ಅಡಕೆಗೆ ಪ್ರಧಾನಿ ಮೋದಿ ಸರ್ಕಾರದಿಂದಲೇ ಆತಂಕ

KannadaprabhaNewsNetwork |  
Published : Aug 19, 2026, 01:30 AM IST
ಫೊಟೋ 18 ಟಿಟಿಎಚ್ 01: ತೀರ್ಥಹಳ್ಳಿ ಪಟ್ಟಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿ.ಎ.ರಮೇಶ್ ಹೆಗ್ಡೆ ಮಾತನಾಡಿದರು. ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಯುವ ಕಾಂಗ್ರೆಸ್ ಮುಖಂಡ ಅಮರನಾಥ ಶೆಟ್ಟಿ  ಇದ್ದರು. | Kannada Prabha

ಸಾರಾಂಶ

Prime Minister Modi's government is worried about Adake

-ಅಡಕೆ ರಾಜಕಾರಣ ಬಿಡಬೇಕು-ತೀರ್ಥಹಳ್ಳಿಯಲ್ಲಿ ಕೆಪಿಸಿಸಿ ವಕ್ತಾರ ರಮೇಶ್ ಹೆಗ್ಡೆ ಆಗ್ರಹ । ಗುಟ್ಕಾ ನಿಷೇಧ: ಅಟಲ್‌ ಸರ್ಕಾರದ ವರದಿ ಗಮನಿಸಿಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಗುಟ್ಕಾ ರದ್ದಾಗಿ ಬಹಳ ವರ್ಷಗಳೇ ಸಂದಿದೆ. ಕರ್ನಾಟಕದಲ್ಲಿ ಈಚೆಗೆ ನಡೆದ ಗುಟ್ಕಾ ನಿಷೇಧದ ಬಗ್ಗೆ ಕಾಂಗ್ರೆಸ್ ವಿರುದ್ಧ ಮಾತನಾಡುವ ಬಿಜೆಪಿ ಮುಖಂಡರು ವಾಜಪೇಯಿ ಸರ್ಕಾರದ ಅವಧಿಯಲ್ಲಿ ರಚಿಸಿದ್ದ ಸಹಕಾರ ಭಾರತಿ ಮುಖಂಡರನ್ನು ಒಳಗೊಂಡಿದ್ದ ಸಮಿತಿ ನೀಡಿದ ವರದಿಯನ್ನು ಗಮನಿಸಬೇಕು ಎಂದು ಕೆಪಿಸಿಸಿ ವಕ್ತಾರ ಬಿ.ಎ. ರಮೇಶ್ ಹೆಗ್ಡೆ ಆಗ್ರಹಿಸಿದರು.

ಹಿಂದೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯಲ್ಲಿ ಪೂಜ್ಯ ಭಾವನೆ ಹೊಂದಿರುವ ಲಕ್ಷಾಂತರ ರೈತರ ಬದುಕಿನ ಬೆಳೆಯಾಗಿರುವ ಅಡಕೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದಲೇ ಆತಂಕ ಇದೆ. 2001 ರಲ್ಲಿ ವಾಜಪೇಯಿ ಸರ್ಕಾರ ರಚಿಸಿದ್ದ ಸಹಕಾರ ಭಾರತಿ ಮುಖಂಡರನ್ನು ಒಳಗೊಂಡಿದ್ದ ಸಮಿತಿ ನೀಡಿದ ವರದಿಯಲ್ಲಿ ಅಡಕೆ ಕ್ಯಾನ್ಸರ್‌ಕಾರಕ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಔಷಧೀಯ ಗುಣವನ್ನೂ ಹೊಂದಿರುವ ಅಡಕೆಗೆ ಕ್ಯಾನ್ಸರ್‌ಕಾರಕ ಹಣೆ ಪಟ್ಟಿ ಕಟ್ಟುವುದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಮುಖ್ಯ ಕಾರಣ. ಬಿಜೆಪಿ ಮುಖಂಡರು ಅಡಕೆ ರಾಜಕಾರಣ ಬಿಡಬೇಕು. ಅಡಕೆ ಮೌಲ್ಯವರ್ಧನೆಗೆ ಒತ್ತು ನೀಡುವಲ್ಲಿ ನಾವೆಲ್ಲರೂ ಸೇರಿ ಚಿಂತನೆ ನಡೆಸಬೇಕಿದೆ ಎಂದರು.

ಸಹಕಾರ ಭಾರತಿ ಮುಖಂಡರಿದ್ದ ಸಮಿತಿ ನೀಡಿದ ವರದಿಯಲ್ಲಿ ಗುಟ್ಕಾ ಪಾನ್ ಮಸಾಲಾ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಡಕೆ ತೋಟದ ವಿಸ್ತರಣೆಗೆ ರಾಷ್ಟ್ರೀಕೃತ ಬ್ಯಾಂಕ್‌ ಗಳು ಹಾಗೂ ಸಹಕಾರ ಸಂಸ್ಥೆಗಳು ಮತ್ತು ನಬಾರ್ಡ್ ಅರ್ಥಿಕ ನೆರವು ನೀಡಬಾರದು ಎಂದೂ ಹೇಳಲಾಗಿದೆ. ಅಡಕೆ ನಿಷೇಧಿಸುವಂತೆ ಜಾರ್ಖಂಡ್ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಪ್ರದಾನಿಗೆ ಪತ್ರವನ್ನೂ ಬರೆದಿದ್ದರು. ಅಡಕೆ ಮಾನ ಹರಾಜು ಮಾಡಿ ಈಗ ತಾವೇ ಅಡಕೆ ರಕ್ಷಕರು ಎಂದು ಹೇಳಿಕೊಳ್ಳುವ ಬಿಜೆಪಿ ಮುಖಂಡರು ಈ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಟೀಕಿಸಿದರು.

