆ ಸದಾ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಸಿವಿಲ್ ಎಂಜಿನಿಯರ್ಸ್‌ ಸಂಘದ ಅಧ್ಯಕ್ಷ ಜಿ. ರಮೇಶ್ ಮಾತನಾಡಿ, ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ಕಳೆದ ಅವಧಿಯಲ್ಲಿ 500 ಯೂನಿಟ್ ರಕ್ತ ಸಂಗ್ರಹಿಸಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆ ನೀಡಿದ್ದು, ಮುಂದೆ ಅಧ್ಯಕ್ಷರಾಗುವ ಸಿ.ಎನ್. ಕುಮಾರ್‌ರವರ ಅಧ್ಯಕ್ಷತೆಯಲ್ಲಿ ಇನ್ನೂ 500 ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸುನಿಲ್‌ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ರೂಪಾ ಜೈನ್, ಹೋಲಿಕ್ರಾಸ್ ಆಸ್ಪತ್ರೆಯ ಹಿರಿಯ ಪ್ರಯೋಗಾಲಯ ತಜ್ಞೆ ಲಿಲ್ಲಿ ಪೆರಿಸ್ ಮಾತನಾಡಿದರು.

ಸಿವಿಲ್ ಎಂಜಿನಿಯರ್ಸ್‌ ಸಂಘದ ಅಧ್ಯಕ್ಷ ಜಿ. ರಮೇಶ್ ಸ್ವಾಗತಿಸಿದರು, ರಕ್ತದಾನ ಶಿಬಿರದ ಸಂಯೋಜಕಿ ಲಯನ್ಸ್ ನಜ್ಮಾ ಆಲಿ ವಂದಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಗೋಪಿಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಸಂಸ್ಥೆಯ ವಲಯಾಧ್ಯಕ್ಷ ಬಿ.ಎನ್. ವೆಂಕಟೇಶ್, ಹಿರಿಯ ಲಯನ್ಸ್ ಸದಸ್ಯ ಎಸ್.ಆರ್. ವೈದ್ಯ, ಉಪಾಧ್ಯಕ್ಷ ಸಿ.ಎನ್. ಕುಮಾರ್, ಖಜಾಂಚಿ ಗಿರೀಶ್, ಶಿವಣ್ಣ ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್