ಶಿಕ್ಷಣ, ರಾಜಕೀಯ, ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡುವ ಉದ್ದೇಶ । ಡಿಸಿಎಂ ಡಾ.ಜಿ. ಪರಮೇಶ್ವರ್ ಉದ್ಘಾಟನೆ
ಬಲಗೈ ಸಮುದಾಯವನ್ನು ಸಂಘಟಿಸುವ ಹಾಗೂ ಶಿಕ್ಷಣ, ರಾಜಕೀಯ ಮತ್ತು ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ವತಿಯಿಂದ ಜುಲೈ 19ರಂದು ನಗರದ ಅಂಬಾರಿ ಪ್ಯಾಲೇಸ್‌ನಲ್ಲಿ ಛಲವಾದಿ–ಹೊಲೆಯ ಬಲಗೈ ಜಾತಿಗಳ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಒಕ್ಕೂಟದ ಮುಖಂಡರು ತಿಳಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಲಗೈ ಜಾತಿಗಳ ಒಕ್ಕೂಟದ ಮುಖಂಡ ವೆಂಕಟ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸಮಾವೇಶವನ್ನು ಉದ್ಘಾಟಿಸಲಿದ್ದು, ಸಚಿವ ಎಚ್.ಸಿ. ಮಹದೇವಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸುಮಾರು ಐದು ಸಾವಿರ ಮಂದಿ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಡಾ. ಟಿ. ಶ್ರೀನಿವಾಸಪ್ಪ ಅವರು ಸಮಾವೇಶದ ಪ್ರಧಾನ ಜವಾಬ್ದಾರಿಯನ್ನು ಹೊತ್ತಿದ್ದಾರೆ ಎಂದು ಹೇಳಿದರು.ಸಮುದಾಯದ ಸಂಘಟನೆಯ ಮೂಲಕ ಜಾಗೃತಿ ಮೂಡಿಸುವುದು ಸಮಾವೇಶದ ಮುಖ್ಯ ಉದ್ದೇಶವಾಗಿದೆ. ಶಿಕ್ಷಣ, ರಾಜಕೀಯ ಪ್ರಾತಿನಿಧ್ಯ ಹಾಗೂ ಆರ್ಥಿಕ ಬಲವರ್ಧನೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಒನಕೆ ಓಬವ್ವ ಅವರ ಸರ್ಕಾರಿ ಜಯಂತಿ ಯಶಸ್ವಿಯಾಗದಿರುವುದಕ್ಕೆ ತಾಲೂಕಿನಲ್ಲಿ ಸಮುದಾಯದ ಸಂಖ್ಯಾಬಲ ಕಡಿಮೆ ಇರುವುದು ಹಾಗೂ ಜಿಲ್ಲೆಯಾದ್ಯಂತ ಸಮುದಾಯವನ್ನು ಒಗ್ಗೂಡಿಸಲು ಸಾಧ್ಯವಾಗದಿರುವುದು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಮರುಕಳಿಸದಂತೆ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಇಂದು ನಾವು ಕೇವಲ ಒಂದು ಸಮುದಾಯದ ಕಾರ್ಯಕ್ರಮಕ್ಕಾಗಿ ಸಂಭ್ರಮಕ್ಕಾಗಿ ಸೇರಬೇಕಿಲ್ಲ. ಬದಲಿಗೆ ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳಲು, ನಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಲು ಮತ್ತು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಒಂದಾಗಿದ್ದೇವೆ, ಒಂದಾಗಿಯೇ ಸಾಗಬೇಕಾಗಿದೆ. ಹೊಲೆಯ ಜನಾಂಗವು ಶತಮಾನಗಳ ಇತಿಹಾಸವನ್ನು ಹೊಂದಿರುವ ಶ್ರಮಜೀವಿ ಸಮುದಾಯವಾಗಿದೆ. ಅನೇಕ ಸಂಕಷ್ಟಗಳು, ಸಾಮಾಜಿಕ ಅಸಮಾನತೆಗಳು ಮತ್ತು ತಾರತಮ್ಯಗಳನ್ನು ಎದುರಿಸಿದರೂ ಈ ಸಮುದಾಯ ತನ್ನ ಆತ್ಮಸ್ಥೆರ್ಯ, ದುಡಿಮೆ ಮತ್ತು ಸಂಸ್ಕೃತಿಯನ್ನು ಎಂದಿಗೂ ಕಳೆದುಕೊಳ್ಳಲಿಲ್ಲ. ನಮ್ಮ ಪೂರ್ವಜರ ಶ್ರಮದಿಂದ ಸಮಾಜ ಕಟ್ಟಲ್ಪಟ್ಟಿದೆ. ಅವರ ತ್ಯಾಗ ಬಲಿದಾನದಿಂದ ಗ್ರಾಮಗಳು ಬೆಳೆದಿವೆ ಮತ್ತು ನಾಗರಿಕತೆ ಮುಂದುವರಿದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಆಂಜನೇಯ, ಹರೀಶ್, ಮುನಿಕೃಷ್ಣಪ್ಪ, ಮತ್ತಿತರರು ಇದ್ದರು.