ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜುಲೈ 2 ರಂದು ಬುಧವಾರ ನಂದಿಬೆಟ್ಟದಲ್ಲಿ ನಡೆಯಲಿರುವ ರಾಜ್ಯ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆಯು ಜೂನ್ 19ರ ಸಭೆಯಂತೆ ಮತ್ತೆ ಸ್ಥಳಾಂತರವಾಗದೇ ಜಿಲ್ಲೆಯ ಜನತೆಯ ನಿರೀಕ್ಷೆಗೆ ಮಣೆಹಾಕುವುದೇ ಎಂಬ ಅನುಮಾನ ಮೂಡಿಸಿದೆ. ಸಚಿವ ಸಂಪುಟ ಸಭೆಯೆಂಬುದು ವಿಧಾನೌಧಕ್ಕೆ ಸೀಮಿತವಾದ ಕಾಲವೊಂದಿತ್ತು. ಆದರೆ ಸಾಮಾಜಿಕ ಅಸಮತೋಲನೆ ನಿವಾರಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ವಿಶೇಷ ಸಂಪುಟ ಸಭೆ, ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಇತ್ತೀಚೆಗೆ ಶ್ರೀಕಾರ ಹಾಡಲಾಗಿದೆ. ಚಿಕ್ಕಬಳ್ಳಾಪುರ, ಕೋಲಾರ ಬೆಂಗಳೂರು ವಿಭಾಗದ ಜಿಲ್ಲಾ ಉಸ್ತುವಾರಿ ಸಚಿವರ ಮುತುವರ್ಜಿಯ ಕಾರಣವಾಗಿ ಜಿಲ್ಲೆಯ ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಏರ್ಪಡಿಸಲಾಗಿದೆ.ಸಂಪುಟ ಸಭೆಗೂ ಮುನ್ನವೇ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್, ಕೋಲಾರದ ಭೈರತಿ ಸುರೇಶ್, ಬೆಂಗಳೂರು ಗ್ರಾಮಾಂತರದ ಕೆ.ಹೆಚ್.ಮುನಿಯಪ್ಪ, ಕಂದಾಯ ಸಚಿವ ಕೃಷ್ಣಭೈರೇಗೌಡ, ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಸೇರಿ ಈ ಭಾಗದ ಜನಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರಗಳ ಬೇಡಿಕೆ ಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಮಹಾತ್ಮ ಗಾಂಧೀಜಿ ನಂದಿ ಬೆಟ್ಟದ ಮೆಟ್ಟಿಲುಗಳನ್ನು ಬಳಸಿ ಬೆಟ್ಟವನ್ನು ಹತ್ತಿದ ಕುರುಹಾಗಿ ಬೆಟ್ಟದ ಬಿಡದಲ್ಲಿರುವ ಗ್ರಾಮ ಮೊಡಕು ಹೊಸಹಳ್ಳಿಗೆ ಗಾಂಧಿಪುರ ಎಂದು ಹೆಸರಿಡಲಾಗಿದೆ.ಇಂತಹ ಐತಿಹಾಸಿಕ ಹಿನ್ನೆಲೆ ಇರುವ ನಂದಿ ಗಿರಿಧಾಮದಲ್ಲಿ ಸ್ವಾತಂತ್ರ‍್ಯ ಬಂದಾದ ಮೇಲೆ ಇದೆ ಮೊದಲ ಬಾರಿಗೆ ರಾಜ್ಯ ಸರ್ಕಾರ ವಿಶೇಷ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಜನತೆಯಲ್ಲಿ ಸಂತೋಷ ಮನೆಮಾಡುವಂತೆ ಮಾಡಿದೆ.ನದಿ ನಾಲೆಗಳ ಆಶ್ರಯವಿಲ್ಲದ ಜಿಲ್ಲೆಗೆ ಅಂತರ್ಜಲವೇ ಆಧಾರವಾಗಿದೆ. ಇದನ್ನು ಮನಗಂಡು ಶಾಶ್ವತ ನೀರಾವರಿ ಯೋಜನೆ ಘೋಷಣೆ ಮಾಡಿ ಕಾರ್ಯಗತ ಮಾಡುವ ನಿಟ್ಟಿನಲ್ಲಿ ಸಭೆ ಒಮ್ಮತದ ತೀರ್ಮಾನ ಕೈಗೊಳ್ಳಲಿ ಎಂಬುದೇ ಜಿಲ್ಲೆಯ ಜನತೆಯ ಆಶಯವಾಗಿದೆ. ಹೆಚ್.ಎನ್.ವ್ಯಾಲಿ 3ನೇ ಹಂತದ ಶುದ್ಧೀಕರಣ, ಎತ್ತಿನಹೊಳೆ ಯೋಜನೆ, ಹೂ ಮಾರುಕಟ್ಟ ನಿರ್ಮಾಣ, ಜಿಲ್ಲೆಯ ಏಕೈಕ ಸರ್ಕಾರಿ ಮೆಡಿಕಲ್ ಕಾಲೇಜನ್ನು ಅಭಿವೃದ್ಧಿ ಕುರಿತಂತೆ ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಳ್ಳಬೇಕಿದೆ.