ಮುಂಡರಗಿ: ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತಬೇಕಾಗಿದೆ ಎಂದು ವಿಶ್ರಾಂತ ನ್ಯಾಯಾಧೀಶ ಅರಳಿ ನಾಗರಾಜ ಹೇಳಿದರು.ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಅನ್ನದಾನೀಶ್ವರ ಮಹಾಶಿವಯೋಗಿಗಳವರ 154ನೇ ಯಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಜರುಗಿದ ಎರಡನೇ ದಿನದ ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಂಭ್ರಮ ಪ್ರಾರಂಭೋತ್ಸವ ಹಾಗೂ ಅನ್ನದಾನೀಶ್ವರ ವಿದ್ಯಾ ಸಮಿತಿ ಸಿಬ್ಬಂದಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಸಂಸ್ಕಾರದ ಶಿಕ್ಷಣದ ಅವಶ್ಯವಿದ್ದು, ಇಂದು ಅದರ ಕೊರತೆಯಾಗುತ್ತಿದೆ. ಆದ್ದರಿಂದ ಮುಂಡರಗಿ ಶ್ರೀಗಳು ತಮ್ಮ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕಾರದ ತರಬೇತಿಗಳನ್ನು ನಡೆಸುವ ಮೂಲಕ ಮಕ್ಕಳಿಗೆ ಸಂಸ್ಕಾರದ ಶಿಕ್ಷಣದ ಕುರಿತು ತಿಳಿಸಬೇಕು. ಇಂದು ನಮ್ಮ ಆಡಳಿತ ವ್ಯವಸ್ಥೆ ಹದಗೆಡಲು ಸಂಸ್ಕಾರದ ಕೊರತೆಯೇ ಕಾರಣವಾಗಿದೆ ಎಂದು ಹೇಳಿದರು.ಇಂದಿನ ಮಕ್ಕಳಿಗೆ ಸಂಸ್ಕಾರಯುತವಾದ ಶಿಕ್ಷಣದ ಅವಶ್ಯಕತೆ ಇದ್ದು, ಸಂಸ್ಕಾರದ ಸ್ಪರ್ಶವಿದ್ದಂತಹ ಶಿಕ್ಷಣವೇ ಗುಣಮಟ್ಟದ ಶಿಕ್ಷಣವಾಗಿದೆ. ಇಂದು ಕೇವಲ ಅಂಕಗಳನ್ನು ಬೆನ್ನು ಹತ್ತಿದರೆ ನಾವು ಅಂಕಗಳನ್ನು ಹೆಚ್ಚು ಪಡೆದುಕೊಳ್ಳಬಹುದು. ಆದರೆ ರಿಮಾರ್ಕ್ಸ್‌ಗಳು ಸರಿಯಾಗಿ ಬರುವುದಿಲ್ಲ. ಆದ್ದರಿಂದ ಮಾರ್ಕ್ಸ್‌ಗಳ ಜತೆಗೆ ರಿಮಾರ್ಕ್ಸ್‌ಗಳನ್ನು ಪಡೆದುಕೊಳ್ಳಬೇಕು. ಅಂತಹ ಶಿಕ್ಷಣವನ್ನು ಮಕ್ಕಳಿಗೆ ಕೊಡಬೇಕಾಗಿದೆ. ವಿದ್ಯೆ ವಿವಾದಕ್ಕೆ ದಾರಿ ಮಾಡಿಕೊಡುತ್ತಿದೆ. ಅದು ಹೇಗೆಂದರೆ ನಮ್ಮ ಜನ ಎಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕೋ ಅಲ್ಲಿ ಹೋರಾಟ ಮಾಡುತ್ತಿದ್ದಾರೆ, ಎಲ್ಲಿ ಹೋರಾಟ ಮಾಡಬೇಕೋ ಅಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಉದಾಹರಣೆ ಎಂದರೆ ನಮ್ಮನ್ನಾಳುವ ಜನಪ್ರತಿನಿಧಿಗಳು ಹೋರಾಟ ಮಾಡಬೇಕಾದಲ್ಲೆಲ್ಲ ಹೊಂದಾಣಿಕೆ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿರುತ್ತಾರೆ. ಯುವ ದಂಪತಿ ಹೊಂದಾಣಿಕೆ ಮಾಡಿಕೊಂಡು ಸಂಸಾರ ನಡೆಸುವ ಬದಲು ಹೋರಾಟ ಮಾಡುವ ಮೂಲಕ ತಮ್ಮ ಜೀವನದಲ್ಲಿ ವಿಚ್ಛೇದನ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಹೀಗಾಗಿ ವಿದ್ಯೆಯಿಂದ ವಿವಾದ ಉಂಟಾಗುತ್ತಿದೆ ಎಂದರು. ಜ.ಅ. ವಿದ್ಯಾ ಸಮಿತಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅನ್ನದಾನೀಶ್ವರ ಪ.ಪೂ. ಕಾಲೇಜಿನ ಕಟ್ಟಡಕ್ಕೆ ತಮ್ಮ ಕುಟುಂಬದ ಹಿರಿಯರ ನೆನಹಿನಲ್ಲಿ ₹1.25 ಲಕ್ಷ ದೇಣಿಗೆ ನೀಡುವುದಾಗಿ ಅರಳಿ ನಾಗರಾಜ ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಜ. ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ ಮಾತನಾಡಿ, ಮುಂಡರಗಿ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಪ.ಪೂ. ಕಾಲೇಜಿನ ಕಟ್ಟಡವನ್ನು ಕಟ್ಟಲು ನಿರ್ಧರಿಸಿದ್ದು, ಅದಕ್ಕೆ ಸುಮಾರು 3-4 ಕೋಟಿ ಖರ್ಚಾಗುತ್ತಿದ್ದು, ಹಳೆಯ. ವಿದ್ಯಾರ್ಥಿಗಳು, ಶ್ರೀಮಠದ ಭಕ್ತರು ಹೆಚ್ಚಿನ ರೀತಿಯಲ್ಲಿ ಸಹಾಯ ಸಹಕಾರ ನೀಡಬೇಕು ಎಂದರು.
ಶ್ರೀಮಠದ ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಹೂವಿನ ಶಿಗ್ಲಿಯ ಚೆನ್ನವೀರ ಸ್ವಾಮೀಜಿ, ಉತ್ತಂಗಿ ಸೋಮಶಂಕರ ಸ್ವಾಮೀಜಿ, ಕರಬಸಪ್ಪ ಹಂಚಿನಾಳ, ಎ.ಕೆ. ಬೆಲ್ಲದ, ವಿ.ಎಫ್. ಗುಡದಪ್ಪನವರ, ಆರ್.ಆರ್. ಹೆಗಡಾಳ, ನಾಗೇಶ ಹುಬ್ಬಳ್ಳಿ, ಎಂ.ಎಸ್. ಶಿವಶೆಟ್ಟರ, ಡಾ. ಡಿ.ಸಿ. ಮಠ, ಎಸ್. ಶಿವರಾಜಸ್ವಾಮಿ, ಕೆ. ಪರಂಜ್ಯೋತಿ, ವಿಜಯಾ ಪರಂಜ್ಯೋತಿ, ಆರ್.ಬಿ. ಡಂಬಳಮಠ, ಡಾ. ಪಿ.ಬಿ. ಹಿರೇಗೌಡ್ರ, ಡಿ.ಡಿ. ಮೋರನಾಳ, ರೇವಣಸಿದ್ದಯ್ಯ ಗಡ್ಡದೇವರಮಠ ಉಪಸ್ಥಿತರಿದ್ದರು. ಡಾ. ಸಂತೋಷ ಹಿರೇಮಠ ಹಾಗೂ ಎಸ್.ಎಸ್. ಇನಾಮತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.