- ಜಿಲ್ಲೆಯ ವಿವಿಧೆಡೆ 27 ಚೆಕ್ ಪೋಸ್ಟ್ ತೆರೆಯಲಾಗಿದೆ । ಜಂಟಿ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಡಾ. ವಿಕ್ರಂ ಅಮಟೆ ಮಾಹಿತಿ
ಇದೇ ಡಿ. 24 ರಿಂದ 26 ರವರೆಗೆ ನಡೆಯಲಿರುವ ದತ್ತಜಯಂತಿ ಕಾರ್ಯಕ್ರಮಕ್ಕೆ ಮುಜರಾಯಿ ಇಲಾಖೆ ನಿರ್ದೇಶನದಂತೆ ಹಿಂದಿನ ಬಾರಿಯಂತೆ ಈ ವರ್ಷವೂ ಅವಕಾಶ ಕಲ್ಪಿಸಲಾಗುವುದೆಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲಭೂತ ಸೌಕರ್ಯ ಕಲ್ಪಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ದೃಷ್ಠಿಯಿಂದ ಈ ಮೂರು ಆಯಾಮಗಳ ಆಧಾರದಲ್ಲಿ ಜಿಲ್ಲಾಡಳಿತ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.ದತ್ತಪೀಠ ಮುಜರಾಯಿ ಸಂಸ್ಥೆ ಆಗಿರುವುದರಿಂದ ವ್ಯವಸ್ಥಾಪನಾ ಸಮಿತಿಯ ನೇತೃತ್ವದಲ್ಲಿ ಮುಜರಾಯಿ ಇಲಾಖೆ ನಿರ್ದೇಶನದಂತೆ ದತ್ತಜಯಂತಿಗೆ ಅನುಮತಿ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಎಲ್ಲಾ ಧರ್ಮಗಳ ಮುಖಂಡರು ಹಾಗೂ ಸಂಘಟನೆಗಳ ಮುಖಂಡರೊಂದಿಗೆ ಜಿಲ್ಲಾಡಳಿತ ಚರ್ಚೆ ನಡೆಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಶಾಂತಿ ಹಾಗೂ ವೈಭವಯುತವಾಗಿ ದತ್ತಜಯಂತಿ ಆಚರಣೆಗೆ ಸಹಕಾರ ನೀಡಲು ಎಲ್ಲರೂ ಒಪ್ಪಿಗೆ ನೀಡಿದ್ದಾರೆ ಎಂದರು.
ದತ್ತ ಜಯಂತಿ ಸಂದರ್ಭದಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಹಾಗೂ ಕಾನೂನು ಪಾಲನೆ ದೃಷ್ಠಿಯಿಂದ ಮತ್ತು ಕ್ರಿಸ್ಮಸ್ ಪ್ರಯುಕ್ತ ರಜಾ ದಿನಗಳು ಹೆಚ್ಚು ಇರುವುದರಿಂದ ಜನಸಂದಣಿ ತಡೆಯುವ ಉದ್ದೇಶದಿಂದ ಒಂದು ವಾರಗಳ ಕಾಲ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು. ಕಟ್ಟುನಿಟ್ಟಿನ ಕ್ರಮ:
ಜಿಲ್ಲೆಯ ಗಡಿಭಾಗ ಸೇರಿದಂತೆ ಅಗತ್ಯವಿರುವ 27 ಸ್ಥಳಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ನಗರದಿಂದ ದತ್ತಪೀಠ ದವರೆಗೂ ಬೃಹತ್ ಪ್ರಮಾಣದ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಿಂದಿನ ವರ್ಷಗಳಿ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಿಬ್ಬಂದಿ ನಿಯೋಜಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಿ.ಸಿ ಟಿವಿಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ ಉಪಸ್ಥಿತರಿದ್ದರು. 15 ಕೆಸಿಕೆಎಂ 4ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿಸಿ ಮೀನಾ ನಾಗರಾಜ್ ಹಾಗೂ ಎಸ್ಪಿ ಡಾ. ವಿಕ್ರಂ ಅಮಟೆ ಅವರು ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.