ಗೃಹಲಕ್ಷ್ಮಿ- ಗೃಹಜ್ಯೋತಿ ನೋಂದಣಿಗೆ ದುಂಬಾಲು!

KannadaprabhaNewsNetwork |  
Published : Feb 24, 2024, 02:32 AM IST
3.ಗೃಹಲಕ | Kannada Prabha

ಸಾರಾಂಶ

ರಾಜ್ಯಸರ್ಕಾರದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಾಗಿ ನೋಂದಾಯಿಸಲು ಅಧಿಕಾರಿಗಳೇ ದುಂಬಾಲು ಬಿದ್ದಿದ್ದಾರೆಂದು ಭಾವಿಸಿ ಜನರು ಅಚ್ಚರಿ ಪಡುತ್ತಿದ್ದಾರೆ. ಆದರೆ ನೈಜವಾಗಿ ಕರೆ ಮಾಡುತ್ತಿರುವುದು ಕೈ ಕಾರ್ಯಕರ್ತರು.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ನಮಸ್ತೆ ಮೇಡಂ ನಿಮ್ಗೆ ಗೃಹಲಕ್ಷ್ಮಿ ಹಣ ಬರ್ತಿದಿಯಾ, ಇಲ್ಲಾಂದ್ರೆ ನಾವು ಹೇಳೊ ದಾಖಲಾತಿನ ತನ್ನಿ ಹಣ ಬರೊ ಹಾಗೆ ಮಾಡಿಕೊಡ್ತೇವೆ... ನಮಸ್ತೆ ಸರ್ ನೀವ್ಯಾಕೆ ಇನ್ನೂ ಗೃಹಜ್ಯೋತಿ ಯೋಜನೆಯಡಿ ನೋಂದಣಿ ಮಾಡ್ಸಿಕೊಂಡಿಲ್ಲ. ಈಗಲಾದ್ರು ನೋಂದಾಯಿಸಿಕೊಳ್ಳಿ....

ಹೀಗೆ ಜಿಲ್ಲೆಯಲ್ಲಿ ಈಗ ಗೃಹಲಕ್ಷ್ಮಿ ಹಾಗೂ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ನೋಂದಣಿಯಾಗದವರನ್ನು ಗುರುತಿಸಿ ಕರೆಗಳು ಬರುತ್ತಿದ್ದು, ಕೂಡಲೇ ನೋಂದಾಯಿಸಿಕೊಂಡು ಯೋಜನೆ ಲಾಭ ಪಡೆಯುವಂತೆ ಮನವಿ ಮಾಡಲಾಗುತ್ತಿದೆ.

