ಕನ್ನಡ ಕಡ್ಡಾಯಕ್ಕೆ ರಾಜ್ಯಾದ್ಯಂತ ಮತ್ತೆ ಹೋರಾಟ

KannadaprabhaNewsNetwork |  
Published : Feb 24, 2024, 02:32 AM ISTUpdated : Feb 24, 2024, 01:23 PM IST
Karave

ಸಾರಾಂಶ

ಬೆಳಗಾವಿ ಗಡಿ ವಿಚಾರ ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಗಡಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದೆ. ಆದರೆ, ಕರ್ನಾಟಕ ಸರ್ಕಾರ ಉದಾಸೀನ ನೀತಿ ಅನುಸರಿಸುತ್ತಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕನ್ನಡ ನಾಮಫಲಕ ಕಡ್ಡಾಯಗೊಳಿಸುವಂತೆ ಆಗ್ರಹಿಸಿ ಮತ್ತೊಮ್ಮೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಬೆಂಗಳೂರಿನಂತೆಯೇ ಬೆಳಗಾವಿಯಲ್ಲಿಯೂ ಕನ್ನಡೀಕರಣವಾಗಬೇಕು. ಅದಕ್ಕೆ ನಮ್ಮ ಹೋರಾಟ ಗಟ್ಟಿಯಾಗಿರುತ್ತದೆ. 

ಇದಕ್ಕೆ ಎಂಇಎಸ್‌ ವಿರೋಧಿಸಿದೆ, ಬೆಂಗಳೂರು ಮಾದರಿಯಲ್ಲಿ ಹೋರಾಟ ಮಾಡುತ್ತೇವೆ. ಕನ್ನಡ ನಾಮಫಲಕಕ್ಕೆ ಎಂಇಎಸ್‌, ಶಿವಸೇನೆ ವಿರೋಧಿಸಿದರೆ ನಾವು ಜಗ್ಗಲ್ಲ. ನಾಡದ್ರೋಹಿ ಎಂಇಎಸ್‌ ಸರ್ವನಾಶವಾಗಬೇಕು ಎಂದು ಆಗ್ರಹಿಸಿದರು.

ನನಗೆ ಬೆಳಗಾವಿ ಜಿಲ್ಲೆ ಅಚ್ಚುಮೆಚ್ಚು. ಇಲ್ಲಿ ಕರವೇ ಗಟ್ಟಿಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ನಾಡು ನುಡಿ ವಿಚಾರದಲ್ಲಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದೆ. 

ಕನ್ನಡ ಕಟ್ಟುವ, ಕಾಯುವ ಕೆಲಸ ಮಾಡುತ್ತಿದೆ. ಫೆ.24 ರಂದು ಬೆಳಗಾವಿಯಲ್ಲಿ ಕರವೇ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಅಧ್ಯಕ್ಷರು ಪಾಲ್ಗೊಳ್ಳುವರು. ಮುಂದಿನ ಹೋರಾಟದ ರೂಪರೇಷೆಗಳನ್ನು ತೀರ್ಮಾನಿಸಲಾಗುವುದು ಎಂದರು.

ಕನ್ನಡ ಕಡ್ಡಾಯಗೊಳಿಸುವಂತೆ ಆಗ್ರಹಿಸಿ ಕಳೆದ ಡಿಸೆಂಬರ್‌ 27 ರಂದು ಬೆಂಗಳೂರಿನಲ್ಲಿ ಕರವೇಯಿಂದ ದೊಡ್ಡ ಹೋರಾಟ ನಡೆಯಿತು. ನಮ್ಮ ಹೋರಾಟಕ್ಕೆ ವಿಶ್ವದ ಎಲ್ಲ ಕನ್ನಡಿಗರು ಬೆಂಬಲ ನೀಡಿದರು. 

ಈ ಹೋರಾಟ ಬೆಂಗಳೂರಿಗೆ ಸೀಮಿತವಾಗಿರದೇ ಎಲ್ಲ ಕಡೆಯೂ ಆಗಬೇಕು. ಕನ್ನಡ ಬಳಸದೇ ಬೆಂಗಳೂರಿನಲ್ಲಿ ಅನ್ಯಭಾಷಿಕ ಉದ್ಯಮಿಗಳು ದುರಹಂಕಾರದಿಂದ ವರ್ತಿಸುತ್ತಿದ್ದರು. 

ಇಂಥ ಉದ್ಯಮಿಗಳ ವಿರುದ್ಧ ಬೀದಿಗಿಳಿದು ಕನ್ನಡ ಅನುಷ್ಠಾನಕ್ಕೆ ನಾವು ಹೋರಾಟ ಮಾಡಿದ್ದೇವೆ. ಈ ಸಂಬಂಧ ನಾವು ರಾಜ್ಯ ಸರ್ಕಾರಕ್ಕೆ ಫೆ.28ರವರೆಗೆ ಗಡುವು ನೀಡಲಾಗಿದೆ ಎಂದರು.

