ಕೆಪಿಎಸ್ ಆವರಣದಲ್ಲಿ ಕಿರು ಅರಣ್ಯ ನಿರ್ಮಿಸಲು ಮುಂದಾದ ಸ್ವಯಂ ಹಸಿರು ಸೇನೆ

KannadaprabhaNewsNetwork |  
Published : Aug 19, 2026, 01:45 AM IST
ಫೋಟೋ ಶೀರ್ಷಿಕೆ...ಚೇಳೂರು ಕೆಪಿಎಸ್ ಶಾಲಾ ಆವರಣದಲ್ಲಿ ಮಿಯಾವಾಕಿ ಪದ್ಧತಿಯಲ್ಲಿ ಕಿರು ಅರಣ್ಯ ನಿರ್ಮಿಸಲು ಉದ್ದೇಶಿಸಿರುವ ಸ್ಥಳವನ್ನು ಸ್ವಯಂ ಹಸಿರು ಸೇನೆ ತಂಡ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಪರಿಶೀಲಿಸಿದರು.ಫೋಟೋ ಶೀರ್ಷಿಕೆ...ಚೇಳೂರು ಕೆಪಿಎಸ್ ಶಾಲಾ ಆವರಣದಲ್ಲಿ ಕಿರು ಅರಣ್ಯ ನಿರ್ಮಿಸುವ ಕುರಿತು ಸ್ವಯಂ ಹಸಿರು ಸೇನೆ ತಂಡದ ಸದಸ್ಯರು ಹಾಗೂ ಶಾಲಾ ಸಿಬ್ಬಂದಿ ಚರ್ಚಿಸಿದರು. | Kannada Prabha

ಸಾರಾಂಶ

ಕಂದಾಯ ನಿರೀಕ್ಷಕ ಈಶ್ವರ್ ಅವರ ಆಹ್ವಾನದ ಮೇರೆಗೆ ಸ್ವಯಂ ಹಸಿರು ಸೇನೆ ತಂಡವು ಕೆಪಿಎಸ್ ಶಾಲಾ ಆವರಣಕ್ಕೆ ಭೇಟಿ ನೀಡಿದ್ದು, ಶಾಲಾ ಸಿಬ್ಬಂದಿಯೂ ಯೋಜನೆಗೆ ಆಸಕ್ತಿ ತೋರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚೇಳೂರು

ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ಮಿಯಾವಾಕಿ ಪದ್ಧತಿಯಲ್ಲಿ ಕಿರು ಅರಣ್ಯ ನಿರ್ಮಿಸಲು ಚಿಕ್ಕಬಳ್ಳಾಪುರ ಜಿಲ್ಲಾ ಸ್ವಯಂ ಹಸಿರು ಸೇನೆ ಮುಂದಾಗಿದೆ. ಶಾಲಾ ಆವರಣದಲ್ಲಿ 30×30 ಅಡಿ ಜಾಗದಲ್ಲಿ ಕಿರು ಅರಣ್ಯ ನಿರ್ಮಿಸುವ ಉದ್ದೇಶದಿಂದ ಸ್ವಯಂ ಹಸಿರು ಸೇನೆ ತಂಡದ ಸದಸ್ಯರು ಸ್ಥಳ ಪರಿಶೀಲನೆ ನಡೆಸಿದರು.

ಈ ಕುರಿತು ಮಾತನಾಡಿದ ಸೇನೆ ಸದಸ್ಯ ಮಧು, ಕಡಿಮೆ ಜಾಗದಲ್ಲಿಯೇ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಕಿರು ಅರಣ್ಯ ನಿರ್ಮಿಸುವ ವಿಧಾನವೇ ಮಿಯಾವಾಕಿ ಪದ್ಧತಿಯಾಗಿದೆ. ಜಪಾನ್‌ನ ಸಸ್ಯಶಾಸ್ತ್ರಜ್ಞ ಅಕಿರಾ ಮಿಯಾವಾಕಿ ಅಭಿವೃದ್ಧಿಪಡಿಸಿದ ಈ ವಿಧಾನವನ್ನು ಅಳವಡಿಸಿಕೊಂಡು ಕಡಿಮೆ ಜಾಗದಲ್ಲಿಯೇ ದಟ್ಟವಾದ ಹಸಿರು ಪ್ರದೇಶವನ್ನು ನಿರ್ಮಿಸಬಹುದು ಎಂದು ತಿಳಿಸಿದರು.

