ಯುವ ಕಲಾವಿದರ ಪ್ರತಿಭೆಗೆ ರಂಗೋತ್ಸವವೇ ನಿಜವಾದ ವೇದಿಕೆ

KannadaprabhaNewsNetwork |  
Published : Apr 17, 2026, 01:30 AM IST
 ಹಾಸನ ಲೋಕಾಯುಕ್ತ ಡಾ. ಬಿ.ಎನ್. ನಂದಿನಿ, ಬುಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್, ರಂಗಕಲಾ ಪೋಷಕ ಶಾಡ್ರಾಕ್, ನಿರ್ದೇಶಕ ಧನಂಜಯ ದಿಯಾನ್, ಸೆಂಟ್ರಲ್ ಕಾಮರ್ಸ್ ಕಾಲೇಜಿನ ಅಧ್ಯಕ್ಷೆ ಪರಿಮಳ ಮಹೇಶ್, ಪ್ರಾಂಶುಪಾಲ ಚಂದ್ರಕಾಂತ ಪಡೆಸೂರು, ಕಾದಂಬರಿಕಾರ ಜಿ. ಪ್ರಕಾಶ್ ಸೇರಿದಂತೆ ಕಲಾಭಿಮಾನಿಗಳು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಪ್ರತಿದಿನವೂ ವಿಭಿನ್ನ ಕಥಾಹಂದರಗಳೊಂದಿಗೆ ಪ್ರೇಕ್ಷಕರ ಮನಸ್ಸನ್ನು ಕಟ್ಟಿ ಹಿಡಿಯುವ ನಾಟಕಗಳು ಪ್ರದರ್ಶನಗೊಂಡವು. ಕಾರ್ಯಕ್ರಮವು ಕೇವಲ ಮನರಂಜನೆಗೆ ಸೀಮಿತವಾಗದೇ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಚಿಂತನೆಗೆ ಪ್ರೇರೇಪಿಸುವ ಸಂದೇಶಗಳನ್ನು ಹೊತ್ತಿತ್ತು. ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮೂರು ದಿನದ ಶಿಬಿರದ ಅಧ್ಯಕ್ಷತೆವಹಿಸಿ ಮಾತನಾಡಿ, ಹಾಸನ ಜಿಲ್ಲೆಯ ಯುವ ಪ್ರತಿಭೆಗಳು ರಂಗಭೂಮಿಯಲ್ಲಿ ತೋರಿದ ಶ್ರಮ ಮತ್ತು ಸಮರ್ಪಣೆ ಶ್ಲಾಘನೀಯವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದಲ್ಲಿರುವ ಹಾಸನಾಂಬ ಕಲಾಕ್ಷೇತ್ರವು ಮೂರು ದಿನಗಳ ಕಾಲ ನಿಜಾರ್ಥದಲ್ಲಿ ರಂಗಭೂಮಿಯ ಹಬ್ಬಕ್ಕೆ ಸಾಕ್ಷಿಯಾದಂತಾಯಿತು. ನಾಟ್ಯ ವೈಭವ, ರಂಗಸಿರಿ, ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ನಾಟ್ಯ ವೈಭವ- ಕಾಲೇಜು ರಂಗ, ಯುವ ಮನಸ್ಸುಗಳ ರಂಗ ಸುಗ್ಗಿ ಎಂಬ ನಾಟಕೋತ್ಸವವು ಕಲಾಭಿಮಾನಿಗಳ ಅಪಾರ ಮೆಚ್ಚುಗೆಗೆ ಪಾತ್ರವಾಗಿ ಯಶಸ್ವಿಯಾಗಿ ಗುರುವಾರದಂದು ಸಮಾಪ್ತಿಯಾಯಿತು.ಈ ಮೂರು ದಿನಗಳ ನಾಟಕೋತ್ಸವದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಕಲಾತ್ಮಕ ಪ್ರತಿಭೆಯನ್ನು ಅನಾವರಣಗೊಳಿಸಿದ್ದು, ಪ್ರತಿದಿನವೂ ವಿಭಿನ್ನ ಕಥಾಹಂದರಗಳೊಂದಿಗೆ ಪ್ರೇಕ್ಷಕರ ಮನಸ್ಸನ್ನು ಕಟ್ಟಿ ಹಿಡಿಯುವ ನಾಟಕಗಳು ಪ್ರದರ್ಶನಗೊಂಡವು. ಕಾರ್ಯಕ್ರಮವು ಕೇವಲ ಮನರಂಜನೆಗೆ ಸೀಮಿತವಾಗದೇ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಚಿಂತನೆಗೆ ಪ್ರೇರೇಪಿಸುವ ಸಂದೇಶಗಳನ್ನು ಹೊತ್ತಿತ್ತು. ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮೂರು ದಿನದ ಶಿಬಿರದ ಅಧ್ಯಕ್ಷತೆವಹಿಸಿ ಮಾತನಾಡಿ, ಹಾಸನ ಜಿಲ್ಲೆಯ ಯುವ ಪ್ರತಿಭೆಗಳು ರಂಗಭೂಮಿಯಲ್ಲಿ ತೋರಿದ ಶ್ರಮ ಮತ್ತು ಸಮರ್ಪಣೆ ಶ್ಲಾಘನೀಯವಾಗಿದೆ ಎಂದರು.

