ಗಾಂಧೀಜಿಯವರ ಗ್ರಾಮಸ್ವರಾಜ್ಯದ ಪರಿಕಲ್ಪನೆಯಲ್ಲಿ, ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬನೆಗೆ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ನೇತೃತ್ವದಲ್ಲಿ ನಡೆಯುತ್ತಿರುವ ಸಂಸ್ಥೆ ಸಿರಿ. ಧರ್ಮಾಧಿಕಾರಿ ಡಾ। ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಕನಸಿನ ಕೂಸಿದು. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯನ್ನು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಲಾಯ್ಲ ಪ್ರದೇಶದಲ್ಲಿ 2004ರಲ್ಲಿ ಪ್ರಾರಂಭಿಸಲಾಯಿತು.
ಏನಿದು ಸಿರಿ?:
ಸಿರಿ ಸಂಸ್ಥೆಯ ಉದ್ದೇಶ ಲಾಭ ಗಳಿಕೆಯಲ್ಲ. ಗ್ರಾಮೀಣ ಉದ್ಯಮಶೀಲತೆ ಅಭಿವೃದ್ಧಿಯ ಚಿಂತನೆ ಹೊಂದಿದೆ. ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಯ ಸಮುದಾಯಗಳು, ಅಲ್ಪಸಂಖ್ಯಾತರು ಹಾಗೂ ಆರ್ಥಿಕವಾಗಿ ದುರ್ಬಲ ಮಹಿಳೆಯರಿಗೆ ಗೌರವಯುತ ಜೀವನ, ಉದ್ಯೋಗ, ಆತ್ಮವಿಶ್ವಾಸ ಮತ್ತು ಆರ್ಥಿಕ ಸ್ವಾವಲಂಬನೆ ಒದಗಿಸುವ ಮಹತ್ತರವಾದ ಉದ್ದೇಶದಿಂದ ವೀರೇಂದ್ರ ಹೆಗ್ಗಡೆಯವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಣಕಾಸಿನ ನೆರವಿನೊಂದಿಗೆ ಪ್ರಾರಂಭಿಸಿದರು.ವಿಶೇಷ ಅನುಭವ, ಪರಿಣತಿ ಇಲ್ಲದ ಗ್ರಾಮೀಣ ಮಹಿಳೆಯರಿಗೆ ವೇತನ ಸಹಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನೀಡಿ ಅವರಿಂದ ಉತ್ತಮ ಗುಣಮಟ್ಟದ ಸಿದ್ಧ ಉಡುಪು ಉತ್ಪನ್ನಗಳು, ಫಿನಾಯಿಲ್, ಅಗರಬತ್ತಿ, ಕೋಕಂ ಜ್ಯೂಸ್, ಉಪ್ಪಿನಕಾಯಿ ಉತ್ಪನ್ನಗಳು ಸೇರಿದಂತೆ ಹಲವು ಬಗೆಯ ಗೃಹೋಪಯೋಗಿ ಉತ್ಪನ್ನಗಳನ್ನು ತಯಾರಿಸುವಂತೆ ಮಾಡಿರುವುದು ಸಿರಿಯ ವಿಶೇಷತೆ.