ಸರ್ಕಾರ ಸುಗ್ರಿವಾಜ್ಞೆ ಮೂಲಕ ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯದ ತೀರ್ಮಾನ ಮಾಡಿತು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಎಲ್ಲ ಉದ್ಯಮಿಗಳಿಗೆ ನೋಟಿಸ್ ನೀಡಿದೆ. 

ನಮ್ಮ ಹೋರಾಟದ ಫಲವಾಗಿ ಬೆಂಗಳೂರಿನ ವಾತಾವರಣ ಬದಲಾಗಿದೆ. ಬೆಂಗಳೂರಂತೆ ಗಡಿ ನಾಡು ಬೆಳಗಾವಿ ಕೂಡ ಸಂಪೂರ್ಣ ಕನ್ನಡ ಮಯವಾಗಬೇಕು ಎಂದು ಆಶಿಸಿದರು.

ಬೆಂಗಳೂರಲ್ಲಿ ನಡೆದ ಈ ಹೋರಾಟದಲ್ಲಿ ನಾವು 15 ದಿನ ಜೈಲುವಾಸ ಅನುಭವಿಸಬೇಕಾಯಿತು. ಭಾಷಾ ಅಲ್ಪಸಂಖ್ಯಾತರ ಓಲೈಕೆಗಾಗಿ ನಮ್ಮ ಹೋರಾಟ ಹತ್ತಿಕ್ಕಿ ಈ ಸರ್ಕಾರ ನಮ್ಮನ್ನು ಬಂಧಿಸಿತು. 

ನಾಡು-ನುಡಿ ಬಗ್ಗೆ ಮಾತನಾಡುತ್ತಿದ್ದ ಇವರು ಅಧಿಕಾರಕ್ಕೆ ಬಂದ ಬಳಿಕ ಬಂಡವಾಳ ಶಾಹಿಗಳ ಒತ್ತಡಕ್ಕೆ ಮಣಿಯಿತು. ಕನ್ನಡ ನಾಡಿನ ಹೋರಾಟದ ವಿಚಾರವಾಗಿ ನಾನು 6 ಸಲ ಜೈಲಿಗೆ ಹೋಗಿದ್ದೇನೆ. 

ಇದನ್ನೇ ವಿಷಯ ಮಾಡಿಕೊಂಡ ಸಿದ್ದರಾಮಯ್ಯ ಸರ್ಕಾರ ನನ್ನ ವಿರುದ್ಧ ಸಂಚು ಮಾಡಿ ಜೈಲಿಗೆ ಕಳಿಸಿತು. ಇಲ್ಲಸಲ್ಲದ ಕೇಸ್‌ ಹಾಕಿ ನನಗೆ ಹಿಂಸೆ ಕೊಟ್ಟರು ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡದ ವಿಚಾರವಾಗಿ ನನ್ನ ಧ್ವನಿ ಅಡಗಿಸಲು ಇಂಥ ಸರ್ಕಾರದಿಂದ ಸಾಧ್ಯವಿಲ್ಲ. ಜೀವ ಇರುವವರೆಗೆ ಕನ್ನಡ ಪರ ನನ್ನ ಹೋರಾಟ ಇರುತ್ತದೆ. ಕನ್ನಡ ವಿಚಾರದಲ್ಲಿ ಯಾರೊಂದಿಗೂ ರಾಜೀಯಾಗುವ ಪ್ರಶ್ನೆಯೇ ಇಲ್ಲ. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡನಗಟ್ಟಿ, ಮಹಾದೇವ ತಳವಾರ,ಸುರೇಶ ಗವನ್ನವರ ಮತ್ತಿತರು ಇದ್ದರು.

ಬೆಳಗಾವಿ ಗಡಿ ವಿಚಾರ ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಗಡಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದೆ. ಆದರೆ, ಕರ್ನಾಟಕ ಸರ್ಕಾರ ಉದಾಸೀನ ನೀತಿ ಅನುಸರಿಸುತ್ತಿದೆ. 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಯಾರು, ಅವರು ಏನು ಮಾಡುತ್ತಿದ್ದಾರೆ ಎಂಬುದೇ ನಮಗೆ ಗೊತ್ತಿಲ್ಲ. ಯಾರೇ ಏನೇ ಅಂದರೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. 

ಯಾರೇ ಸುಪ್ರೀಂ ಕೋರ್ಟ್‌ಗೆ ಹೋದರೂ, ಮೈ ಪರೆಚಿಕೊಂಡರೂ ಬೆಳಗಾವಿ ಕನ್ನಡಮಯವಾಗಬೇಕು. - ಟಿ.ಎ. ನಾರಾಯಣಗೌಡ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