ಶೀಘ್ರ ಕಾರವಾರಕ್ಕೆ ‘ಸೂಪರ್ ಸ್ಪೆಷಾಲಿಟಿ’ ಆಸ್ಪತ್ರೆ : ಸಿಎಂ

KannadaprabhaNewsNetwork |  
Published : Feb 23, 2026, 02:00 AM IST
Hospital

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಜನರ ದೀರ್ಘಕಾಲದ ಕನಸಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಂದಿನ ಬಜೆಟ್‌ನಲ್ಲಿ ಕಾರವಾರಕ್ಕೆ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

 ಕಾರವಾರ :  ಉತ್ತರ ಕನ್ನಡ ಜಿಲ್ಲೆಯ ಜನರ ದೀರ್ಘಕಾಲದ ಕನಸಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಂದಿನ ಬಜೆಟ್‌ನಲ್ಲಿ ಕಾರವಾರಕ್ಕೆ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಭಾನುವಾರ ಕಾರವಾರದಲ್ಲಿ ಸುಸಜ್ಜಿತ 450 ಹಾಸಿಗೆಗಳ ‘ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ’ಯ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಸ್ಥಳೀಯರ ಬಹುದೊಡ್ಡ ಬೇಡಿಕೆಯಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಂಬರುವ ಬಜೆಟ್‌ನಲ್ಲಿ ಕಾರವಾರಕ್ಕೆ ಘೋಷಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸುವ ಉದ್ದೇಶದಿಂದ 2016ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಲಾಗಿದ್ದು, ಇಂದು 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸುಮಾರು 200 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಮೊದಲು ಇಲ್ಲಿನ ಜನರು ಉನ್ನತ ಮಟ್ಟದ ಚಿಕಿತ್ಸೆಗಾಗಿ ಉಡುಪಿ, ಮಂಗಳೂರು, ಹುಬ್ಬಳ್ಳಿಗೆ ಹೋಗುತ್ತಿದ್ದರು. ಈಗ ಇಲ್ಲಿಯೇ ಆರೋಗ್ಯ ವ್ಯವಸ್ಥೆ ಕಲ್ಪಿಸಲಾಗುವುದು. ಇದೇ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಸುಸಜ್ಜಿತ ಕ್ಯಾನ್ಸರ್ ಚಿಕಿತ್ಸಾ ಘಟಕ ಕೂಡ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ ಎಂದರು.

ಬಡವರು ಮತ್ತು ಸಾಮಾನ್ಯ ಜನರು ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚವನ್ನು ಭರಿಸಲಾಗದೆ ಸರ್ಕಾರಿ ಆಸ್ಪತ್ರೆಗಳನ್ನೇ ನಂಬಿಕೊಂಡಿದ್ದಾರೆ. ಆದ್ದರಿಂದ ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಘಟಕ ಹಾಗೂ ಟ್ರಾಮಾ ಸೆಂಟರ್ ಸ್ಥಾಪಿಸುವುದು ಸರ್ಕಾರದ ಗುರಿಯಾಗಿದೆ ಎಂದು ತಿಳಿಸಿದರು.

22 ಸರ್ಕಾರಿ ಮೆಡಿಕಲ್ ಕಾಲೇಜು

ರಾಜ್ಯದಲ್ಲಿ 22 ಸರ್ಕಾರಿ ಮೆಡಿಕಲ್ ಕಾಲೇಜುಗಳಿದ್ದು, ಬಾಗಲಕೋಟೆ, ಕೋಲಾರ ಹಾಗೂ ಇನ್ನೂ ಐದಾರು ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಮಾಡುತ್ತೇವೆ ಎಂದರು.

