ಶರಣರ ಸಂದೇಶಗಳು ಸಂವಿಧಾನದ ಆಶಯಗಳಿಗೆ ಪೂರಕ

KannadaprabhaNewsNetwork |  
Published : Feb 11, 2026, 01:30 AM IST
ಚಿತ್ರದುರ್ಗ ಪೋಟೋ ಸುದ್ದಿ11   | Kannada Prabha

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣಲ್ಲಿ ಮಂಗಳವಾರ ನಡೆದ ಕಾಯಕ ಶರಣರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

12ನೇ ಶತಮಾನದ ಶರಣರ ಸಂದೇಶಗಳು ನಮ್ಮ ಸಂವಿಧಾನದ ಆಶಯಗಳಿಗೆ ಪೂರಕವಾಗಿವೆ. ಅವರ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಸುಂದರ ಭಾರತ ನಿರ್ಮಾಣ ಸಾಧ್ಯ ಎಂದು ಉಪ ವಿಭಾಗಾಧಿಕಾರಿ ವೆಂಕಟೇಶ ನಾಯ್ಕ ಅಭಿಪ್ರಾಯ ಪಟ್ಟರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕಾಯಕ ಶರಣರಾದ ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಇಂದಿನ ಯುವಪೀಳಿಗೆ ಕೇವಲ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಮಾರುಹೋಗದೆ, ನಮ್ಮ ಇತಿಹಾಸ ಮತ್ತು ಶರಣರು ಹಾಕಿಕೊಟ್ಟ ಜೀವನದ ದಾರಿಯನ್ನು ಅಳವಡಿಸಿಕೊಳ್ಳಬೇಕು ಎಂದರು.

ಸ್ವಾರ್ಥ ಜೀವನದ ಜೊತೆಗೆ ಸಮಾಜದ ಏಳಿಗೆಗಾಗಿ ಶ್ರಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸೌಲಭ್ಯಗಳು ತಲುಪಬೇಕು. ಈ ನಿಟ್ಟಿನಲ್ಲಿ ಏನಾದರೂ ಬೇಡಿಕೆಗಳಿದ್ದರೆ ಜಿಲ್ಲಾಡಳಿತ ಅವುಗಳನ್ನು ಈಡೇರಿಸಲು ಪ್ರಯತ್ನಿಸಲಿದೆ. ಜಯಂತಿಗಳು ಕೇವಲ ಸಾಂಕೇತಿಕ ಆಚರಣೆಯಾಗಬಾರದು, ಅವು ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಸುಧಾರಣೆ ತರಬೇಕು ಎಂದು ವೆಂಕಟೇಶ್ ನಾಯ್ಕ್ ಹೇಳಿದರು.

ಸಾಹಿತಿ ಆನಂದ್ ಉಪನ್ಯಾಸ ನೀಡಿ 900 ವರ್ಷಗಳ ಹಿಂದೆಯೇ ಜಾತಿ ವ್ಯವಸ್ಥೆಯ ವಿರುದ್ಧ ಕ್ರಾಂತಿ ಮಾಡಿದ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ ಹಾಗೂ ಸಮಗಾರ ಹರಳಯ್ಯನವರ ವಿಚಾರಧಾರೆಗಳು ಇಂದಿನ ಆಧುನಿಕ ಸಮಾಜಕ್ಕೆ ಅತ್ಯಗತ್ಯ. ಚೋಳ ರಾಜನ ವೈಭವದ ನೈವೇದ್ಯಕ್ಕಿಂತ ಶರಣ ಮಾದಾರ ಚೆನ್ನಯ್ಯನವರ ಅಂಬಲಿಗೆ ಶಿವನು ಒಲಿದ ಕಥೆಯೇ ಶರಣರ ಭಕ್ತಿ ಮತ್ತು ಕಾಯಕ ನಿಷ್ಠೆಗೆ ಸಾಕ್ಷಿಯಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಚಲವಾದಿ ಮಾತನಾಡಿ, ಶರಣರ ತತ್ವಗಳು ಮತ್ತು ಸಂದೇಶಗಳು ಮುಂದಿನ ಪೀಳಿಗೆಗೆ ತಲುಪಬೇಕಾದರೆ ಅವುಗಳನ್ನು ಲಿಖಿತ ರೂಪದಲ್ಲಿ ದಾಖಲಿಸುವುದು ಅತ್ಯಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶರಣರ ವಚನಗಳನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ಎಲ್ಲಾ ಕಾಲೇಜು ಹಾಗೂ ಗ್ರಂಥಾಲಯಗಳಿಗೆ ತಲುಪಿಸುವ ಮಹತ್ಕಾರ್ಯಕ್ಕೆ ಮುಂದಾಗಿದೆ ಎಂದರು.

ಜಯಂತಿ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಗುರುನಾಥ್ ಬಿ.ಎಂ.ಸ್ವಾಗತಿಸಿದರು. ಹಿಮಂತರಾಜ್ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು. ಆಕಾಶವಾಣಿಯ ಡಾ.ನವೀನ್ ಮಸ್ಕಲ್ ಕಾಯಕ್ರಮ ನಿರೂಪಿಸಿದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ತಹಶೀಲ್ದಾರ್ ಗೋವಿಂದರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂಸ್ತಾನ ಉಳಿದರೆ ಮಾತ್ರ ಸಂಸ್ಕೃತಿ ರಕ್ಷಣೆ
5,06,582 ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