ದಲಿತರ ಮೀಸಲು ಹಣ ದುರುಪಯೋಗ ಖಂಡಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Feb 24, 2024, 02:32 AM IST
23ಕೆಎಂಎನ್ ಡಿ14ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲು ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲು ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಕಾರ್ಯಕರ್ತರು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಜೈ ಶ್ರೀ ರಾಮ್, ಜೈ ಭೀಮ್ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪರ ಘೋಷಣೆ ಕೂಗಿದರು.ಕಾಂಗ್ರೆಸ್ ಸರ್ಕಾರ ಸೇರಿದಂತೆ ಸಿಎಂ, ಡಿಸಿಎಂ ಹಾಗೂ ಸಚಿವರಾದ ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಪ್ರಿಯಾಂಕ ಖರ್ಗೆ ದಲಿತ ವಿರೋಧಿಯಾಗಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ್ದ ಎಸ್‌ಸಿ ಎಸ್‌ಪಿ/ಟಿಎಸ್‌ಪಿ ಅನುದಾನದಲ್ಲಿ 11,114 ಕೋಟಿ ಹಣವನ್ನು 5 ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿರುವುದಾಗಿ ಕಾಂಗ್ರೆಸ್ ಸರ್ಕಾರ ಲಿಖಿತ ರೂಪದಲ್ಲಿ ನೀಡಿದೆ. ಅದೇ ರೀತಿ ಸಚಿವರು ಗ್ಯಾರಂಟಿ ಯೋಜನೆಯಲ್ಲೇ ಪರಿಶಿಷ್ಟರಿಗೆ ಮೀಸಲಿರಿಸಿದ್ದ ಹಣವನ್ನು ಪರಿಶಿಷ್ಟರಿಗೆ ನೀಡುವ ಮಾತು ಆಡಿದ್ದಾರೆ ಎಂದು ಆರೋಪಿಸಿದರು.

ಮತ್ತೊಂದೆಡೆ ಗ್ಯಾರಂಟಿ ಫಲಾನುಭವಿಗಳಲ್ಲಿ ಪರಿಶಿಷ್ಟರನ್ನು ಗುರುತಿಸುವ ಕೆಲಸ ಮಾಡಿಲ್ಲ ಎಂಬ ಹೇಳಿಕೆ ಸರ್ಕಾರದಿಂದ ಹೊರ ಬಿದ್ದಿದೆ. ಇಂತಹ ನಡೆ ಸಂವಿಧಾನ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಮುದಾಯದ ಕಲ್ಯಾಣಕ್ಕೆ ಮೀಸಲಿಟ್ಟು ಹಣವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿರುವುದು ಎಸ್ಸಿ ಕಾಯ್ದೆ ಉಲ್ಲಂಘನೆಯಾಗಿದೆ. ಪರಿಶಿಷ್ಟ ಸಮುದಾಯಕ್ಕೆ ಬಲಗೈಯಲ್ಲಿ ಕೊಟ್ಟು ಎಡಗೈಯಲ್ಲಿ ಕಿತ್ತುಕೊಂಡಿರುವ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಎಂದು ದೂರಿದರು.

ಕೂಡಲೇ ಗ್ಯಾರಂಟಿ ಯೋಜನೆಗೆ ವರ್ಗಾವಣೆ ಮಾಡಿರುವ ಹಣವನ್ನು ವಾಪಸ್ ಪಡೆದು ಪರಿಶಿಷ್ಟ ಕಲ್ಯಾಣ ಕಾರ್ಯಕ್ರಮಗಳಾದ ಗಂಗಾ ಕಲ್ಯಾಣ ಮತ್ತು ವಸತಿ ಶಾಲೆಗಳ ಭೂಮಿ ಖರೀದಿ ಮಾಡಲು ಬಳಸಬೇಕು. ದಲಿತರಿಗೆ ಮಾಡಿರುವ ದ್ರೋಹವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.ವಿಧಾನಸಭೆ ಮೀಸಲು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಶಾಸಕರಾಗಿರುವವರೂ ಮುಖ್ಯಮಂತ್ರಿಗಳ ಪರಿಶಿಷ್ಟ ವಿರೋಧಿ ನಡೆಯನ್ನು ಖಂಡಿಸದಿರುವುದು ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ನಡೆಗೆ ಸಾಕ್ಷಿಯಾಗಿದೆ. ರಾಜ್ಯಪಾಲರು ಮಧ್ಯ ಪ್ರವೇಶಿಸಿ ಪರಿಶಿಷ್ಟ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಎನ್.ಎಸ್.ಇಂದ್ರೇಶ್, ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ನಿತ್ಯಾನಂದ, ಮುಖಂಡರಾದ ಮುನಿರಾಜು, ಮಧು ಗಂಗಾಧರ್‌, ಬಸವರಾಜು, ಮಲ್ಲಿಕಾರ್ಜುನ, ಬಾಲು, ಚಿಕ್ಕಣ್ಣ, ಕಾಂತರಾಜು, ರಂಜಿತಾ, ಎಚ್‌.ಆರ್‌.ಅಶೋಕ್‌ ಕುಮಾರ್, ಕೆಂಪಬೋರಯ್ಯ, ಆನಂದ, ಅಶೋಕ್ ಜಯರಾಮ್, ಲಕ್ಷ್ಮಿ ಅಶ್ವಿನ್‌ಗೌಡ, ಟಿ.ಶ್ರೀಧರ್, ಎಸ್.ಮಲ್ಲೇಶ್, ಸಿ.ಟಿ.ಮಂಜುನಾಥ್, ಹೊಸಹಳ್ಳಿ ಶಿವು, ಶಿವಲಿಂಗಯ್ಯ, ಸಿದ್ದರಾಜುಗೌಡ, ಉದಯಕುಮಾರ್, ಎನ್.ವಸಂತ್ ಕುಮಾರ್, ಲೋಕೇಶ್ ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