ಕನ್ನಡಪ್ರಭ ವಾರ್ತೆ ಅರಸೀಕೆರೆ
ಕೋಡಿಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಗುರು ಯೋಗಿ ಪ್ರಭುಕುಮಾರ ಪಟ್ಟಾಧ್ಯಕ್ಷರ 94ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಮಾಜಿ ಪ್ರಧಾನ ಮಂತ್ರಿಗಳಾದ ಇಂದಿರಾಗಾಂಧಿ ಪಿ ವಿ ನರಸಿಂಹರಾವ್ ಸೇರಿದಂತೆ ರಾಜ್ಯ ಹಾಗೂ ದೇಶದ ಪ್ರಮುಖ ರಾಜಕಾರಣಿಗಳು ಮಾತ್ರವಲ್ಲ ಮಠ ಮಂದಿರವನ್ನು ಮುನ್ನಡೆಸುತ್ತಿರುವ ನಮ್ಮಂತ ಅನೇಕ ಮಠಾಧೀಶರಿಗೆ ತಮ್ಮ ನಿಖರ ಭವಿಷ್ಯ ವಾಣಿಯ ಮೂಲಕ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಕೋಡಿಮಠದ ಶ್ರೀಗಳನ್ನು ಮಹಾ ಗುರುಗಳು ಎಂದು ಕರೆಯುವುದರಿಂದ ಅವರಿಗಿಂತ ನಮ್ಮೆಲ್ಲರಿಗೂ ಗೌರವ ಹೆಚ್ಚಾಗುತ್ತದೆ ಎಂದರು.
ಮಾಜಿ ಶಾಸಕ ಕೆ ಪಿ ಪ್ರಭುಕುಮಾರ್ ಮಾತನಾಡಿ, ಕವಲೊಡೆದ ದಾರಿಯಲ್ಲಿ ಸಮಾಜ ಸಾಗುತ್ತಿದ್ದು ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸಮಾಜ ಬಾಂಧವರನ್ನು ಸಂಘಟಿಸುವ ಕೆಲಸವನ್ನು ನಮ್ಮ ಮಠಾಧೀಶರು ಮಾಡಬೇಕಿದೆ. ಇದರ ನೇತೃತ್ವವನ್ನು ಕೊಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿಗಳೇ ವಹಿಸಬೇಕೆಂದು ಮನವಿ ಮಾಡಿದರು.ಮಾಜಿ ಶಾಸಕ ಜಿಎಸ್ ಪರಮೇಶ್ವರಪ್ಪ ಮಾತನಾಡಿ, ನಾಡಿನ ಉದ್ದಗಲಕ್ಕೂ ಭಕ್ತ ವೃಂದವನ್ನು ಕೋಡಿಮಠವು ಹೊಂದಿದ್ದರೂ ಆರ್ಥಿಕವಾಗಿ ದುರ್ಬಲವಾಗಿತ್ತು. ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಪೀಠಾಧ್ಯಕ್ಷರಾದ ಬಳಿಕ ಶ್ರೀ ಮಠವು ಇಂದು ಆರ್ಥಿಕವಾಗಿ ಸದೃಢವಾಗಿ ಬೆಳೆದಿದೆ. ಅಲ್ಲದೆ ಜಾತಿ, ಮತ, ಪಂಥ ಎನ್ನದೆ ನಂಬಿ ಬರುವ ಎಲ್ಲಾ ಭಕ್ತರಿಗೂ ಮಾರ್ಗದರ್ಶನ ನೀಡುತ್ತಾ ದೇಶಾದ್ಯಂತ ಹೆಸರು ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.