'Sagar Kinare' musical evening entertained the crowd
-ಸ್ಮಾಲ್ ಕಿಕ್ಕರ್
ಸಂಗೀತದ ಮಾಧುರ್ಯದಲ್ಲಿ ಮಿಂದೆದ್ದ ಜನ
---
-ದೊಡ್ಡ ಮಟ್ಟದಲ್ಲಿ ಸಂಗೀತ ಕಾರ್ಯಕ್ರಮ ಆಯೋಜನೆ । ಸರ್ಕಾರಿ ನೌಕರರ ಸಂಘದ ಷಡಾಕ್ಷರಿ ಮೆಚ್ಚುಗೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಶಿ ಮತ್ತು ಶರತ್ ಮರಿಯಪ್ಪ ಅವರ ಕಾಂಬಿನೇಷನ್ ನನಗೆ ವಿಶೇಷವಾಗಿ ಕಾಣುತ್ತಿದೆ. ಜನರನ್ನು ರಂಜಿಸಲು ದೊಡ್ಡ ಮಟ್ಟದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ವಿಶ್ವಕರ್ಮ ಯಕ್ಷಾಭಿಮಾನಿ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ''''ಸಾಗರ್ ಕಿನಾರೆ'''' ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ಒಟ್ಟಾಗಿ ಬಿಸಿನೆಸ್ ಮಾಡೋಣ ಅಂತಾರೆ. ಆದರೆ, ಈ ಜೋಡಿ ಜನರನ್ನು ರಂಜಿಸುವುದಕ್ಕೆಸಂಗೀತ ಕಾರ್ಯಕ್ರಮ ಮಾಡೋಣ ಅಂತ ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ಕಾರಣವಾಗಿದ್ದೇ ವಿಶೇಷ. ಅವರ ಪ್ರಯತ್ನ ಹೀಗೆಯೇ ಮುಂದುವರೆಯಲಿ. ಸಾರ್ವಜನಿಕ ಜೀವನದಲ್ಲಿ ಶಾಶ್ವತವಾಗಿ ಉಳಿಯುವಂತಹ ಇನ್ನಷ್ಟು ಕಾರ್ಯಕ್ರಮ ಮಾಡಲಿ ಎಂದು ಆಶಿಸಿದರು.
ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಮಾತನಾಡಿ, ಡಾ.ಶರತ್ ಮರಿಯಪ್ಪ ಫೌಂಡೇಷನ್ ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ''''''''ರನ್ ಮಲೆನಾಡು'''''''' ಓಟ ಏರ್ಪಡಿಸಿತ್ತು. ಅದಕ್ಕೆ ಅಭೂತಪೂರ್ವ ಯಶಸ್ಸು ಕಂಡಿತ್ತು. ಇದಾದ ನಂತರವೀಗ ''''''''ಸಾಗರ್ ಕಿನಾರೆ'''''''' ಕಾರ್ಯಕ್ರಮಕ್ಕೂ ದೊಡ್ಡಮಟ್ಟದಲ್ಲಿ ಜನ ಬೆಂಬಲ ಸಿಕ್ಕಿದ್ದು ಖುಷಿ ತಂದಿದೆ. ಅವರ ಭವಿಷ್ಯದ ಕಾರ್ಯಕ್ರಮಗಳಿಗೂ ಇದೇ ರೀತಿಯ ಬೆಂಬಲ, ಪ್ರೋತ್ಸಾಹ ಸಿಗಲಿ ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ ಮಾತನಾಡಿ, ಇಲ್ಲಿ ಮಾತಿಗೆ ಸಮಯವಲ್ಲ, ಹಾಗಾಗಿ ನಾನು ಮಾತನಾಡುವುದು ಬೇಡ ಎಂದುಕೊಂಡಿದ್ದೆ. ಆದರೆ ಇಲ್ಲಿ ಡಾ.ಶ್ರೀಧರ್ ಅವರಂತಹ ಅನೇಕ ಗಣ್ಯರು ಬಂದಿದ್ದಾರೆ. ಅಲ್ಲಿಗೆ ಈ ಕಾರ್ಯಕರ್ಮದ ಸಾರ್ಥಕತೆ ಕಾಣುತ್ತಿದೆ. ಶರತ್ ಮತ್ತು ಶಶಿ ಇಂತವರು ಹಲವು ಕಾರ್ಯಕ್ರಮ ಮಾಡಿ, ಜನರ ಮನಸ್ಸು ರಂಜಿಸಲಿ ಎಂದು ಹೇಳಿದರು.
ಕಾರ್ಯಕ್ರಮದ ರೂವಾರಿ ಡಾ. ಶರತ್ ಮರಿಯಪ್ಪ ಮಾತನಾಡಿ, ಶಿವಮೊಗ್ಗೆಯ ಜನರಿಗೆ ಒಂದೊಳ್ಳೆಯ ಸಂಗೀತ ಸಂಜೆ ಕಾರ್ಯಕ್ರಮ ನಡೆಸಬೇಕು ಎಂದು ನಾವು ತುಂಬಾ ಹಿಂದೆಯೇ ಯೋಚಿಸಿದ್ದೆವು. ಕಿಶೋರ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ನೆನಪಿನಲ್ಲಿ ಮಾಡೋಣ ಎನ್ನುವ ಬಗ್ಗೆ ತೀರ್ಮಾನಿಸಿದ್ದೆವು. ಈ ನಡುವೆಯೇ ಕನ್ನಡದವರೇ ಆದ ದೇಶದ ಹೆಸರಾಂತ ಗಾಯಕಿ ಎಸ್.ಜಾನಕಿ ಅವರು ನಿಧನರಾದರು. ಆ ಮೂವರ ನೆನೆಪಿನಲ್ಲಿ ಮಾಡೋಣ ಅಂತ ತೀರ್ಮಾನಿಸಿದೆವು. ಈ ಕಾರ್ಯಕ್ರಮಕ್ಕೆ ಈ ಮಟ್ಟದ ಜನಬೆಂಬಲ ಸಿಗಬಹುದೆಂದು ನಿರೀಕ್ಷೆ ಮಾಡಿರಲಿಲ್ಲ ಎಂದರು.