10×10 ಅಡಿ ಸೇರಿದಂತೆ ಸಣ್ಣ ಜಾಗದಲ್ಲಿಯೂ ಈ ವಿಧಾನವನ್ನು ಅಳವಡಿಸಿಕೊಂಡು ಕಿರು ಅರಣ್ಯ ನಿರ್ಮಿಸಲು ಸಾಧ್ಯವಿದೆ. ವಿವಿಧ ಜಾತಿಯ ಗಿಡಗಳನ್ನು ಹತ್ತಿರ ಹತ್ತಿರ ನೆಡುವುದರಿಂದ ಅವುಗಳ ಬೆಳವಣಿಗೆಗೆ ಪೈಪೋಟಿ ಉಂಟಾಗಿ ವೇಗವಾಗಿ ಬೆಳೆಯಲು ಸಹಕಾರಿಯಾಗುತ್ತದೆ.

ಇದರಿಂದ ಕೆಲವೇ ವರ್ಷಗಳಲ್ಲಿ ಸಣ್ಣ ಜಾಗವು ದಟ್ಟವಾದ ಹಸಿರು ಪ್ರದೇಶವಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು- ಮೂರು ಕಡೆ ಇದೇ ಮಾದರಿಯಲ್ಲಿ ಕಿರು ಅರಣ್ಯಗಳನ್ನು ನಿರ್ಮಿಸಲಾಗಿದ್ದು, ಉತ್ತಮ ಫಲಿತಾಂಶ ದೊರೆತಿದೆ. ಶಾಲಾ ಆವರಣಗಳು, ಗ್ರಾಮಗಳು ಹಾಗೂ ಲಭ್ಯವಿರುವ ಕಡಿಮೆ ಜಾಗಗಳಲ್ಲಿ ಮಿಯಾವಾಕಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಬಹುದು. ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಹಸಿರು ಪರಿಸರದ ಅನುಭವದ ಜತೆಗೆ ಶುದ್ಧ ಗಾಳಿಯ ವಾತಾವರಣವೂ ದೊರೆಯಲಿದೆ ಎಂದು ಹೇಳಿದರು.

ಕಂದಾಯ ನಿರೀಕ್ಷಕ ಈಶ್ವರ್ ಅವರ ಆಹ್ವಾನದ ಮೇರೆಗೆ ಸ್ವಯಂ ಹಸಿರು ಸೇನೆ ತಂಡವು ಕೆಪಿಎಸ್ ಶಾಲಾ ಆವರಣಕ್ಕೆ ಭೇಟಿ ನೀಡಿದ್ದು, ಶಾಲಾ ಸಿಬ್ಬಂದಿಯೂ ಯೋಜನೆಗೆ ಆಸಕ್ತಿ ತೋರಿಸಿದ್ದಾರೆ.

ಮುಂದಿನ ದಿನಗಳಲ್ಲಿ ಗಿಡಗಳನ್ನು ನೆಟ್ಟು ಕಿರು ಅರಣ್ಯ ನಿರ್ಮಿಸುವ ಕಾರ್ಯ ಕೈಗೊಳ್ಳಲಾಗುವುದು. ಶಾಲಾ ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಕುರಿತು ಅರಿವು ಮೂಡಿಸುವುದರ ಜತೆಗೆ ಶಾಲಾ ಆವರಣವನ್ನು ಹಸಿರುಮಯವಾಗಿಸಲು ಇದು ಸಹಕಾರಿಯಾಗಲಿದೆ ಎಂದು ಮಧು ತಿಳಿಸಿದರು.

ಸ್ವಯಂ ಹಸಿರು ಸೇನೆ ಉಪಾಧ್ಯಕ್ಷ ರಂಜಿತ್ ಕುಮಾರ್, ಕಾರ್ಯದರ್ಶಿ ಶಮಂತ್, ಕಂದಾಯ ನಿರೀಕ್ಷಕ ಈಶ್ವರ್, ಶಿರಸ್ತೇದಾರ ಸತೀಶ್, ಗ್ರಾಮ ಆಡಳಿತ ಅಧಿಕಾರಿ ಅನಿತಾ, ಕೆಪಿಎಸ್ ಶಾಲೆಯ ಶಿಕ್ಷಕ ವೆಂಕಟರಮಣಪ್ಪ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖರ್ಗೆ ಭಾಷಣ ಮಾಡಿದ ಸ್ಥಳ ಸ್ವಚ್ಛ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ
ನದಿಗೆ ನೀರು ಬಿಡುಗಡೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