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹೆಸರು ನೋಂದಾಯಿಸಿಕೊಂಡು ಮಾಸಿಕ 2 ಸಾವಿರ ರುಪಾಯಿ ಪಡೆದುಕೊಳ್ಳಿ. 200 ಯುನಿಟ್ ವರೆಗೂ ಉಚಿತ ವಿದ್ಯುತ್ ಪೂರೈಕೆ ಮಾಡುವ ಗೃಹ ಜ್ಯೋತಿ ಯೋಜನೆಯಲ್ಲಿ ಗ್ರಾಹಕರನ್ನು ನೋಂದಾಯಿಸಿಕೊಳ್ಳಲು ನಿತ್ಯವೂ ಕರೆಗಳು ಬರುತ್ತಿವೆ. ಈ ಎರಡೂ ಯೋಜನೆಗಳಲ್ಲಿ ನೋಂದಣಿಯಾಗದವರನ್ನು ಗುರುತಿಸಿ ಕರೆ ಮಾಡಿ ಮನವಿ ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ದೂರವಾಣಿ ಕರೆಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬೆಸ್ಕಾಂ ಕಚೇರಿಗಳಿಂದ ಹೋಗುತ್ತಿಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷ ನಿಯೋಜಿಸಿದವರಿಂದ ದೂರವಾಣಿ ಕರೆಗಳು ಬರುತ್ತಿವೆ ಎನ್ನಲಾಗುತ್ತಿದೆ.ಹಲೋ ಸರ್ ನೀವ್ಯಾಕೆ ಇನ್ನು ಗೃಹಜ್ಯೋತಿ ಸ್ಕೀಂನಡಿ ನೋಂದಣಿ ಮಾಡಿಕೊಂಡಿಲ್ಲ ಎಂದು ಪ್ರಶ್ನೆ ಮಾಡುತ್ತಾರೆ. ನಾವು ಸರ್ಕಾರಿ ನೌಕರಿಯಲ್ಲಿ ಇದ್ದೇವೆ. ಆದ್ದರಿಂದ ಉಚಿತ ಸ್ಕೀಂ ಬೇಡ ಎಂದರೂ ಸರ್ಕಾರದ ಯೋಜನೆ ಸದುಪಯೋಗ ಪಡಿಸಿಕೊಳ್ಳಿ. ಎಲ್ಲರಿಗೂ ನೀಡುವ ಯೋಜನೆ ಆಗಿರುವುದರಿಂದ ಈಗಲಾದರು ನೋಂದಾಯಿಸಿಕೊಳ್ಳಿ ಎಂದು ವಿನಂತಿ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಕಚೇರಿಗಳಿಗೆ ಸುತ್ತಾಡಿ ಸುಸ್ತಾದರೂ ಯೋಜನೆಯ ಲಾಭ ಸಿಗುವುದು, ಫಲಾನುಭವಿ ಯಾಗುವುದು ದುಸ್ತರವಾಗಿದೆ. ಆದರೆ, ರಾಜ್ಯಸರ್ಕಾರದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಾಗಿ ನೋಂದಾಯಿಸಲು ಅಧಿಕಾರಿಗಳೇ ದುಂಬಾಲು ಬಿದ್ದಿದ್ದಾರೆಂದು ಭಾವಿಸಿ ಜನರು ಅಚ್ಚರಿ ಪಡುತ್ತಿದ್ದಾರೆ.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಯಾರು ವಂಚಿತರಾಗಬಾರದೆಂದು ಮುತುವರ್ಜಿ ವಹಿಸಿದೆ. ಹೀಗಾಗಿ ಅಧಿಕಾರಿಗಳು ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಿಳೆಯರು ಹಾಗೂ ಗೃಹಜ್ಯೋತಿ ಯೋಜನೆಗಾಗಿ ಗ್ರಾಹಕರನ್ನು ಸಂಪರ್ಕಿಸಿ ಅವರನ್ನು ನೋಂದಣಿ ಮಾಡಿಸಿಕೊಳ್ಳುವಂತೆ ಕೋರಬೇಕು. ಜೊತೆಗೆ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದೆ. ಇಲ್ಲಿವರೆಗೂ ಅಧಿಕಾರಿಗಳು ಜನರನ್ನು ದೂರವಾಣಿಯಲ್ಲಿ ಸಂಪರ್ಕಿಸುವ ಕಾರ್ಯಕ್ಕೆ ಚಾಲನೆ ನೀಡಿಲ್ಲ. ಆ ಕೆಲಸವನ್ನು ಕಾಂಗ್ರೆಸ್‌ನಿಂದ ನಿಯೋಜ ನೆಗೊಂಡವರು ಪ್ರಾರಂಭಿಸಿ ಜನರಿಗೆ ದುಂಬಾಲು ಬಿದ್ದಿದ್ದಾರೆ.ಯಾರೊಬ್ಬರು ಸರ್ಕಾರ ಕೊಡುವ ಯೋಜನೆಗಳಿಂದ ವಂಚಿತರಾಗಬಾರದು. ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಯೋಜನೆಯ ಲಾಭ ದೊರೆ ಯುವಂತೆ ಆಗಬೇಕು. ಹೀಗಾಗಿಯೇ ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಘೋಷಣೆ ಮಾಡಲಾದ 5 ಯೋಜನೆಗಳನ್ನು ಸಂಪೂರ್ಣವಾಗಿ ಜಾರಿ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಪ್ರಯತ್ನ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಅಗತ್ಯ ಇಲ್ಲ ಎನ್ನುವವರಿಗೂ ದೂರವಾಣಿ ಕರೆ ಮಾಡಿ , ಲಾಭ ಪಡೆದುಕೊಳ್ಳುವಂತೆ ಮನವಿ ಮಾಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.

--------------------------------...ಕೋಟ್ ...ರಾಮನಗರ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಶೇ.80ರಿಂದ 82ರಷ್ಟು ಗ್ರಾಹಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ಬೆಸ್ಕಾಂ ಕಚೇರಿಯಿಂದ ಯಾವ ಗ್ರಾಹಕರಿಗೂ ನೋಂದಣಿ ಮಾಡಿಸಿಕೊಳ್ಳುವಂತೆ ದೂರವಾಣಿ ಕರೆ ಮಾಡುತ್ತಿಲ್ಲ.- ಶಿವಕುಮಾರ್ , ಇಇ, ಬೆಸ್ಕಾಂ, ರಾಮನಗರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು
ಪರಂ ಸಿಎಂ ಆಗಲಿ : 25ಕ್ಕೂ ಹೆಚ್ಚು ಮಠಾಧೀಶರ ಆಗ್ರಹ