2017 ರಲ್ಲಿ ಮೋದಿ ಸರ್ಕಾರದಲ್ಲಿ ಆರೋಗ್ಯ ರಾಜ್ಯ ಸಚಿವರಾಗಿದ್ದ ಅನುಪ್ರಿಯಾ ಪಟೇಲ್ ಮತ್ತು ಅಶ್ವಿನ್ ಕುಮಾರ್ ಚೌಬೆ ಅಡಕೆ ಕ್ಯಾನ್ಸರ್‌ಕಾರಕವೆಂದು ಸಂಸತ್ತಿನ ಅಧಿವೇಶನದಲ್ಲೇ ಲಿಖಿತ ಹೇಳಿಕೆ ನೀಡಿರುವುದನ್ನು ಸ್ವತಃ ಪ್ರದಾನಿ ಸೇರಿದಂತೆ ಯಾವೊಬ್ಬ ಮುಖಂಡರು ಈ ಬಗ್ಗೆ ಯಾಕೆ ಪ್ರತಿಕ್ರಿಯೆ ನೀಡಿಲ್ಲ ಎಂದರಲ್ಲದೇ 2021ರಲ್ಲಿ ಬಿ.ಎಸ್.ಯಡ್ಯೂರಪ್ಪ ಆಡಳಿತದಲ್ಲಿ ಕೃಷಿ ಮಾರಾಟ ಮಾಹಿತಿ ವೆಬ್‍ಸೈಟಿನಲ್ಲಿ ಅಡಕೆಯನ್ನು ಮಾದಕ ಉತ್ತೇಜಕ ಪಟ್ಟಿಗೆ ಸೇರಿಸಿ ಅಡಕೆ ಮಾನ ಹರಾಜು ಮಾಡಲಾಗಿದೆ ಎಂದೂ ಆರೋಪಿಸಿದರು.

ಸುಪ್ರೀಂಕೋರ್ಟಿಗೆ ಈ ವರೆಗೂ ಅಫಿಡವಿಟ್ ನೀಡದೆ ಅಡಕೆ ರಾಜಕಾರಣ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಅಡಕೆ ಬೆಳೆವ ರೈತರ ಬಗ್ಗೆ ಆಸಕ್ತಿ ಇಲ್ಲ. ಕೋರ್ಟ್ ತೀರ್ಪು ವಿರುದ್ಧವಾಗಿ ಬಂದರೆ ಅಡಕೆ ಬೆಳೆಯ ಸ್ಥಿತಿ ಶೋಚನೀಯವಾಗಲಿದೆ. ಕಾಂಗ್ರೆಸ್ ಮಾತ್ರ ಅಡಕೆ ಪರ ಕಾಳಜಿ ವಹಿಸಿದೆ. ತಾನು ಅಡಕೆ ರಕ್ಷಕನೆಂದು ಹೇಳಿಕೊಳ್ಳುವ ಶಾಸಕ ಆರಗ ಜ್ಞಾನೇಂದ್ರ ಕೇಂದ್ರ ಗೃಹಸಚಿವ ಅಮಿತ್ ಶಾ ಅಡಕೆ ಬೆಳೆಗಾರರಿಗೆ ನೀಡಿದ ಭರವಸೆಯನ್ನು ನೆನಪಿಸಿ 500 ಕೋಟಿ ಅನುದಾನವನ್ನು ತರುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿದ್ದ ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಶಾಸಕ ಆರಗ ಜ್ಞಾನೇಂದ್ರ ಆರ್.ಎಂ. ಮಂಜುನಾಥಗೌಡರ ನಡುವೆ ಹೊಂದಾಣಿಕೆ ಇದ್ದು ಮಂಜುನಾಥಗೌಡರ ಸಾಧನೆಯನ್ನು ಹೊಗಳಿದರೆ ಸಂತೋಷವೇ. ಸೈದ್ಧಾಂತಿಕವಾಗಿ ಬಿಜೆಪಿಗೆ ವಿರುದ್ಧವಾಗಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಫೊಟೋ

18 ಟಿಟಿಎಚ್ 01

ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿ.ಎ.ರಮೇಶ್ ಹೆಗ್ಡೆ ಮಾತನಾಡಿದರು. ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಯುವ ಕಾಂಗ್ರೆಸ್ ಮುಖಂಡ ಅಮರನಾಥ ಶೆಟ್ಟಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಟ್ಟನಹಳ್ಳಿ ಬಡಾವಣೆಗೆ ಸಮರ್ಪಕ ನೀರಿನ ವ್ಯವಸ್ಥೆ ಇಲ್ಲ
ಗುಟ್ಕಾ ನಿಷೇಧ: ಸಚಿವ ಯು.ಟಿ ಖಾದರ್ ಕ್ರಮ ಸ್ವಾಗತಾರ್ಹ