ಸಾಗರ್ ಕಿನಾರೆ ಸಂಗೀತ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್, ಹೆಸರಾಂತ ಗಾಯಕ ಹುಮಯಾನ್ ಹರ್ಲಾಪುರ ಅವರು ಚಂಡೆ ಬಾರಿಸಿ ಉದ್ಘಾಟಿಸಿದರು. ಪ್ರಮುಖರಾದ ಕೆ. ರಂಗನಾಥ್, ಎನ್. ರಮೇಶ್, ಸಂತೆಕಡೂರು ವಿಜಯ್ ಕುಮಾರ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್, ಲೇಖಕ ಎಂ.ಎನ್. ಸುಂದರಾಜ್, ಎಸ್.ಕೆ. ತಾರಾನಾಥ್ ಕಾಂಗ್ರೆಸ್ ಮುಖಂಡರಾದ ಪರ್ವೀಜ್ ಅಪ್ತಾಬ್, ವಿನಯ್ ತಾಂದ್ಲೆ ಇದ್ದರು.
....ಬಾಕ್ಸ್...
ಹಳೆನೆನಪುಗಳ ಭಾವುಕ ಸಾಗರದಲ್ಲಿ ತೇಲಿಸಿದ ಸಾಗರ್ ಕಿನಾರೆ
ಸಂಗೀತ ಸಾಮ್ರಾಜ್ಯದ ದಿಗ್ಗಜ ಕಿಶೋರ್ ಕುಮಾರ್, ಲತಾ ಮಂಗೇಶ್ಕರ್ ಹಾಗೂ ಎಸ್‌ಜಾನಕಿ ಅವರ ನೆನಪಿನಲ್ಲಿ ಡಾ. ಶರತ್ ಮರಿಯಪ್ಪ ಮತ್ತು ವಿಶ್ವಕರ್ಮ ಯಕ್ಷಾಭಿಮಾನಿ ವೇದಿಕೆಯಿಂದ ಭಾನುವಾರ ಸಂಜೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ''''ಸಾಗರ್ ಕಿನಾರೆ'''' ಸಂಗೀತ ಸಂಜೆ ಕಾರ್ಯಕ್ರಮ ಅಭೂತ ಪೂರ್ವ ಯಶಸ್ಸು ಕಂಡಿತು. ಹಾಡುಗಳು ಹಳೆಯದಾಗಬಹುದು, ಆದರೆ, ಅವು ಹುಟ್ಟಿಸುವ ಭಾವನೆಗಳು ಎಂದಿಗೂ ಹಳೆಯದಾಗುವುದಿಲ್ಲ ಎಂಬುದನ್ನು ‘ಸಾಗರ್ ಕಿನಾರೆ’ ಸಂಗೀತ ಸಂಜೆ ಮತ್ತೊಮ್ಮೆ ಸಾಬೀತುಪಡಿಸಿತು. ಹೆಸರಾಂತ ಗಾಯಕರಾದ ರಾಮಚಂದ್ರ ಹಡಪದ್ ಹಾಗೂ ಎಂ.ಡಿ. ಪಲ್ಲವಿ ಅವರ ಕಂಠಸಿರಿಯಲ್ಲಿ ವೇದಿಕೆಯಲ್ಲಿ ಮೊಳಗಿದ ಒಂದೊಂದು ಗೀತೆಗೂ ಪ್ರೇಕ್ಷಕರಿಂದ ಚಪ್ಪಾಳೆಯ ಸದ್ದು ಮೊಳಗುತ್ತಿತ್ತು.
ವಾರದ ರಜೆ ದಿನದಂದು ಸಭಾಂಗಣ ಪ್ರೇಕ್ಷಕರಿಂದ ಕಿಕ್ಕಿರಿದಿತ್ತು. ಸಂಜೆಯ ತಂಪಾದ ಗಾಳಿ, ವೇದಿಕೆಯಲ್ಲಿ ಮಿನುಗುತ್ತಿದ್ದ ಬೆಳಕು, ಕಿವಿಗೆ ಇಂಪು ನೀಡುತ್ತಿದ್ದ ಸಂಗೀತ ಹಾಡಿನೊಂದಿಗೆ ತಲೆದೂಗುತ್ತಿದ್ದ ಪ್ರೇಕ್ಷಕರು ಸಂಗೀತದ ಮಾಧುರ್ಯದಲ್ಲಿ ಮಿಂದೆದ್ದ ಕ್ಷಣಗಳಿಗೆ ಕುವೆಂಪು ರಂಗಮಂದಿರ ಸಾಕ್ಷಿಯಾಯಿತು.
---
ಪೋಟೋ: 18ಎಸ್‌ಎಂಜಿಕೆಪಿ02
ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ವಿಶ್ವಕರ್ಮ ಯಕ್ಷಾಭಿಮಾನಿ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ''''ಸಾಗರ್ ಕಿನಾರೆ'''' ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ರೂವಾರಿ ಡಾ. ಶರತ್ ಮರಿಯಪ್ಪ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.