ಆರಂಭದಲ್ಲಿ ಸುಮಾರು 50-60 ಹಳ್ಳಿಗಳಲ್ಲಿ ಸಿರಿ ಘಟಕಗಳನ್ನು ಸ್ಥಾಪಿಸಿ, ಅಲ್ಲಿರುವ ಬಡಮಹಿಳೆಯರಿಗೆ ಉತ್ಪಾದನೆಗೆ ಬೇಕಾಗುವ ಕಚ್ಚಾಸಾಮಗ್ರಿಗಳನ್ನು ಪೂರೈಸಿ, ಅವರಿಂದ ತಯಾರಿಸಲಾದ ಉತ್ಪನ್ನಗಳನ್ನು ಸಿರಿ ಸಂಸ್ಥೆಗೆ ತಂದು ಆಯ್ದ ಪ್ರದೇಶಗಳಲ್ಲಿ ಸಿರಿ ಬ್ರಾಂಡ್‌ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಬೇರೆ ಬೇರೆ ಕಡೆಗಳಲ್ಲಿರುವ ಘಟಕಗಳ ಉತ್ಪನ್ನಗಳನ್ನು ಸಿರಿ ಸಂಸ್ಥೆಗೆ ಸಾಗಿಸಲು ಅಧಿಕ ಸಾಗಾಟದ ವೆಚ್ಚ, ಉತ್ಪನ್ನಗಳ ಗುಣಮಟ್ಟವನ್ನು ಕಾಪಾಡಲು ಬಹಳಷ್ಟು ಸಮಸ್ಯೆಗಳಾಗುತ್ತಿರುವ ಹಿನ್ನೆಲೆಯಲ್ಲಿ ಸಿರಿಯ ವಿವಿಧ ಉತ್ಪಾದನಾ ವಿಭಾಗಗಳು ಒಂದೇ ಸೂರಿನಡಿ ಕಾರ್ಯಾಚರಿಸುವ ಬಗ್ಗೆ ನಿರ್ಧರಿಸಲಾಯಿತು. ಬೆಳ್ತಂಗಡಿಯ ರೆಂಕೆದಗುತ್ತುವಿನ ಬಳಿ ಸುಮಾರು ಏಳು ಎಕರೆಯ ನಿವೇಶನವನ್ನು 2022ರಲ್ಲಿ ಖರೀದಿಸಿ, ₹71 ಕೋಟಿ ವೆಚ್ಚದಲ್ಲಿ ಸುಮಾರು 1.50 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಸಿರಿ ಸಂಸ್ಥೆಗೆ ನೂತನ ಕಟ್ಟಡ ನಿರ್ಮಿಸುವ ಕಾರ್ಯಕ್ಕೆ 2023ರ ಮಾರ್ಚ್‌ನಲ್ಲಿ ಡಾ। ಹೆಗ್ಗಡೆ ದಂಪತಿ ಶಿಲಾನ್ಯಾಸ ನೆರವೇರಿಸಿದರು. ಭವ್ಯ ಕಟ್ಟಡ ನಿರ್ಮಾಣದ ಬಳಿಕ 2025ರ ಮಾ 20ರಂದು ಹೊಸ ಕಟ್ಟಡದಲ್ಲಿ ಸಿರಿ ಉತ್ಪನ್ನಗಳ ಉತ್ಪಾದನಾ ಕಾರ್ಯ ಚಟುವಟಿಕೆಗಳನ್ನು ಆರಂಭಿಸಲಾಗಿದೆ.
ಸಿಬ್ಬಂದಿಗೆ ಉಚಿತ ಬಸ್ ವ್ಯವಸ್ಥೆ, ಹಾಸ್ಟೆಲ್ ವ್ಯವಸ್ಥೆ, ಸುಸಜ್ಜಿತ ಶಿಶುವಿಹಾರ, ಮಧ್ಯಾಹ್ನದ ಊಟಕ್ಕೆ ಭೋಜನ ಶಾಲೆ, ಹಾಸ್ಟೆಲ್‌ನಲ್ಲಿ ವಾಸ್ತವ್ಯವಿರುವ ಸಿಬ್ಬಂದಿಗೂ ರಿಯಾಯಿತಿ ದರದಲ್ಲಿ ಪೌಷ್ಟಿಕಾಂಶಯುಕ್ತ ಊಟ-ಉಪಾಹಾರದ ವ್ಯವಸ್ಥೆ ಒದಗಿಸಲಾಗಿದೆ. ಸಿರಿ ಸಂಸ್ಥೆಯ ಮುಖ್ಯ ಪ್ರವೇಶದ್ವಾರದ ಬಳಿಯಲ್ಲಿ ಸಿರಿ ಉತ್ಪನ್ನಗಳ ಮಾರಾಟ ಮಳಿಗೆ ಮತ್ತು ‘ಸಿರಿ ಕೆಫೆ’ಯನ್ನು ತೆರೆಯಲಾಗಿದ್ದು, ಗ್ರಾಹಕರು ಸೇರಿದಂತೆ ಸಂಸ್ಥೆಯ ಸಿಬ್ಬಂದಿ/ಘಟಕಗಳ ಸದಸ್ಯರಿಗೆ ತುಂಬಾ ಅನುಕೂಲವಾಗಿದೆ.