ಇದಕ್ಕೂ ಮೊದಲು ಮಂಜಗುಣಿ-ಗಂಗಾವಳಿ ಸೇತುವೆ ಉದ್ಘಾಟಿಸಿ ಮಾತನಾಡಿ, ಬಹುಜನರ ಒತ್ತಾಸೆಯ ಬೇಡಿಕೆಯಾಗಿದ್ದ ಮಂಜಗುಣಿ-ಗಂಗಾವಳಿ ಸೇತುವೆ ಕಾಮಗಾರಿಗೆ ನಾನೇ 2017ರಲ್ಲಿ ಶಂಕುಸ್ಥಾಪನೆ ಮಾಡಿದ್ದೆ. ನಾನೇ ಶಂಕುಸ್ಥಾಪನೆ ಮಾಡಿದ್ದ ಸೇತುವೆ ನನ್ನ ಕೈಯಿಂದಲೇ ಉದ್ಘಾಟನೆಗೊಂಡಿರುವುದು ಅತೀವ ಸಂತಸ ತಂದಿದೆ. ಈ ಸೇತುವೆ ಹಿಂದೆಯೆ ಉದ್ಘಾಟನೆ ಆಗಬೇಕಿತ್ತು. ಆದರೆ, ಹಿಂದಿನ ಸರ್ಕಾರ ಈ ಸೇತುವೆಯ ಬಗ್ಗೆ ಆಸಕ್ತಿ ತೋರಲು ಹಿಂದೇಟು ಹಾಕಿದ ಪರಿಣಾಮವಾಗಿ ಸೇತುವೆ ಕಾಮಗಾರಿ ಮುಗಿಯಲು ವಿಳಂಬವಾಗಿದೆ ಎಂದರು. 

18 ಕಿ.ಮೀ. ದಾರಿ ಸುಗಮ

ಈ ಸೇತುವೆ ಆಗದೇ ಇದ್ದರೆ ಸುಮಾರು 18 ಕಿ.ಮೀ. ಸುತ್ತಿ ಬಳಸಿ ಗೋಕರ್ಣಕ್ಕೆ ಹೋಗಬೇಕಾಗಿತ್ತು. ಆದರೆ ಈಗ ಈ 18 ಕಿ.ಮೀ. ದಾರಿ ಸುಗಮವಾಗಿದೆ. ಶಂಕುಸ್ಥಾಪನೆಯ ವೇಳೆ ಈ ಸೇತುವೆಗೆ ₹28 ಕೋಟಿ ಅನುದಾನ ಬೇಕಾಗಿತ್ತು. ಆದರೆ, ಇದರ ವೆಚ್ಚ ₹35 ಕೋಟಿಗೆ ವಿಸ್ತರಣೆಯಾಗಿದೆ. ನಾನು ಇದನ್ನು ಬಹಳ ದೊಡ್ಡ ಅಭಿವೃದ್ಧಿ ಕೆಲಸ ಅಂತ ಹೇಳಲ್ಲ. ಆದರೆ ಅಗತ್ಯವಾಗಿ ಬೇಕಾದಂಥ ಸೇತುವೆಯನ್ನು ನಮ್ಮ ಸರ್ಕಾರ ಮಾಡಿಕೊಟ್ಟಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದರು.ಗ್ಯಾರಂಟಿಗಳಿಂದ ಸರ್ಕಾರದ ಬಳಿ ಹಣವಿಲ್ಲ ಎಂದು ವಿರೋಧ ಪಕ್ಷದವರು ಟೀಕಿಸುತ್ತಿದ್ದಾರೆ. ಆದರೆ, ನಮ್ಮ ಅಭಿವೃದ್ಧಿಯ ಪಯಣ ನಿರಂತರವಾಗಿ ಸಾಗಿದೆ. ಉತ್ತರ ಕನ್ನಡ ಜಿಲ್ಲೆಗೆ 2,954 ಕೋಟಿ ರೂ.ಗಳನ್ನು ಇಲ್ಲಿವರೆಗೆ ಗ್ಯಾರಂಟಿ ಯೋಜನೆಗಳಿಗೆ ವ್ಯಯಿಸಲಾಗಿದೆ. ರಾಜ್ಯದಲ್ಲಿ ಸುಮಾರು 1,18,000 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಲಾಗಿದೆ. ಬಿಜೆಪಿಯವರು ನಮ್ಮ ಜನಪರ ಯೋಜನೆಗಳನ್ನು ಟೀಕಿಸುತ್ತಾ, ಅಭಿವೃದ್ಧಿಯಾಗುತ್ತಿಲ್ಲವೆಂದು ದೂರುತ್ತಿದ್ದಾರೆ. ಆದರೆ, ಬಿಜೆಪಿಯವರು ತಮ್ಮ ಅವಧಿಯಲ್ಲಿ ಇಲ್ಲಿನ ಸೇತುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲಿಲ್ಲ ಎಂದು ದೂರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಇನ್ನೂ 1 ವರ್ಷ ಸಲೀಂ ರಾಜ್ಯ ಪೊಲೀಸ್ ಬಾಸ್‌
ಸಂಪುಟ ಪುನಾರಚನೆ ಸರ್ಕಸ್; ಶಾಸಕರು- ಸುರ್ಜೇವಾಲ ಭೇಟಿ