ಕಳೆದ ಮೂರು ದಿನಗಳಿಂದ ನಿರಂತರವಾಗಿ ನಡೆದ ನಾಟಕ ಪ್ರದರ್ಶನಗಳು ರಂಗಭೂಮಿಯ ವೈಭವವನ್ನು ಮತ್ತೆ ನೆನಪಿಸಿವೆ. ಹಾಸನ ಜಿಲ್ಲೆ ರಾಜಕೀಯದಾಚೆಗೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ತನ್ನದೇ ಆದ ಗುರುತನ್ನು ಹೊಂದಿದೆ ಎಂಬುದನ್ನು ಈ ನಾಟಕೋತ್ಸವ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಹೇಳಿದರು.

ಮೊದಲ ದಿನ ಜ್ಞಾನಧಾರೆ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ನನ್ನ ಅಂಬೇಡ್ಕರ್ ನಾಟಕವು ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆದಿತು. ಕೋಟಿಗಾನಹಳ್ಳಿ ರಾಮಯ್ಯ ಅವರ ಸಾಹಿತ್ಯ ಮತ್ತು ಬಾಬಾಸಾಹೇಬ್ ಕಾಂಬಳೆ ಅವರ ಸಂಗೀತ ನಿರ್ದೇಶನ ಈ ನಾಟಕಕ್ಕೆ ವಿಶೇಷ ಮೆರಗು ನೀಡಿತು. ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಸಮಾಜ ಪರಿವರ್ತನೆಗೆ ಅವರ ಕೊಡುಗೆಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ ಈ ನಾಟಕ ಪ್ರೇಕ್ಷಕರ ಮನದಲ್ಲಿ ಆಳವಾದ ಪ್ರಭಾವ ಬೀರಿತು. ಎರಡನೇ ದಿನ ಬೆಳಿಗ್ಗೆ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಲೋಕಾಯುಕ್ತರು ಬರುತ್ತಾರೆ ಎಂಬ ನಾಟಕವನ್ನು ಯಶಸ್ವಿಯಾಗಿ ಪ್ರದರ್ಶಿಸಿದರು. ವಿದೇಶಿ ಕೃತಿ ಆಧಾರಿತ ಈ ನಾಟಕವು ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಹಾಸ್ಯಮಯವಾಗಿ ಮತ್ತು ಚಿಂತನೆಗೆ ಪ್ರೇರೇಪಿಸುವ ರೀತಿಯಲ್ಲಿ ನಿರೂಪಿಸಿತು.

ಧನಂಜಯ ದಿಯಾನ್ ಅವರ ನಿರ್ದೇಶನ ಮತ್ತು ಸಂಗೀತ ನಾಟಕವನ್ನು ಇನ್ನಷ್ಟು ಮನೋಜ್ಞಗೊಳಿಸಿತು ಎಂದರು. ಅದೇ ದಿನ ಮಧ್ಯಾಹ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ``ಸರಸತಿಯಾಗಲೊಲ್ಲೆ ನಾಟಕವನ್ನು ಪ್ರದರ್ಶಿಸಿದರು. ಡಾ. ಎಂ. ಭೈರೇಗೌಡ ಅವರ ಸಾಹಿತ್ಯ ಮತ್ತು ಮಂಜು ಸಿರಿಗೆರೆ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ನಾಟಕವು ಸಮಾಜದ ಕೆಲವು ಸೂಕ್ಷ್ಮ ವಿಚಾರಗಳನ್ನು ಪರಿಣಾಮಕಾರಿಯಾಗಿ ಅನಾವರಣಗೊಳಿಸಿತು. ಮೂರನೇ ಹಾಗೂ ಕೊನೆಯ ದಿನ ಸೆಂಟ್ರಲ್ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿಗಳು ಲೇಖಕ ಜಿ. ಪ್ರಕಾಶ್ ಅವರ ಕಾದಂಬರಿಯನ್ನು ಆಧರಿಸಿದ ನನ್ಸಿರಿ ನಾಟಕವನ್ನು ವೇದಿಕೆಗೆ ತಂದರು.