ಇಲ್ಲಿನ ಸಿರಿ ಸಂಸ್ಥೆಯ ನೂತನ ಕೇಂದ್ರ ಕಚೇರಿ ಆವರಣದಲ್ಲಿರುವ ‘ಶ್ರೀ ಸನ್ನಿಧಿ’ ಬ್ಲಾಕ್‌ನ ಒಂದನೇ ಮಹಡಿಯಲ್ಲಿ ವಿವಿಧ ಬಗೆಯ ಉಪ್ಪಿನಕಾಯಿಗಳ ಉತ್ಪಾದನಾ ಘಟಕ ಕಾರ್ಯಾಚರಿಸುತ್ತಿದ್ದು, ಆಧುನಿಕ ಯಂತ್ರಗಳನ್ನು ಅಳವಡಿಸಲಾಗಿದೆ. ಹುಣಸೆಹುಳಿ, ನಿಂಬೆಹಣ್ಣು, ಮಾವಿನಕಾಯಿ, ಮಿಕ್ಸೆಡ್ ತರಕಾರಿಗಳ ಉಪ್ಪಿನಕಾಯಿ ಇತ್ಯಾದಿಗಳನ್ನು ವಾಟರ್‌ಬೇಸ್ ಮತ್ತು ಆಯಿಲ್‌ಬೇಸ್‌ನಲ್ಲಿ ತಯಾರಿಸಿ ಮಾರುಕಟ್ಟೆಗೆ ಪೂರೈಸಲಾಗುತ್ತದೆ.
ಸಿರಿ ಸಂಸ್ಥೆಯ ಶಿವಾನಿ ಬ್ಲಾಕ್‌ನ ನೆಲಮಹಡಿಯಲ್ಲಿ ಅತ್ಯಾಧುನಿಕ ಮೆಷಿನರಿಗಳನ್ನು ಹೊಂದಿರುವ ಸಿರಿ ಪುಷ್ಟಿ ಉತ್ಪಾದನಾ ಘಟಕ, ಮೆಣಸಿನಹುಡಿ, ಪುಳಿಯೋಗರೆಪುಡಿ, ಸಾಂಬಾರ್‌ಪುಡಿ, ಗರಂಮಸಾಲ, ರಸಂಪುಡಿ, ಪಲಾವ್ ಮಸಾಲೆ, ಬಿಸಿಬೇಳೆಬಾತ್ ಮೊದಲಾದ ಮಸಾಲಪುಡಿಗಳ ತಯಾರಿಕಾ ಘಟಕ ಹಾಗೂ ಆಲೂಗಡ್ಡೆ, ಬಾಳೆಕಾಯಿ, ಮರಗೆಣಸು ಚಿಪ್ಸ್, ಚಕ್ಕುಲಿ, ಮುರುಕು, ಕೋಡುಬಳೆ ಇತ್ಯಾದಿ ಕರಿದ ತಿಂಡಿಗಳ ತಯಾರಿಕಾ ಘಟಕಗಳು ಕಾರ್ಯಾಚರಿಸುತ್ತಿವೆ.
ಪ್ರಯೋಗಾಲಯ:
ಸಂಸ್ಥೆಯ ವೈಷ್ಣವಿ ಬ್ಲಾಕ್‌ನ ನೆಲಮಹಡಿಯಲ್ಲಿ ಶುಚಿಕಾರಕ ಉತ್ಪನ್ನಗಳ ಉತ್ಪಾದನಾ ಘಟಕವು ಕಾರ್ಯಾಚರಿಸುತ್ತಿದೆ. ಉತ್ತಮ ಗುಣಮಟ್ಟ ಹೊಂದಿರುವ ವಿವಿಧ ಸುವಾಸನೆಯ ಫಿನಾಯಿಲ್‌ಗಳು, ಟಾಯ್ಲೆಟ್ ಕ್ಲೀನರ್, ಲಿಕ್ವಿಡ್ ಸೋಪ್‌ಗಳಾದ ಹ್ಯಾಂಡ್‌ವಾಶ್, ಫ್ಲೋರ್‌ವಾಶ್, ವೆಹಿಕಲ್‌ವಾಶ್ ಮತ್ತು ಡಿಶ್‌ವಾಶ್‌ಗಳು, ಬೀಚಿಂಗ್ ಪೌಡರ್, ಡಿಶ್‌ವಾಶ್ ಪೌಡರ್, ಡಿಟರ್ಜೆಂಟ್ ಸೋಪ್, ಡಿಟರ್ಜೆಂಟ್ ಪೌಡರ್‌ಗಳನ್ನು ತಯಾರಿಸಿ, ಮಾರುಕಟ್ಟೆಗೆ ಪೂರೈಸಲಾಗುತ್ತಿದೆ.
