ಕನ್ನಡಪ್ರಭ ವಾರ್ತೆ ಹಾಸನ
ನಗರದ ಜಿಲ್ಲಾ ಕ್ರೀಡಾಂಗಣ, ಯೂತ್ ಹಾಸ್ಟೆಲ್ ಬಳಿ ಇರುವ ಮೈದಾನದಲ್ಲಿ ಕರ್ನಾಟಕ ರಾಜ್ಯ ಹಾಗೂ ಜಿಲ್ಲಾ ಹ್ಯಾಂಡ್‌ಬಾಲ್ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದಲ್ಲಿ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ೧೯ನೇ ರಾಜ್ಯ ಮಟ್ಟದ ಹೊನಲು ಬೆಳಕಿನ ೨೦ ವರ್ಷ ವಯೋಮಿತಿಯ ಪುರುಷರು ಮತ್ತು ಮಹಿಳೆಯರ ಹ್ಯಾಂಡ್‌ಬಾಲ್ ಪಂದ್ಯಾವಳಿಗೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಚಾಲನೆ ನೀಡಿದರು.ನಂತರ ಕ್ರೀಡೆ ಉದ್ದೇಶಿಸಿ ಮಾತನಾಡಿದ ಶಾಸಕರು, ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಕಾರಿ, ಪ್ರತಿಯೊಬ್ಬರೂ ದಿನನಿತ್ಯ ಒಂದಲ್ಲ ಒಂದು ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸ್ಕೊಳ್ಳುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಮಹರಿಸಬೇಕು. ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು. ವಿವಿಧ ಜಿಲ್ಲೆಗಳಿಂದ ಬಂದಿರುವ ಕ್ರೀಡಾಪಟುಗಳಿಗೆ ಯಾವುದೇ ಮೂಲಭೂತ ಸೌಕರ್ಯಗಳ ಕೊರತೆ ಆಗದಂತೆ ಮುಜಾಗೃತ ಕ್ರಮ ವಹಿಸಲಾಗಿದೆ. ಯಾವುದೇ ಸಮಸ್ಯೆ ಇದ್ದರೆ ತನ್ನ ಗಮನಕ್ಕೆ ತಂದಲ್ಲಿ ಅವುಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಅವರು ಇದೆ ವೇಳೆ ಕ್ರೀಡಾಪಟುಗಳಿಗೆ ಶುಭ ಕೋರಿದರು. ಹಾಸನ ಜಿಲ್ಲೆಯ ಹ್ಯಾಂಡ್ ಬಾಲ್ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹ್ಯಾಂಡ್ ಬಾಲ್ ಕ್ರೀಡಾಕೂಟಕ್ಕೆ ವಿಶೇಷ ಕ್ರೀಡಾಂಗಣ ನಿರ್ಮಾಣಕ್ಕೆ ಅತೀ ಶೀಘ್ರವಾಗಿ ಕ್ರಮ ವಹಿಸಲಾಗುವುದು, ಈ ಮೂಲಕ ರಾಷ್ಟ್ರ ಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟ ನಡೆಸಲು ವೇದಿಕೆ ಸೃಷ್ಟಿಸಲಾಗುವುದು ಎಂದರು.
ಇದೇ ವೇಳೆ ನಗರಸಭೆ ಅಧ್ಯಕ್ಷ ಎಂ. ಚಂದ್ರಗೌಡ ಮಾತನಾಡಿ, ಹಾಸನದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಹ್ಯಾಂಡ್ ಬಾಲ್ ಕ್ರೀಡಾಕೂಟ ನಡೆಸುತ್ತಿರುವುದು ನಮಗೆ ಹೆಮ್ಮೆಯ ವಿಷಯ. ೧೯ನೇ ಶತಮಾನದಲ್ಲಿ ಬ್ರಿಟಿಷ್ ವೇಳೆ ಪ್ರಾರಂಭವಾದ ಕ್ರೀಡೆ ಇದೊಂದು ಅಪುರೂಪದ ಕ್ರೀಡೆಯಾಗಿದೆ. ನಂತರದಲ್ಲಿ ಭಾರತಕ್ಕೂ ಕಾಲಿಟ್ಟಿದೆ ಎಂದರು. ೧೯೪೦ ರಿಂದ ಹೆಚ್ಚು ಪ್ರಚಲಿತವಾಗಿದ್ದು, ದೈಹಿಕ ಸಾಮಾರ್ಥ್ಯ ಹೆಚ್ಚಿಸುವ ಕ್ರೀಡೆಯಾಗಿದೆ. ಎಲ್ಲಾರು ಉತ್ತಮ ಪ್ರದರ್ಶನ ನೀಡಿ ಈ ಕ್ರೀಡೆಯನ್ನು ಉನ್ನತ ಮಟ್ಟಕ್ಕೆ ತಂದೆ ಸಾಧನೆ ಮಾಡುವಂತೆ ಕರೆ ನೀಡಿದರು.ಕಾರ್ಯಕ್ರಮಕ್ಕೂ ಮೊದಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇದೇ ವೇಳೆ ನಗರಸಭೆ ಸದಸ್ಯ ಎಚ್.ಕೆ. ಯೋಗೇಂದ್ರ ಬಾಬು, ಯುವಜನ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ. ಹರೀಶ್, ರಾಜ್ಯ ಹ್ಯಾಂಡ್‌ಬಾಲ್ ಸಂಸ್ಥೆ ಅಧ್ಯಕ್ಷ ಡಾ. ಮನೋಜ್ ಪಿ. ಸಾಹುಕಾರ, ಸಂಸ್ಥೆ ಕಾರ್ಯದರ್ಶಿ ಬಿ.ಎಲ್. ಲೋಕೇಶ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ್, ಜಿಲ್ಲಾ ಹ್ಯಾಂಡ್‌ಬಾಲ್ ಸಂಸ್ಥೆ ಸಲಹೆಗಾರರಾದ ಜೆ.ಐ. ನಿರಂಜನ್ ರಾಜ್, ಕಾರ್ಯದರ್ಶಿ ಸಿಎನ್. ವಿಶ್ವನಾಥ್, ಖಜಾಂಚಿ ಪ್ರಕಾಶ್ ಎಲ್. ನರಘಟ್ಟಿ, ಸಂಸ್ಥೆ ಅಧ್ಯಕ್ಷ ಕುಮಾರಸ್ವಾಮಿ ರಾಜು, ಸಂಘಟನಾ ಕಾರ್ಯದರ್ಶಿ ಎ.ಎನ್. ಅನೀಲ್ ಕುಮಾರ್, ರಾಘವೇಂದ್ರ, ವಿಜಯಕುಮಾರ್, ಇತರರು ಉಪಸ್ಥಿತರಿದ್ದರು.