ಧನಂಜಯ ದಿಯಾನ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ನಾಟಕವು ಪ್ರೇಕ್ಷಕರಿಂದ ಭರ್ಜರಿ ಕರತಾಡನ ಪಡೆದುಕೊಂಡಿತು. ಕಥಾಹಂದರ, ಅಭಿನಯ ಮತ್ತು ತಾಂತ್ರಿಕ ವಿನ್ಯಾಸ ಎಲ್ಲವೂ ಒಟ್ಟಾಗಿ ನಾಟಕವನ್ನು ಮತ್ತಷ್ಟು ಮೆರುಗುಗೊಳಿಸಿತು. ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್. ಬಿ. ಮದನ್ ಗೌಡ ಮಾತನಾಡಿ, ಇಂತಹ ನಾಟಕೋತ್ಸವಗಳು ಯುವಕರಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ಹೆಚ್ಚಿಸುವುದರ ಜೊತೆಗೆ ರಂಗಭೂಮಿಯ ಪುನರುಜ್ಜೀವನಕ್ಕೆ ಕಾರಣವಾಗುತ್ತವೆ ಎಂದರು.ಸಾಂಸ್ಕೃತಿಕ ಕ್ಷೇತ್ರಕ್ಕೆ ಹೊಸ ಜೀವ ತುಂಬುವ ಉದ್ದೇಶದಿಂದ ನಾಟ್ಯ ವೈಭವ ಕಾಲೇಜು ರಂಗ, ಯುವ ಮನಸ್ಸುಗಳ ರಂಗ ಸುಗ್ಗಿ ಎಂಬ ಮಹತ್ವಾಕಾಂಕ್ಷಿ ನಾಟಕೋತ್ಸವವನ್ನು ಆಯೋಜಿಸಲಾಗಿದ್ದು, ಮೂರು ದಿನಗಳ ಕಾಲ ನಡೆದ ಈ ರಂಗಮಹೋತ್ಸವವು ಕಲಾಭಿಮಾನಿಗಳಲ್ಲಿ ಈಗಾಗಲೇ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕಟ್ಟಿಸಿದಂತಹ, ಬೆಳೆಸಿದಂತಹ ಇದೆ ಕಲಾಭವನದಲ್ಲಿ ನಾಟಕೋತ್ಸವವನ್ನು ನಡೆಸಿರುವುದು ನೆನಪಿದೆ ಎಂದು ಹಳೆಯ ನೆನಪನ್ನು ಇದೇ ವೇಳೆ ಮೆಲುಕು ಹಾಕಿದರು. ಯುವಕರು ರಂಗಭೂಮಿಯತ್ತ ಹೆಚ್ಚು ಗಮನ ಹರಿಸಿ, ಅದನ್ನು ಇನ್ನಷ್ಟು ಬಲಪಡಿಸಬೇಕು ಎಂದು ಕರೆ ನೀಡಿದರು.

ಈ ಮೂರು ದಿನಗಳ ನಾಟಕೋತ್ಸವವು ಕಲಾಭಿಮಾನಿಗಳಲ್ಲಿ ಭಾರೀ ಸ್ಪಂದನೆ ಮೂಡಿಸಿದ್ದು, ಪ್ರತಿದಿನವೂ ಕಲಾಕ್ಷೇತ್ರ ಜನರಿಂದ ತುಂಬಿ ತುಳುಕಿತು. ವಿದ್ಯಾರ್ಥಿಗಳ ಅಭಿನಯ, ನಿರ್ದೇಶನ ಹಾಗೂ ತಾಂತ್ರಿಕ ನಿರ್ವಹಣೆ ಎಲ್ಲವೂ ಪ್ರಶಂಸೆಗೆ ಪಾತ್ರವಾಯಿತು. ಕೊನೆಯ ದಿನದ ಕಾರ್ಯಕ್ರಮದಲ್ಲಿ ನಿರ್ದೇಶಕ ಧನಂಜಯ ದಿಯಾನ್, ಹಿರಿಯ ಕಲಾವಿದ ಗುಂಡಣ್ಣ. ಮೇಕಪ್ ಹನುಮಂತಣ್ಣ, ಪಿ.ಶಾಡ್ರಾಕ್, ಪ್ರಕಾಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹಾಸನ ಲೋಕಾಯುಕ್ತ ಡಾ. ಬಿ.ಎನ್. ನಂದಿನಿ, ಬುಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್, ರಂಗಕಲಾ ಪೋಷಕ ಶಾಡ್ರಾಕ್, ನಿರ್ದೇಶಕ ಧನಂಜಯ ದಿಯಾನ್, ಸೆಂಟ್ರಲ್ ಕಾಮರ್ಸ್ ಕಾಲೇಜಿನ ಅಧ್ಯಕ್ಷೆ ಪರಿಮಳ ಮಹೇಶ್, ಪ್ರಾಂಶುಪಾಲ ಚಂದ್ರಕಾಂತ ಪಡೆಸೂರು, ಕಾದಂಬರಿಕಾರ ಜಿ. ಪ್ರಕಾಶ್ ಸೇರಿದಂತೆ ಕಲಾಭಿಮಾನಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಯೋಗಾವಕಾಶ ಪಡೆಯಲು ತರಬೇತಿ ಅತ್ಯವಶ್ಯಕ
ಪ್ರೈಡ್‌ ವಿದ್ಯಾರ್ಥಿನಿಯರ ಐತಿಹಾಸಿಕ ಸಾಧನೆ