ಸಿದ್ಧ ಉಡುಪು:
ಕೇಂದ್ರ ಕಚೇರಿಯ ಆವರಣದಲ್ಲಿರುವ ಶ್ರೀ ಸನ್ನಿಧಿ ಬ್ಲಾಕ್‌ನಲ್ಲಿ ಸಿರಿ ಸಂಸ್ಥೆಯ ಸಿದ್ಧ ಉಡುಪು ಉತ್ಪಾದನಾ ಘಟಕ ಕಾರ್ಯಾಚರಿಸುತ್ತಿದೆ. ಪುರುಷರಿಗಾಗಿ ಅಡಿಸ್ಟೆಡ್ ಪ್ರೀಮಿಯಂ ಶರ್ಟ್‌ಗಳು, ಸ್ವದೇಶಿ ಪ್ರೀಮಿಯಂ ಶರ್ಟ್‌ಗಳು, ಖಾದಿ ಶರ್ಟ್, ಅಡಿಸ್ಟೆಡ್ ಪ್ಯಾಂಟ್ ಇತ್ಯಾದಿ ಉತ್ತಮ ಗುಣಮಟ್ಟವನ್ನು ಹೊಂದಿರುವ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಮಹಿಳೆಯರಿಗಾಗಿ ಕುರ್ತಿಗಳು, ಟಾಪ್ಸ್, ನೈಟಿ, ಸೀರೆ, ಸ್ಕರ್ಟ್ ಮೊದಲಾದ ನವನವೀನ ಮಾದರಿಯ ಸಿದ್ಧ ಉಡುಪುಗಳನ್ನು ಉತ್ಪಾದಿಸಲಾಗುತ್ತಿದೆ. ಶ್ರೀ ಸನ್ನಿಧಿ ಬ್ಲಾಕ್‌ನಲ್ಲಿ ರೆಕ್ಸಿನ್ ಉತ್ಪನ್ನಗಳ ಉತ್ಪಾದನಾ ಘಟಕವು ಕಾರ್ಯಾಚರಿಸುತ್ತಿದೆ.ಇಂದ್ರಾಣಿ ಬ್ಲಾಕ್‌ನಲ್ಲಿ ತೀರ್ಥಬಾಟಲಿ ಉತ್ಪಾದನಾ ಘಟಕವಿದ್ದು, ಧರ್ಮಸ್ಥಳ ಸಹಿತ ವಿವಿಧ ದೇವಾಲಯಗಳಿಗೆ ಸರಬರಾಜು ಮಾಡಲಾಗುತ್ತಿದೆ. ಕಟ್ಟಡಗಳ ಚಾವಣಿಗಳಲ್ಲಿ ಸೌರಶಕ್ತಿ ಫಲಕ, ಸಂಸ್ಥೆಯಲ್ಲಿ ಅಳವಡಿಸಲಾದ ಸೌರ ಬೀದಿದೀಪಗಳು ಬೆಳಗಿನವರೆಗೆ ಸಂಪೂರ್ಣ ಪರಿಸರವನ್ನು ಪ್ರಕಾಶಮಾನಗೊಳಿಸುತ್ತಿವೆ.
ಧಾರವಾಡ ಜಿಲ್ಲೆಯ ರಾಯಪುರದಲ್ಲಿ ಸಿರಿ ಸಂಸ್ಥೆಯು ಸುಸಜ್ಜಿತವಾದ ಸಿರಿಧಾನ್ಯ ಸಂಸ್ಕರಣಾ ಘಟಕ ಆರಂಭಿಸಿದ್ದು, ಇಲ್ಲಿ ಸಾವೆ, ಕೊರಲೆ, ನವಣೆ, ರಾಗಿ, ಜೋಳ, ಊದಲು, ಸಜ್ಜೆ, ಹಾರಕ, ಬರಗು ಇತ್ಯಾದಿ ಸಿರಿಧಾನ್ಯಗಳನ್ನು ರಾಜ್ಯಾದ್ಯಂತ ಗ್ರಾಹಕರಿಗೆ 1/2 ಕೆ.ಜಿ, 1 ಕೆ.ಜಿ ಹಾಗೂ ಬಲ್ಕ್ ಪ್ಯಾಕೆಟ್‌ಗಳಲ್ಲಿ ಪೂರೈಸಲಾಗುತ್ತದೆ.ಸಿರಿ ಮಿಲೆಟ್ ಕೆಫೆ, ಧಾರವಾಡ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನಾ ಘಟಕದಲ್ಲಿ ವಿವಿಧ ಉತ್ಪನ್ನಗಳನ್ನು ಉತ್ಪಾದಿಸಿ, ಗ್ರಾಹಕರಿಗೆ ಒದಗಿಸಲಾಗುತ್ತಿದೆ. ವಿವಿಧ ಬಗೆಯ ಆರೋಗ್ಯಕರ ಪಾನೀಯಗಳನ್ನು ತಯಾರಿಸಿ ಗ್ರಾಹಕರಿಗೆ ಕೊಡಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಥಮವಾಗಿ ಆರಂಭಿಸಲಾದ ಏಕೈಕ ಸಿರಿಧಾನ್ಯದ ಉಪಾಹಾರಗೃಹದಲ್ಲಿ ಶುಚಿ-ರುಚಿಯಾದ ಆರೋಗ್ಯಕರ ಸಿರಿಧಾನ್ಯಗಳ ಭೋಜನ ಮತ್ತು ಖಾದ್ಯಗಳನ್ನು ತಯಾರಿಸಿ ಗ್ರಾಹಕರಿಗೆ ಉಣಬಡಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಧರ್ಮಸ್ಥಳದಲ್ಲಿ ಮತ್ತು ಮಂಗಳೂರು, ಧಾರವಾಡ, ಹಾಸನ ಹಾಗೂ ಬೆಂಗಳೂರಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಗಳ ವಠಾರದಲ್ಲಿ ಕಾರ್ಯಾಚರಿಸುತ್ತಿರುವ ಸಿರಿ ಮಳಿಗೆಗಳು ಸೇರಿದಂತೆ ಸಿರಿ ಸಂಸ್ಥೆಯು ತನ್ನದೇ ಆದ 14 ಮಳಿಗೆಗಳನ್ನು ಹೊಂದಿದೆ.ರಾಜ್ಯಾದ್ಯಂತ ಸಿರಿಯ 10 ಲೈನ್ ಸೇಲ್ ವಾಹನಗಳು ಹಾಗೂ 5 ಶಾಪ್ ಆನ್‌ವ್ಹೀಲ್ಸ್ ವಾಹನಗಳ ಮುಖಾಂತರ ರಾಜ್ಯದೆಲ್ಲೆಡೆ ಇರುವ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಸಿರಿ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ.
ಆನ್‌ಲೈನ್ ಶಾಪಿಂಗ್:ಸಿರಿ ಉತ್ಪನ್ನಗಳನ್ನು ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಸ್ತುತ ಸಿರಿ ಸಂಸ್ಥೆಯ ನೂತನ ವೆಬ್‌ಸೈಟ್ ಮತ್ತು ಆನ್‌ಲೈನ್ ವ್ಯಾಪಾರದ ಪ್ಲಾಟ್‌ಫಾರ್ಮ್ ಅನುಷ್ಠಾನಗೊಳಿಸಲಾಗಿದೆ. ಸಿರಿ https://www.siridharmasthala.com/ಮುಖಾಂತರ ಸಿರಿ ಉತ್ಪನ್ನಗಳನ್ನು ಖರೀದಿಸಬಹುದು. ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಅಮೆಜಾನ್, ಪ್ಲಿಪ್‌ಕಾರ್ಟ್, ಬ್ಲಿಂಕಿಟ್ ಮತ್ತು ಬಿಗ್ ಬಾಸ್ಕೆಟ್‌ಗಳಲ್ಲೂ ಸಿರಿ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಪ್ರಾರಂಭಿಸಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.ಕೋಟ್....
ರಾಜ್ಯದ ಜನತೆ ಆಕರ್ಷಕ ಬೆಲೆಯಲ್ಲಿ ದೊರೆಯುವ ನಮ್ಮ ಸಿರಿ ಸಂಸ್ಥೆಯ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸುವ ಮೂಲಕ ಹಿಂದುಳಿದ ಗ್ರಾಮೀಣ ಮಹಿಳೆಯರ ಸಬಲೀಕರಣದಲ್ಲಿ ನಮ್ಮೊಂದಿಗೆ ಕೈ ಜೋಡಿಸಲಿ. ಸಿರಿ ಸಂಸ್ಥೆಯ ಏಳಿಗೆಗಾಗಿ ಸಿರಿ ಹಿತೈಷಿಗಳ ಸಹಕಾರವನ್ನು ಕೋರುತ್ತೇವೆ.-ಕೆ.ಎನ್. ಜನಾರ್ದನ, ವ್ಯವಸ್ಥಾಪಕ ನಿರ್ದೇಶಕರು, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ.